ಪರ್ಯಾಯ ಸ್ಥಳಕ್ಕೆ ಅಂಬೇಡ್ಕರ್‌ ಪುತ್ಥಳಿ ಸ್ಥಳಾಂತರ; ಅರ್ಜಿದಾರರಿಗೆ ಹೊಸದಾಗಿ ದಾವೆ ಹೂಡಲು ಹೈಕೋರ್ಟ್‌ ಸಲಹೆ

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರಸ್ತೆಯ ಪಕ್ಕಕ್ಕೆ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೇ ಪುತ್ಥಳಿ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಗ್ರಾಮ ಹಿರೇಮೇಗಲಗೆರೆ ಪಂಚಾಯಿತಿ ವತಿಯಿಂದ ಎಸ್‌ಪಿಗೆ ದೂರು ನೀಡಲಾಗಿದೆ ಎಂದ ಅರ್ಜಿದಾರರು.
ಪರ್ಯಾಯ ಸ್ಥಳಕ್ಕೆ ಅಂಬೇಡ್ಕರ್‌ ಪುತ್ಥಳಿ ಸ್ಥಳಾಂತರ; ಅರ್ಜಿದಾರರಿಗೆ ಹೊಸದಾಗಿ ದಾವೆ ಹೂಡಲು ಹೈಕೋರ್ಟ್‌ ಸಲಹೆ
Dr. B R Ambedkar and Karnataka HC

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸ್ಥಾಪಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸಮೀಪದ ಸ್ಥಳಕ್ಕೆ ಡಾ. ಬಿ ಆರ್‌ ಅಂಬೇಡ್ಕರ್ ಯುವ ಸಂಘಟನೆ ಅಧ್ಯಕ್ಷ ರೇವಣ ಸಿದ್ದಪ್ಪ ಅವರು ಸ್ಥಳಾಂತರಿಸುವ ಮೂಲಕ ನ್ಯಾಯಾಲಯದ ಆದೇಶ ಪಾಲಿಸಿದ್ದಾರೆ ಎಂದು ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಇತ್ಯರ್ಥಪಡಿಸಿದೆ.

ಅನಧಿಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ್ದನ್ನು ಆಕ್ಷೇಪಿಸಿ ನೀಲಪ್ಪ ಸೇರಿ ಐವರು ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯ ಪೀಠವು ಪ್ರತಿಮೆ ಸ್ಥಳಾಂತರದ ಬಗ್ಗೆ ಅರ್ಜಿದಾರರು ಆಕ್ಷೇಪಗಳನ್ನು ಹೊಂದಿದ್ದರೆ ಹೊಸ ಮನವಿ ಸಲ್ಲಿಸಬಹುದು ಎಂದು ಸೂಚಿಸಿತು.

2021ರ ಆಗಸ್ಟ್‌ 13ರ ನ್ಯಾಯಾಲಯದ ಆದೇಶದಂತೆ ರೇವಣ ಸಿದ್ದಪ್ಪ ಅವರು ಮಾರ್ಚ್‌ 31ರಂದು ಡಾ. ಅಂಬೇಡ್ಕರ್‌ ಅವರ ಪುತ್ಥಳಿಯನ್ನು ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಫೋಟೊಗಳನ್ನು ಲಗತ್ತಿಸಲಾಗಿದೆ. ಈ ಸಂಬಂಧ ಅರ್ಜಿದಾರರು ಆಕ್ಷೇಪಗಳನ್ನು ಹೊಂದಿದ್ದರೆ ರೇವಣ ಸಿದ್ದಪ್ಪ ಅವರ ವಿರುದ್ಧ ಹೊಸ ದಾವೆ ಹೂಡಬಹುದು. ಇದಕ್ಕಾಗಿ ಮನವಿ ಬಾಕಿ ಉಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪೀಠ ಆದೇಶದಲ್ಲಿ ದಾಖಲಿಸಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು “ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರಸ್ತೆಯ ಪಕ್ಕಕ್ಕೆ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೇ ಪುತ್ಥಳಿ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಗ್ರಾಮ ಹಿರೇಮೇಗಲಗೆರೆ ಪಂಚಾಯಿತಿ ವತಿಯಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದ್ದು, ಕ್ರಮವಹಿಸುವಂತೆ ಮನವಿ ಮಾಡಲಾಗಿದೆ. ಸಮೀಪದಲ್ಲಿ ಖಾಲಿ ಜಾಗವಿಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಅಫಿಡವಿಟ್‌ ಸಲ್ಲಿಸಿದ್ದರೂ ಪುತ್ಥಳಿ ಸ್ಥಳಾಂತರಿಸಲು ಸ್ಥಳ ನೀಡುವಂತೆ ಪಿಡಿಒಗೆ ಒತ್ತಡ ಹಾಕುತ್ತಿದ್ದಾರೆ” ಎಂದರು.

