ಬಿಐಎಎಲ್‌ ಸರಕು ನಿರ್ವಹಣೆ: ಗುತ್ತಿಗೆ ಮುಂದುವರಿಕೆಗೆ ಅನುಮತಿಸಿದ್ದ ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿದ ವಿಭಾಗೀಯ ಪೀಠ

ಬಿಐಎಎಲ್‌ನಲ್ಲಿ ಸರಕು ನಿರ್ವಹಣೆಯ ಗುತ್ತಿಗೆಯನ್ನು ಮೆಂಜೀಸ್ ಏವಿಯೇಷನ್ ಬೊಬ್ಬಾ (ಬೆಂಗಳೂರು) ಪ್ರೈವೇಟ್ ಲಿಮಿಟೆಡ್‌ಗೆ ನೀಡಲಾಗಿತ್ತು. ಸಂಸ್ಥೆಯ ಗುತ್ತಿಗೆಯ ಅವಧಿ 2023ರ ಮೇ 23ರ ಮಧ್ಯರಾತ್ರಿಗೆ ಕೊನೆಗೊಳ್ಳಬೇಕಿತ್ತು.
Bangalore Airport
Bangalore Airport

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್‌) ಸರಕು ನಿರ್ವಹಣೆಯ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದರೂ ಹಿಂದಿನ ಗುತ್ತಿಗೆದಾರ ಸಂಸ್ಥೆಗೆ ಸೇವೆ ಮುಂದುವರಿಸಲು ಅವಕಾಶ ಕಲ್ಪಿಸಿ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ಪೀಠ ರದ್ದುಪಡಿಸಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ರಾತ್ರಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

Chief Justice P B Varale and Justice M G S Kamal
Chief Justice P B Varale and Justice M G S Kamal

ಪ್ರಕರಣದ ಹಿನ್ನೆಲೆ: ಬಿಐಎಎಲ್‌ನಲ್ಲಿ ಸರಕು ನಿರ್ವಹಣೆಯ ಗುತ್ತಿಗೆಯನ್ನು ಮೆಂಜೀಸ್ ಏವಿಯೇಷನ್ ಬೊಬ್ಬಾ (ಬೆಂಗಳೂರು) ಪ್ರೈವೇಟ್ ಲಿಮಿಟೆಡ್‌ಗೆ ನೀಡಲಾಗಿತ್ತು. ಸಂಸ್ಥೆಯ ಗುತ್ತಿಗೆಯ ಅವಧಿ 2023ರ ಮೇ 23ರ ಮಧ್ಯರಾತ್ರಿಗೆ ಕೊನೆಗೊಳ್ಳಬೇಕಿತ್ತು. ಈ ಮಧ್ಯೆ, ಗುತ್ತಿಗೆ ಮುಂದುವರಿಸಲು ಬಿಐಎಎಲ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಗುತ್ತಿಗೆದಾರ ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಮಂಗಳವಾರ (ಮೇ 23) ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತಲ್ಲದೆ, ಹೊಸ ಗುತ್ತಿಗೆದಾರರಿಗೆ ನೀಡಿರುವ ಆದೇಶವನ್ನು ಅಮಾನತಿನಲ್ಲಿರಿಸಿ ಹಳೆಯ ಗುತ್ತಿಗೆದಾರರ ಸೇವೆಯನ್ನು ಮುಂದುವರಿಸುವಂತೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಬಿಐಎಎಲ್‌ ಮೇಲ್ಮನವಿ ಸಲ್ಲಿಸಿತ್ತು.

ಏಕಸದಸ್ಯ ಪೀಠದ ಆದೇಶ ಅನೂರ್ಜಿತ: ಬಿಐಎಎಲ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು ಏಕಸದಸ್ಯ ಪೀಠ ತನ್ನ ವ್ಯಾಪ್ತಿ ಮೀರಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ಪೀಠವು ಏಕಸದಸ್ಯ ಪೀಠ ನೀಡಿರುವ ಆದೇಶ ಊರ್ಜಿತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು, ಮೇಲ್ಮನವಿಯನ್ನು ಮಾನ್ಯ ಮಾಡಿ ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿದೆ.

Related Stories

No stories found.
Kannada Bar & Bench
kannada.barandbench.com