ಈಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ ಆರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ ಹಿಮಾಚಲ ಪ್ರದೇಶ ವಿಧಾನಸಭಾ ಸ್ಪೀಕರ್ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಪ್ರಕರಣ ಕುರಿತು ಹಿಮಾಚಲ ಪ್ರದೇಶದ ಸ್ಪೀಕರ್ ಕಚೇರಿ ಮತ್ತು ವಿಧಾನಸಭೆ ಕಾರ್ಯದರ್ಶಿಯ ಪ್ರತಿಕ್ರಿಯೆ ಕೇಳಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಮೇ ತಿಂಗಳಲ್ಲಿ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಅನರ್ಹಗೊಂಡ ಶಾಸಕರ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಸ್ಪೀಕರ್ ನಿರ್ಧಾರಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದರು.
"ನಾವು ನೋಟಿಸ್ ನೀಡಬಹುದೇ ಹೊರತು ತಡೆ ನೀಡಲಾಗದು" ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.
ಶೀಘ್ರದಲ್ಲೇ ಉಪಚುನಾವಣೆಗಳು ನಡೆಯಲಿರುವುದರಿಂದ ಪ್ರಕರಣ ಅಷ್ಟರೊಳಗೆ ನಿಷ್ಪ್ರಯೋಜಕವಾಗಲಿದೆ ಎಂದು ಸಾಳ್ವೆ ವಿವರಿಸಿದರು.
ಈ ಮಧ್ಯೆ ಸದನದ ಕಲಾಪಗಳಲ್ಲಿ ಭಾಗವಹಿಸಲು ಶಾಸಕರಿಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿದೆ.
ಹಿಮಾಚಲ ಪ್ರದೇಶ ಸ್ಪೀಕರ್ ಪರವಾಗಿ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ವಿಶೇಷವೆಂದರೆ, ಸಿಂಘ್ವಿ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಅವರ ವಿರುದ್ಧ ಅಡ್ಡಮತದಾನ ಮಾಡಿದ್ದರಿಂದ ರಾಜ್ಯಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು.
"ವಿಧಿ 329 ಅನ್ವಯವಾಗಲಿದ್ದು ನ್ಯಾಯಾಲಯ ಸಾಮಾನ್ಯವಾಗಿ ಚುನಾವಣಾ ಪ್ರಕ್ರಿಯೆ ತಡೆಹಿಡಿಯುವಂತಿಲ್ಲ ಮತ್ತು ಅನರ್ಹತೆಯನ್ನು ಪ್ರಸ್ತಾಪಿಸುವಂತಿಲ್ಲ" ಎಂದು ಸಿಂಘ್ವಿ ವಾದಿಸಿದರು.
ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಆರು ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.
ಚೈತನ್ಯ ಶರ್ಮಾ, ದವೀಂದರ್ ಕುಮಾರ್ (ಭುಟ್ಟೋ), ಇಂದರ್ ದತ್ ಲಖನ್‌ಪಾಲ್, ರಾಜೀಂದರ್ ರಾಣಾ, ರವಿ ಠಾಕೂರ್ ಮತ್ತು ಸುಧೀರ್ ಶರ್ಮಾ ತಮ್ಮ ಅನರ್ಹತೆಯ ವಿರುದ್ಧ ಜಂಟಿ ಅರ್ಜಿ ಸಲ್ಲಿಸಿದ್ದರು.
ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಹರ್ಷವರ್ಧನ್ ಚೌಹಾಣ್ ಅವರು ಸಲ್ಲಿಸಿದ ಅರ್ಜಿಯ ಮೇರೆಗೆ ಫೆಬ್ರವರಿ 29 ರಂದು ಸ್ಪೀಕರ್ ಆರು ಶಾಸಕರನ್ನು ಅನರ್ಹಗೊಳಿಸಿದ್ದರು.
ಇಂದಿನ ವಿಚಾರಣೆ ವೇಳೆ ಭಾರತದ ಚುನಾವಣಾ ಆಯೋಗದ ಪರವಾಗಿ ಹಿರಿಯ ವಕೀಲ ಮಣಿಂದರ್ ಸಿಂಗ್, ವಿಧಾನಸಭೆ ಕಾರ್ಯದರ್ಶಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸ್ ನೀಡಿತು.