ಅಮರಾವತಿ ಆಂಧ್ರ ಪ್ರದೇಶದ ಏಕೈಕ ರಾಜಧಾನಿ, ಮೂರು ರಾಜಧಾನಿಗಳ ವಿಧೇಯಕ ಹಿಂದಕ್ಕೆ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ
ಆಂಧ್ರ ಪ್ರದೇಶಕ್ಕೆ ಮೂರು ಆಡಳಿತಾತ್ಮಕ ರಾಜಧಾನಿಗಳನ್ನು ಮಾಡುವ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಆಂಧ್ರ ಪ್ರದೇಶ ಸರ್ಕಾರವು ಆಂಧ್ರ ಪ್ರದೇಶ ಹೈಕೋರ್ಟ್‌ಗೆ ತಿಳಿಸಿದೆ. ಅಮರಾವತಿ ಆಂಧ್ರ ಪ್ರದೇಶದ ಏಕೈಕ ರಾಜಧಾನಿಯಾಗಿರಲಿದೆ ಎಂದು ಅಡ್ವೊಕೇಟ್ ಜನರಲ್ ಸುಬ್ರಹ್ಮಣ್ಯಂ ಶ್ರೀರಾಮ್ ಸೋಮವಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಈ ಸಂಬಂಧ ವಿಧಾನಸಭೆಯಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಆಂಧ್ರ ಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ವಲಯಗಳ ಸಮಗ್ರ ಅಭಿವೃದ್ಧಿ ಮಸೂದೆ -2020 ಮತ್ತು ಆಂಧ್ರ ಪ್ರದೇಶ ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ (ವಾಪಸ್) ಮಸೂದೆ 2020 ಗಳನ್ನು ರಾಜ್ಯ ಸರ್ಕಾರ ಹಿಂಪಡೆಯಲಿದೆ. ಈ ಮಸೂದೆಗಳಿಗೆ ಕಳೆದ ವರ್ಷದ ಜುಲೈನಲ್ಲಿ ರಾಜ್ಯಪಾಲರು ಅಂಕಿತ ಹಾಕಿದ್ದರು. ಇದರಿಂದ ಕಾರ್ಯಾಂಗದ ರಾಜಧಾನಿಯಾಗಿ ವಿಶಾಖಪಟ್ಟಣಂ, ಶಾಸಕಾಂಗದ ರಾಜಧಾನಿಯಾಗಿ ಅಮರಾವತಿ ಮತ್ತು ನ್ಯಾಯಾಂಗದ ರಾಜಧಾನಿಯಾಗಿ ಕರ್ನೂಲ್ ರೂಪ ತಳೆದಿದ್ದವು. ಈ ಆಕ್ಷೇಪಾರ್ಹವಾದ ಮಸೂದೆಗಳ ವಿಚಾರಣೆಯನ್ನು ಆಂಧ್ರ ಪ್ರದೇಶ ಹೈಕೋರ್ಟ್ ನಡೆಸುತ್ತಿದೆ.