ಸಿಸಿಐ ತನಿಖೆ ಪ್ರಶ್ನಿಸಿ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮೇಲ್ಮನವಿ: ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸಲ್ಲಿಸಿದ್ದ ಮನವಿಯನ್ನು ಜೂನ್‌ 11ರಂದು ನ್ಯಾಯಮೂರ್ತಿ ದಿನೇಶ್‌ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿತ್ತು.
Flipkart, Amazon, Karnataka HC
Flipkart, Amazon, Karnataka HC
Published on

ಸ್ಪರ್ಧಾ ಕಾನೂನು ಉಲ್ಲಂಘನೆ ಮಾಡಿದ ಪ್ರಕರಣ ಕುರಿತಂತೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ ಶುಕ್ರವಾರ ಕಾಯ್ದಿರಿಸಿದೆ. ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಆದೇಶಿಸಿದ್ದ ತನಿಖೆ ಪ್ರಶ್ನಿಸಿ ಇ ಕಾಮರ್ಸ್‌ ದೈತ್ಯ ಕಂಪೆನಿಗಳು ಸಲ್ಲಿಸಿದ್ದ ಅರ್ಜಿಯನ್ನು ಜೂನ್‌ 11ರಂದು ನ್ಯಾಯಾಲಯದ ಏಕಸದಸ್ಯ ಪೀಠ ವಜಾ ಮಾಡಿತ್ತು ಇದನ್ನು ಪ್ರಶ್ನಿಸಿ ಇ ಕಾಮರ್ಸ್‌ ದೈತ್ಯ ಕಂಪೆನಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು.

ಜುಲೈ 2ರ ಒಳಗೆ ಲಿಖಿತ ವಾದ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಸತೀಶ್‌ ಚಂದ್ರ ಶರ್ಮ ಮತ್ತು ನಟರಾಜ್‌ ರಂಗಸ್ವಾಮಿ ಅವರಿದ್ದ ವಿಭಾಗೀಯ ಪೀಠವು ಎಲ್ಲಾ ಪಕ್ಷಕಾರರಿಗೂ ಆದೇಶಿಸಿದೆ.

ತನ್ನ ಆನ್‌ಲೈನ್‌ ವೇದಿಕೆಯಲ್ಲಿ ಸ್ಮಾರ್ಟ್‌ಫೋನ್‌ ಮಾರಾಟಕ್ಕೆ ಸಂಬಂಧಿಸಿದಂತೆ ಸ್ಪರ್ಧಾ ವಿರೋಧಿ ನಡೆ ಅನುಸರಿಸುತ್ತಿರುವುದನ್ನು ತನಿಖೆ ಮಾಡುವಂತೆ ಸಂಸ್ಥೆಯ ಮಹಾ ನಿರ್ದೇಶಕರಿಗೆ ಸಿಸಿಐ ಆದೇಶಿಸಿದ್ದನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಅಮೆಜಾನ್‌ ಪ್ರಶ್ನಿಸಿತ್ತು.

ಇ ಕಾಮರ್ಸ್‌ ದೈತ್ಯ ಕಂಪೆನಿಗಳು ಉಳಿದ ವ್ಯಾಪಾರಿಗಳಿಗೆ ಕುತ್ತು ತರುವ ರೀತಿಯಲ್ಲಿ ಬೆಲೆ ನಿಗದಿ ಮಾಡಿವೆ, ಭಾರಿ ರಿಯಾಯಿತಿ, ಆದ್ಯತೆಯ ಮಾರಾಟಗಾರರ ಪಟ್ಟಿ ಮತ್ತು ವಿಶೇಷ ಪಾಲುದಾರಿಕೆಯಲ್ಲಿ ತೊಡಗಿವೆ ಇತ್ಯಾದಿ ಹಲವು ಆರೋಪಗಳ ಕುರಿತು ಸಿಸಿಐಗೆ ಈ ಹಿಂದೆ ದೆಹಲಿ ವ್ಯಾಪಾರ ಮಹಾಸಂಘ (ಡಿವಿಎಂ) ಮಾಹಿತಿ ನೀಡಿತ್ತು.

