ರವಿ ಬೆಳಗೆರೆ ʼಹೇಳಿ ಹೋಗು ಕಾರಣ’ ಕೃತಿ ನಕಲು ಮಾಡಿ ಮಾರಾಟ: ಪ್ರಕರಣ ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಅಮೆಜಾನ್

ರವಿ ಬೆಳಗೆರೆ ಪುತ್ರಿ ಭಾವನಾ ನೀಡಿರುವ ದೂರಿನ ಅನ್ವಯ ಅನ್ವಯ ಕಾಫಿರೈಟ್‌ ಕಾಯಿದೆ ಉಲ್ಲಂಘನೆ ಆರೋಪದ ಅಡಿ ಪ್ರಕರಣ ದಾಖಲಾಗಿದೆ.
Ravi Belagere and Karnataka HC
Ravi Belagere and Karnataka HC
Published on

ಪತ್ರಕರ್ತ ರವಿ ಬೆಳೆಗೆರೆ ರಚಿಸಿರುವ ʼಹೇಳಿ ಹೋಗು ಕಾರಣʼ ಪುಸ್ತಕವನ್ನು ಅನುಮತಿ ಪಡೆಯದೆ ನಕಲು ಮಾಡಿ ಮಾರಾಟ ಮಾಡಿದ ಆರೋಪ ಸಂಬಂಧ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಅಮೆಜಾನ್‌ ಸೆಲ್ಲರ್ಸ್‌ ಸರ್ವೀಸಸ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಪ್ರಕರಣದ ತನಿಖೆಗೆ ತಡೆ ನೀಡುವಂತೆ ಕೋರಿ ಅಮೆಜಾನ್‌ ಸೆಲ್ಲರ್ಸ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.

ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿರುವ ಪೀಠವು ವಿಚಾರಣೆಯನ್ನು ಒಂದು ವಾರ ಮುಂದೂಡಿತು.

ಪತ್ರಕರ್ತ ರವಿ ಬೆಳಗೆರೆ ರಚಿಸಿರುವ ʼಹೇಳಿ ಹೋಗು ಕಾರಣʼ ಕೃತಿಯು 2003ರ ಸೆಪ್ಟೆಂಬರ್‌ನಲ್ಲಿ ಮೊದಲ ಪ್ರಕಟಣೆ ಕಂಡಿತ್ತು. ಈ ಕೃತಿಯ 31ನೇ ಮುದ್ರಣ ಏಪ್ರಿಲ್‌ 2005ರಲ್ಲಿ ಆಗಿದೆ. ಈ ಪುಸ್ತಕದ ಸಂಪೂರ್ಣ ಹಕ್ಕು ಸ್ವಾಮ್ಯವು ರವಿ ಅವರ ಪುತ್ರಿ ಭಾವನಾ ಬೆಳಗೆರೆ ಅವರ ಭಾವನ ಪ್ರಕಾಶನಕ್ಕೆ ಸೇರಿದೆ. ಮುದ್ರಣ ಮಾರಾಟ ಮತ್ತು ವಿತರಣೆ ಮಾಡುವ ಏಕೈಕ ಕಾನೂನು ಬದ್ಧ ಹಕ್ಕು ಪ್ರಕಾಶನಕ್ಕೆ ಸೇರಿದೆ. ಆದರೆ, ಇತ್ತೀಚೆಗೆ ಕೆಲವರು ಮತ್ತು ಅಮೆಜಾನ್‌, ಫ್ಲಿಪ್‌ಕಾರ್ಟ್‌, ಮೀಶೊ ಎಂಬ ಕಂಪನಿಗಳು ಪುಸ್ತಕ ನಕಲಿ ಮಾಡಿ/ಪೈರಸಿ ರೂಪದಲ್ಲಿ ಯಾವುದೇ ಅನುಮತಿ ಪಡೆಯದೇ ತಮ್ಮ ಆಪ್‌ಗಳ ಮೂಲಕ ಅಕ್ರಮವಾಗಿ ರಿಯಾಯಿತಿ ನೆಪದಲ್ಲಿ ಮೂಲ ಬೆಲೆಗಿಂತ (ಪ್ರಸ್ತುತ 350 ರೂಪಾಯಿ) ಕಡಿಮೆ ದರದಲ್ಲಿ 149 ರೂಪಾಯಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಅಕ್ರಮದಿಂದ ಪ್ರಕಾಶನಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದು, ಲೇಖಕರ ಹಕ್ಕುಗಳಿಗೆ ದಕ್ಕೆಯಾಗಿದೆ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಕಾಫಿರೈಟ್‌ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಉಲ್ಲಂಘಿಸಿರುವುದಕ್ಕೆ ಕ್ರಮಕೈಗೊಳ್ಳಬೇಕು ಎಂದು ಭಾವನಾ ಫೆಬ್ರವರಿ 4ರಂದು ದೂರು ನೀಡಿದ್ದರು.

ಇದನ್ನು ಆಧರಿಸಿ ಸುಬ್ರಹ್ಮಣ್ಯಪುರ ಪೊಲೀಸರು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಮೀಶೊ ಕಂಪನಿಗಳ ವಿರುದ್ಧ ಕಾಫಿರೈಟ್‌ ಕಾಯಿದೆ 1957ರ ಸೆಕ್ಷನ್‌ 51(1)(b), 63 ಅಡಿ ಪ್ರಕರಣ ದಾಖಲಿಸಿದ್ದಾರೆ.

Kannada Bar & Bench
kannada.barandbench.com