ಆಗ ಪೀಠವು “ಏನು ಮಾಡಲಾಗುತ್ತದೆ. ಇದಕ್ಕಾಗಿ ಹೊಸದಾಗಿ ಪ್ರಕರಣ ದಾಖಲಿಸಿ” ಎಂದು ಅರ್ಜಿದಾರರಿಗೆ ಸೂಚಿಸಿತು. ಕಳೆದ ವಿಚಾರಣೆಯಲ್ಲಿ ಏಪ್ರಿಲ್‌ 1ರ ಒಳಗೆ ಅಂಬೇಡ್ಕರ್‌ ಪ್ರತಿಮೆಯನ್ನು ಸ್ಥಳಾಂತರಿಸಬೇಕು. ತಪ್ಪಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ರೇವಣ ಸಿದ್ಧಪ್ಪ ವಿರುದ್ಧ ಹೈಕೋರ್ಟ್‌ ಗಡುವು ವಿಧಿಸಿತ್ತು.

Also Read
ಅಂಬೇಡ್ಕರ್‌ ಪುತ್ಥಳಿ ಸ್ಥಳಾಂತರಿಸಲು ಏ.1ರ ಗಡುವು ವಿಧಿಸಿರುವ ಹೈಕೋರ್ಟ್‌; ತಪ್ಪಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆ

ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ವಿಚಾರಣೆಯ ಸಂದರ್ಭದಲ್ಲಿ “ನ್ಯಾಯ ಪರಿಪಾಲನೆಯನ್ನು ಅದಮ್ಯವಾಗಿ ನಂಬಿದ್ದ, ಭಾರತ ಸಂವಿಧಾನದ ಕರ್ತೃ ಮಾತ್ರವಲ್ಲದೇ ಮಹಾನ್‌ ಮಾನವತಾವಾದಿಯಾಗಿದ್ದ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಹೆಸರಿನಲ್ಲಿ ರೇವಣ ಸಿದ್ದಪ್ಪ ನೇತೃತ್ವದ ಸಂಘಟನೆಯು ಕಾನೂನುಬಾಹಿರ ಕೃತ್ಯ ಎಸಗಿದೆ” ಎಂದು ಪೀಠ ಹೇಳಿತ್ತು.

ಮಹಾನ್‌ ವ್ಯಕ್ತಿಯ ಅಪೂರ್ಣವಾದ ಪುತ್ಥಳಿ ನಿರ್ಮಿಸುವುದು ಅವರನ್ನು ಅಗೌರವಿಸುವುದಕ್ಕೆ ಸಮನಾಗಿದೆ. “ಅಂಬೇಡ್ಕರ್‌ ಹೆಸರಿನಲ್ಲಿ ಕಾನೂನುಬಾಹಿರ ಕೆಲಸ ಮಾಡುವ ಮೂಲಕ ಮಹಾನ್‌ ವ್ಯಕ್ತಿಗೆ ಯುವ ಸಂಘಟನೆ ಅಗೌರವ ತೋರಿದೆ. ಪ್ರತಿವಾದಿಗಳು ಸಾರ್ವಜನಿಕ ಸ್ಥಳದಲ್ಲಿ ಮಹಾನ್‌ ವ್ಯಕ್ತಿಯ ಅಪೂರ್ಣ ಪುತ್ಥಳಿ ನಿರ್ಮಿಸಿದ್ದಾರೆ” ಎಂದು ಪೀಠ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Related Stories

No stories found.
Kannada Bar & Bench
kannada.barandbench.com