ಡಿವಿಎಂ ಸಂಘಟನೆ ಅನೇಕ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳನ್ನು ನಡೆಸುವ ವ್ಯಾಪಾರಿಗಳನ್ನು ಸದಸ್ಯರನ್ನಾಗಿ ಒಳಗೊಂಡಿದ್ದು ಸ್ಮಾರ್ಟ್‌ಫೋನ್‌ ಮತ್ತು ಸಂಬಂಧಿತ ಪರಿಕರಗಳ ವ್ಯಾಪಾರವನ್ನೂ ಅವರು ಅವಲಂಬಿಸಿದ್ದಾರೆ. ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸಲ್ಲಿಸಿದ್ದ ಮನವಿಯನ್ನು ಜೂನ್‌ 11ರಂದು ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿತ್ತು. ಇದನ್ನು ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಪ್ರಶ್ನಿಸಿದ್ದವು. ಕಳೆದ ಒಂದು ವಾರದ ಅವಧಿಯಲ್ಲಿ ಅಮೆಜಾನ್‌, ಫ್ಲಿಪ್‌ಕಾರ್ಟ್‌, ಸಿಸಿಐ ಮತ್ತು ಡಿವಿಎಂ ವಿಭಾಗೀಯ ಪೀಠದ ಮುಂದೆ ತಮ್ಮ ವಾದಗಳನ್ನು ಮಂಡಿಸಿದ್ದವು.

ಇ-ಕಾಮರ್ಸ್‌ ಕಂಪೆನಿಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಉಂಟಾಗುವ ಸರ್ಚ್‌ ಪಕ್ಷಪಾತದಿಂದಾಗಿ ಕೆಲವೇ ಕೆಲವು ಮಾರಾಟಗಾರರಿಗೆ ಆದ್ಯತೆ ದೊರೆಯುತ್ತದೆ. ಎಲ್ಲಾ ಮಾರಾಟಗಾರರಿಗೂ ಸಮಾನ ಅವಕಾಶ ಸಿಗಬೇಕು. ಅದಕ್ಕೆ ತರ್ಕಬದ್ಧ ಮಾನದಂಡಗಳು ಇರಬೇಕು ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮಾಧವಿ ದಿವಾನ್‌ ಹೇಳಿದ್ದರು.

ಇದಲ್ಲದೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಕೆಲವೇ ಕೆಲವು ಮಾರಾಟಗಾರರಿಗೆ ಆದ್ಯತೆ ನೀಡುವುದರಿಂದ ಅವರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲುದಾರರಾಗಿದ್ದಾರೆ. ಹೀಗಾಗಿ ಪೂರೈಕೆ ಹಂಚಿಕೆ ಇತ್ಯಾದಿಗಳನ್ನು ಒಳಗೊಂಡ ಉತ್ಪಾದನಾ ಸರಪಳಿಯಲ್ಲಿ ಅವರು ಭಾಗೀದಾರರಲ್ಲ ಎಂದು ಹೇಳಲಾಗದು ಎಂಬುದಾಗಿ ಅವರು ವಾದಿಸಿದ್ದರು.

ಸ್ಪರ್ಧಾ ವಿರೋಧಿ ವಿಚಾರಗಳನ್ನು ನಿರ್ಬಂಧಿಸಿ, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದಕ್ಕಾಗಿ ಸ್ಪರ್ಧಾ ಕಾಯಿದೆ ಜಾರಿಗೊಳಿಸಲಾಗಿದೆ ಎಂದು ಮಾಧವಿ ಹೇಳಿದರು. “ಯಾವುದನ್ನೂ ಮುಚ್ಚಿಡುವ ಅಗತ್ಯವಿಲ್ಲ ಎಂದಾದ ಮೇಲೆ ತನಿಖೆಗೆ ಭಯಪಡುವ ಅಗತ್ಯವಿಲ್ಲ” ಎಂದು ಕೂಡ ಅವರು ಪ್ರಸ್ತಾಪಿಸಿದರು.

ಅಮೆಜಾನ್‌ ಜಾಲತಾಣದ ಆಲ್ಗರಿದಂ (ಕ್ರಮಾವಳಿ) ಗ್ರಾಹಕರನ್ನು ಅವಲಂಬಿಸಿದೆ. ಉತ್ಪನ್ನಗಳ ಆದ್ಯತಾ ಪಟ್ಟಿ ಗ್ರಾಹಕರನ್ನು ಆಧರಿಸಿದೆ ಎಂದು ಅಮೆಜಾನ್‌ ಹೇಳಿತ್ತು.“ಪಿಪಿಇ ಕಿಟ್‌, ಸ್ಯಾನಿಟೈಜರ್‌ಗಳನ್ನು ಕೂಡ ಯಾವ ಮಾರಾಟಗಾರ ನಿಮ್ಮ ಪ್ರದೇಶಕ್ಕೆ ಬೇಗನೆ ತರುತ್ತಾರೆ ಯಾರು ಅದನ್ನುಉತ್ತಮ ಸ್ಥಿತಿಯಲ್ಲಿ ತಲುಪಿಸುತ್ತಾರೆ ಎಂಬುದನ್ನೆಲ್ಲಾ ಕ್ರಮಾವಳಿ ತಿಳಿಸುತ್ತದೆ…” ಎಂದು ಹೇಳಿತ್ತು.

