
ವಕೀಲರ ನೋಂದಣಿ ಶುಲ್ಕವನ್ನು ₹750ರಿಂದ ₹25,000ಕ್ಕೆ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಈಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ವಕೀಲರ ಸಮುದಾಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಈ ಪ್ರಸ್ತಾವಿತ ಶುಲ್ಕ ಹೆಚ್ಚಳವು ಕಡಿಮೆ ಆದಾಯ ಹೊಂದಿರುವ ಕುಟುಂಬದ ಕಾನೂನು ಪದವೀಧರರು ಮತ್ತು ವಕೀಲರಿಗೆ ಸಮಸ್ಯೆಯಾಗಿದೆ ಎಂದು ಹಲವರು ವಾದಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ವಕೀಲರ ಹಿತರಕ್ಷಣೆಗಾಗಿ ಇರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಸುಪ್ರೀಂ ಕೋರ್ಟ್ ಗೌರವ್ ಕುಮಾರ್ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಕಳೆದ ಜುಲೈನಲ್ಲಿ ನಿಗದಿಗೊಳಿಸಿರುವುದಕ್ಕಿಂತ ಹೆಚ್ಚಿನ ಶುಲ್ಕ ಸಂಗ್ರಹಿಸುತ್ತಿದೆ.
ವಕೀಲರ ಕಾಯಿದೆ ಸೆಕ್ಷನ್ 24(1)(ಎಫ್)ರ ಅನ್ವಯ ರಾಜ್ಯ ವಕೀಲರ ಪರಿಷತ್ ಮತ್ತು ಬಿಸಿಐ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ₹750 ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಂದ ₹125 ಸಂಗ್ರಹಿಸಬೇಕು ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರ ವಿಭಾಗೀಯ ಪೀಠ ತೀರ್ಪು ನೀಡಿತ್ತು.
ಶುಲ್ಕದ ಬಗ್ಗೆ ತಿಳಿದುಕೊಳ್ಳಲು “ಬಾರ್ ಅಂಡ್ ಬೆಂಚ್” ಕೆಎಸ್‌ಬಿಸಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿತ್ತು. ಕಳೆದ ಜುಲೈನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೂ ಮುನ್ನ ಕೆಎಸ್‌ಬಿಸಿಯಲ್ಲಿನ ವಕೀಲರ ನೋಂದಣಿ ಶುಲ್ಕವು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸುಮಾರು ₹15,500 ಮತ್ತು ಎಸ್‌ಸಿ/ಎಸ್‌ಟಿ ವರ್ಗದವರಿಗೆ ₹12,500 ಇತ್ತು. 2024-25ನೇ ಸಾಲಿನ ನೋಂದಣಿಗೂ ಮುನ್ನ 2024ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅನುಪಾಲಿಸುವ ನಿಟ್ಟಿನಲ್ಲಿ ಕೆಎಸ್‌ಬಿಸಿಯು ನೋಂದಣಿ ಶುಲ್ಕವನ್ನು ಪರಿಷ್ಕರಿಸಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹750 ಮತ್ತು ಎಸ್‌ಸಿ/ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ₹125ಕ್ಕೆ ಇಳಿಸಿದೆ.
ಈಗ ಸುಪ್ರೀಂ ಕೋರ್ಟ್ ನಿಷೇಧದ ಹೊರತಾಗಿಯೂ ಸಾಮಾನ್ಯ ಮತ್ತು ಮೀಸಲು ವಿಭಾಗಗಳ ