ರಾಜ್ಯದಲ್ಲಿನ ನ್ಯಾಯಾಲಯಗಳು ಹೊರಡಿಸುವ ನೋಟಿಸ್, ಸಮನ್ಸ್‌ಗಳನ್ನು ಇಮೇಲ್ ಮೂಲಕ ಕಳುಹಿಸಲು ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಈ ಸಂಬಂಧ ಹೈಕೋರ್ಟ್ ಕಳುಹಿಸಿದ್ದ ಕರಡು ನಿಯಮಗಳಿಗೆ ಒಪ್ಪಿಗೆ ನೀಡಿ ಫೆಬ್ರವರಿ 17ರಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ರಾಜ್ಯ ಸರ್ಕಾರವು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠಕ್ಕೆ ತಿಳಿಸಿದೆ. ಬೆಂಗಳೂರಿನ ವಕೀಲ ಅನಿರುದ್ಧ್ ಸುರೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಈ ಮಾಹಿತಿ ನೀಡಿದೆ. ಹೊಸ ನಿಯಮಗಳ ಅನ್ವಯ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳು ಇಮೇಲ್ ಮೂಲಕ ನೋಟಿಸ್, ಸಮನ್ಸ್ ಜಾರಿಗೊಳಿಸಬಹುದಾಗಿದೆ.
ಹೈಕೋರ್ಟ್ ನಿಯಮಗಳಿಗೆ ತಿದ್ದುಪಡಿ ಮಾಡುವ ಕುರಿತು ಶಿಫಾರಸ್ಸು ಮಾಡಿರುವುದರ ಸಂಬಂಧ ಫೆಬ್ರವರಿ 25ರ ಒಳಗೆ ವಸ್ತುಸ್ಥಿತಿ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಫೆಬ್ರವರಿ 11ರಂದು ನ್ಯಾಯಾಲಯ ನಿರ್ದೇಶಿಸಿತ್ತು.
ಪ್ರಕರಣದಲ್ಲಿ ಖುದ್ದು ವಾದಿಸಿದ್ದ ಅರ್ಜಿದಾರ ಅನಿರುದ್ಧ್ ಅವರು “ದೆಹಲಿ, ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಇಮೇಲ್‌ನಲ್ಲಿ ನೋಟಿಸ್, ಸಮನ್ಸ್ ಕಳುಹಿಸಲು ಅವಕಾಶ ಮಾಡಿಕೊಡಲಾಗಿದೆ” ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.
ಸಮನ್ಸ್‌ಗಳನ್ನು ಇಮೇಲ್ ಮೂಲಕ ಕಳುಹಿಸಲು ಅನುವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಬೆಂಗಳೂರಿನ ವಾಣಿಜ್ಯ ನ್ಯಾಯಾಲಯದಲ್ಲಿನ ಪ್ರಕರಣಗಳಿಗೆ ಇಮೇಲ್ ಮೂಲಕ ಸಮನ್ಸ್ ಜಾರಿಗೊಳಿಸಲು ನೆರವಾಗುವ ನಿಟ್ಟಿನಲ್ಲಿ ವಾಣಿಜ್ಯ ನ್ಯಾಯಾಲಯ ಅಥವಾ ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಅಥವಾ ಸೂಕ್ತ ಪ್ರಾಧಿಕಾರಕ್ಕೆ ಅಧಿಸೂಚನೆಯ ಮೂಲಕ ಈ ಕುರಿತ ನಿಯಮಗಳನ್ನು ರೂಪಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಸರ್ಕಾರವು ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು ನ್ಯಾಯಾಲಯಕ್ಕೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪೀಠವು ಅರ್ಜಿ ಇತ್ಯರ್ಥಪಡಿಸಿದೆ.