ಆನ್‌ಲೈನ್‌ ಮಾರುಕಟ್ಟೆ ತನ್ನ ವಿನ್ಯಾಸದ ಕಾರಣಕ್ಕೆ ಸ್ಪರ್ಧೆಯನ್ನು ಉತ್ತೇಜಿಸುವ ಸಾಧನವಾಗಿದೆ ಎಂದು ಮೆಚ್ಚುಗೆ ಸೂಚಿಸಲು ಏಕ ಸದಸ್ಯ ಪೀಠದ ವಿಫಲವಾಗಿದೆ. ಹೀಗಾಗಿ, ಸ್ಪಷ್ಟ ಮತ್ತು ಸಮರ್ಪಕ ಸಾಕ್ಷ್ಯದ ಹೊರತಾಗಿ ಇದನ್ನು ಸ್ಪರ್ಧಾ ವಿರೋಧಿ ಎಂದು ಹೇಳಲಾಗದು ಎಂಬುದಾಗಿ ಅಮೆಜಾನ್‌ ವಾದಿಸಿತ್ತು.

Also Read
ಅಮೆಜಾನ್ ವಿರುದ್ಧದ ಸಿಸಿಐ ತನಿಖೆಯು ಸ್ಪರ್ಧಾ ಕಾಯಿದೆಯ ಉಲ್ಲಂಘನೆ: ಕರ್ನಾಟಕ ಹೈಕೋರ್ಟ್‌ನಲ್ಲಿ ಸುಬ್ರಮಣಿಯಂ ವಾದ

ಫ್ಲಿಪ್‌ಕಾರ್ಟ್‌ ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ “ನಾನು ಯಾರಿಗಾದರೂ ಬಾಡಿಗೆಯಲ್ಲಿ ರಿಯಾಯಿತಿ ನೀಡಿದರೆ, ಇದು ಉತ್ಪಾದನಾ ಪ್ರಮಾಣದಲ್ಲಿನ ಒಪ್ಪಂದ ಹೇಗಾಗುತ್ತದೆ” ಎಂದು ಪ್ರಶ್ನಿಸಿದ್ದರು.

ಕೆಲವು ಸ್ಮಾರ್ಟ್‌ಫೋನ್‌ ಉತ್ಪಾದಕರ ಜೊತೆ ಕೆಲವು ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ರಿಟ್‌ ಮನವಿಯಲ್ಲಿ ಅಮೆಜಾನ್‌ ಉಲ್ಲೇಖಿಸಿದೆ. ಇದರಿಂದ ಅರ್ಥವಾಗುವುದು ಏನೆಂದರೆ ಮಾರಾಟಗಾರರ ಜೊತೆ ಅವರಿಗೆ ಒಪ್ಪಂದವಿದ್ದು, ಈ ಒಪ್ಪಂದದ ವಿಧಾನದ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ಡಿವಿಎಂ ವಾದಿಸಿತ್ತು.

ಇದಲ್ಲದೆ ತಾನೇತಾನಾಗಿ ಮಾರುಕಟ್ಟೆ ಮತ್ತು ಮಾರಾಟಗಾರರ ನಡುವಿನ ಒಪ್ಪಂದ ಲಂಬವಾಗಿದ್ದು ಅದು ದರ ಸರಪಳಿಯ ಭಾಗ ಎಂದು ಜಾಸ್ಪರ್‌ (ಸ್ನ್ಯಾಪ್‌ಡೀಲ್‌) ಸಿಸಿಐ ಹೇಳಿದ್ದನ್ನು ಫ್ಲಿಪ್‌ಕಾರ್ಟ್‌ ಅವಲಂಬಿಸಿದೆ ಎಂಬುದು ಅದರ ವಾದವಾಗಿದೆ.

Kannada Bar & Bench
kannada.barandbench.com