[ಅಮೆಜಾನ್‌ v. ಫ್ಯೂಚರ್‌] ತುರ್ತು ತೀರ್ಪು ಜಾರಿ ಕುರಿತ ದೆಹಲಿ ಹೈಕೋರ್ಟ್‌ ವಿಚಾರಣೆಗಳಿಗೆ ಸುಪ್ರೀಂ ತಡೆ

ಫ್ಯೂಚರ್ ಗ್ರೂಪ್ ಕಂಪೆನಿಗಳು ಮತ್ತು ಕಿಶೋರ್ ಬಿಯಾನಿ ಅವರ ಆಸ್ತಿ ಜಪ್ತಿ ಮಾಡುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ಮಾರ್ಚ್ 22 ರಂದು ತಡೆಹಿಡಿದಿತ್ತು.
Justices Rohinton Nariman, Hrishikesh Roy, BR Gavai
Justices Rohinton Nariman, Hrishikesh Roy, BR Gavai
Published on

ಫ್ಯೂಚರ್ ಸಮೂಹ - ರಿಲಯನ್ಸ್ ಜೊತೆಗಿನ ಒಪ್ಪಂದದ ವಿರುದ್ಧ ತುರ್ತು ತೀರ್ಪು ಜಾರಿಗೊಳಿಸುವ ಸಂಬಂಧ ದೆಹಲಿ ಹೈಕೋರ್ಟ್ ಎದುರಿರುವ ಎಲ್ಲಾ ವಿಚಾರಣೆಗಳನ್ನು ಸುಪ್ರೀಂಕೋರ್ಟ್ ಸೋಮವಾರ ತಡೆಹಿಡಿದಿದೆ.

ಫ್ಯೂಚರ್ ಗ್ರೂಪ್ ಕಂಪೆನಿಗಳು ಮತ್ತು ಕಿಶೋರ್ ಬಿಯಾನಿ ಅವರ ಆಸ್ತಿ ಜಪ್ತಿ ಮಾಡುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ಮಾರ್ಚ್ 22 ರಂದು ತಡೆಹಿಡಿದಿತ್ತು. ಇದನ್ನು ಪ್ರಶ್ನಿಸಿ ಅಮೆಜಾನ್‌ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ರೋಹಿಂಟನ್‌ ಫಾಲಿ ನಾರಿಮನ್‌, ಹೃಷಿಕೇಶ್‌ ರಾಯ್‌ ಮತ್ತು ಬಿ ಆರ್‌ ಗವಾಯಿ ಅವರಿದ್ದ ತ್ರಿಸದಸ್ಯ ಪೀಠ ತಡೆ ನೀಡಿದೆ. ಇದೇ ವೇಳೆ ತಾನು ಆಲಿಸುತ್ತಿರುವ ಪ್ರಕರಣದ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿದೆ.

“ದೆಹಲಿ ಹೈಕೋರ್ಟ್‌ನ ಏಕಸದಸ್ಯ ಮತ್ತು ವಿಭಾಗೀಯ ಪೀಠದ ಎದುರು ನಡೆಯಲಿರುವ ಮುಂದಿನ ವಿಚಾರಣೆಗಳಿಗೆ ತಡೆಯಾಜ್ಞೆ ನೀಡಲಾಗಿದೆ. ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಎಲ್ಲಾ ಮನವಿಗಳನ್ನು ಪೂರ್ಣಗೊಳಿಸಬೇಕಿದೆ” ಎಂದು ಪೀಠ ಆದೇಶದಲ್ಲಿ ಸೂಚಿಸಿದೆ.

ಫ್ಯೂಚರ್ ರಿಟೇಲ್, ಫ್ಯೂಚರ್ ಕೂಪನ್ಸ್‌, ಕಿಶೋರ್ ಬಿಯಾನಿ ಹಾಗೂ ಇತರ ಪ್ರವರ್ತಕರು, ನಿರ್ದೇಶಕರು ತುರ್ತು ಪರಿಹಾರ ತೀರ್ಪನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಮೂರ್ತಿ ಜೆ ಆರ್ ಮಿಧಾ ಅವರಿದ್ದ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಫ್ಯೂಚರ್ ಗ್ರೂಪ್ ಕಂಪನಿಗಳು, ಬಿಯಾನಿ ಮತ್ತು ಇತರ ಪ್ರತಿವಾದಿ ಪಕ್ಷಗಳಿಗೆ 20 ಲಕ್ಷ ರೂ ದಂಡ ವಿಧಿಸಿತ್ತು.

Also Read
ತುರ್ತು ತೀರ್ಪು ಜಾರಿ: ದೆಹಲಿ ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಅಮೆಜಾನ್

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಫ್ಯೂಚರ್‌ ಸಮೂಹ‌ ಕಂಪೆನಿಗಳು ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಏಕಸದಸ್ಯ ಪೀಠದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ತಡೆಹಿಡಿದಿತ್ತು. ಇದರಿಂದಾಗಿ ಅಮೇಜಾನ್‌ ಕಂಪೆನಿ ಸುಪ್ರೀಂಕೋರ್ಟ್‌ ಮೆಟ್ಟಿಲೇರುವಂತಾಗಿತ್ತು.

ಫ್ಯೂಚರ್‌- ರಿಲಯನ್ಸ್‌ ಒಪ್ಪಂದ ಕುರಿತು ಯಥಾಸ್ಥಿತಿಗೆ ಆದೇಶಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಮಾರ್ಚ್ 18 ರಂದು ಮತ್ತೊಂದು ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ತಪ್ಪಾಗಿ ಆಧರಿಸಿದೆ ಎಂದು ಅಮೆಜಾನ್‌ ತನ್ನ ಅರ್ಜಿಯಲ್ಲಿ ತಿಳಿಸಿತ್ತು. ಮಾರ್ಚ್ 18ರಂದು ನೀಡಿದ ಆದೇಶದಲ್ಲಿ ವಿಭಾಗೀಯ ಪೀಠ ಮಾಡಿದ್ದ ಅವಲೋಕನಗಳು ಫ್ಯೂಚರ್‌ ರಿಟೇಲ್‌ಗೆ ಸಂಬಂಧಿಸದಂತೆ ಇವೆಯೇ ವಿನಾ ಉಳಿದವರ ಬಗ್ಗೆ ಇಲ್ಲ ಎಂದು ಅಮೆಜಾನ್‌ ವಾದಿಸಿತ್ತು.

Kannada Bar & Bench
kannada.barandbench.com