ಹಿಜಾಬ್‌ಗೆ ಅನುಮತಿಸುವುದು ವಿದ್ಯಾರ್ಥಿಗಳನ್ನು ವಿವಿಧತೆಗೆ ಪರಿಚಯಿಸಬಹುದು: ಸುಪ್ರೀಂ ಕೋರ್ಟ್‌

"ಇದು ವಿವಿಧತೆಗೆ ತೆರೆದುಕೊಳ್ಳುವ ಅವಕಾಶ ಎಂದು ಯಾರಾದರೂ ಹೇಳಬಹುದು. ನಮ್ಮಲ್ಲಿ ಎಲ್ಲಾ ಸಂಸ್ಕೃತಿ, ಧರ್ಮಗಳ ವಿದ್ಯಾರ್ಥಿಗಳಿದ್ದಾರೆ. ಅವರ ಬಗ್ಗೆ ಸಾಂಸ್ಕೃತಿಕವಾಗಿ ಸಂವೇದನಾಶೀಲರಾಗಿರಿ" ಎಂದ ನ್ಯಾ. ಧುಲಿಯಾ.
Supreme Court, Hijab
Supreme Court, Hijab

ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುವುದರಿಂದ ಬೇರೆ ವಿದ್ಯಾರ್ಥಿಗಳಿಗೆ ವೈವಿಧ್ಯತೆಯ ಪರಿಚಯವಾಗುತ್ತದೆ. ಜೊತೆಗೆ ಸಾಂಸ್ಕೃತಿಕವಾಗಿ ಸಂವೇದನಾಶೀಲರಾಗುವ ಒಂದು ಅವಕಾಶವಾಗಿ ಇದನ್ನು ನೋಡಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ [ಫಾತಿಮಾ ಬುಶ್ರಾ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ನ್ಯಾ. ಹೇಮಂತ್ ಗುಪ್ತಾ ಅವರೊಂದಿಗೆ ವಿಚಾರಣೆ ನಡೆಸಿದ ನ್ಯಾ. ಸುಧಾಂಶು ಧುಲಿಯಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಅನುಮತಿಸುವುದರ ವಿರುದ್ಧದ ವಾದಗಳಿಗೆ ಪರ್ಯಾಯವಾಗಿ ನ್ಯಾ. ಧುಲಿಯಾ "ಇದು ವಿವಿಧತೆಗೆ ತೆರೆದುಕೊಳ್ಳುವ ಅವಕಾಶ ಎಂದು ಯಾರಾದರೂ ಹೇಳಬಹುದು. ನಮ್ಮಲ್ಲಿ ಎಲ್ಲಾ ಸಂಸ್ಕೃತಿ, ಧರ್ಮಗಳ ವಿದ್ಯಾರ್ಥಿಗಳಿದ್ದಾರೆ. ಅವರ ಬಗ್ಗೆ ಸಾಂಸ್ಕೃತಿಕವಾಗಿ ಸಂವೇದನಾಶೀಲರಾಗಿರಿ" ಎಂದರು.

ಶಿಕ್ಷಕರು ಯಾವುದೇ ಪ್ರತ್ಯೇಕತೆಯ ಗೋಡೆಗಳಿಲ್ಲದೆ ಮತ್ತು ಗುರುತಿನ ಪ್ರತಿಪಾದನೆಗಳಿಲ್ಲದೆ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದವನ್ನು ಬಯಸುತ್ತಾರೆ ಎಂದು ಶಿಕ್ಷಕರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಆರ್‌ ವೆಂಕಟರಮಣಿ ಅವರ ಮನವಿಗೆ ನ್ಯಾಯಮೂರ್ತಿ ಧುಲಿಯಾ ಪ್ರತಿಕ್ರಿಯಿಸಿದರು.  

"ನಾನು ವೈಯಕ್ತಿಕ ಅಸ್ಮಿತೆಯ ಪ್ರತಿಪಾದನೆಗಳು ಅಡ್ಡಿಯಾಗುವ ವಾತಾವರಣದಲ್ಲಿ ಕೆಲಸ ಮಾಡುತ್ತೇನೆ. ಅವುಗಳು ಇಲ್ಲದೇ ಇದ್ದಾಗ ಮಾತ್ರ ನೀವು ಅವರನ್ನು ಗೌರವಿಸಲು ಪ್ರಾರಂಭಿಸಬಹುದು. ಶಿಕ್ಷಕರ ಕೈಗಳನ್ನು ಕಟ್ಟಲಾಗುತ್ತದೆ" ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಮತ್ತು ಶಿಕ್ಷಕರು ಸೇರಿದಂತೆ ಎಲ್ಲ ಪ್ರತಿವಾದಿಗಳ ವಿಚಾರಣೆಯನ್ನು ಪೀಠವು ಇಂದು ಪೂರ್ಣಗೊಳಿಸಿತು.

ಇನ್ನು ಕರ್ನಾಟಕ ಸರ್ಕಾರವು ತಾನು ಯಾವುದೇ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ, ಆದರೆ ಶಾಲೆಗಳಲ್ಲಿ ಶಿಸ್ತು ಕಾಪಾಡುವ ಗುರಿಯೊಂದಿಗೆ ಸರಳವಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತನ್ನ ಹಿಂದಿನ ವಾದವನ್ನು ಪುನರುಚ್ಚರಿಸಿತು.

ಕರ್ನಾಟಕದ ಪರವಾಗಿ ಅಡ್ವೊಕೇಟ್ ಜನರಲ್ (ಎಜಿ) ಪ್ರಭುಲಿಂಗ ಕೆ ನಾವದಗಿ ಅವರು ವಾದ ಮಂಡಿಸಿದರು. ಕುರಾನ್‌ನಲ್ಲಿ ಉಲ್ಲೇಖಿಸಿರುವ ಎಲ್ಲವನ್ನೂ ಅಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಅಂತಹ ಊಹೆಯು ಅಪ್ರಾಯೋಗಿಕವಾಗಿದೆ ಎಂದು ಅವರು ವಿವರಿಸಿದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಕೂಡ ಹಿಜಾಬ್ ಮೇಲೆ ಯಾವುದೇ ‘ನಿಷೇಧ ವಿಧಿಸಿಲ್ಲ ಎಂದು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು. "ಧರ್ಮ ನಿರಪೇಕ್ಷ ಸಮವಸ್ತ್ರವನ್ನು ಮಾತ್ರ  ಶಿಫಾರಸು ಮಾಡಬೇಕೆಂದು ಸರ್ಕಾರ ಸೂಚಿಸಿದೆ. ಸರ್ಕಾರ ಯಾವುದೇ ಧಾರ್ಮಿಕ ಚಟುವಟಿಕೆ ನಿಷೇಧಿಸಿಲ್ಲ ಅಥವಾ ಪ್ರಚಾರ ಮಾಡಿಲ್ಲ" ಎಂದು ಅವರು ಹೇಳಿದರು.

ಪ್ರಕರಣದಲ್ಲಿ ಮೇಲ್ಮನವಿದಾರರ ಖಂಡನಾ ವಾದಗಳನ್ನು ನ್ಯಾಯಾಲಯ ನಾಳೆ (ಗುರುವಾರ) ಆಲಿಸಲಿದೆ.

Related Stories

No stories found.
Kannada Bar & Bench
kannada.barandbench.com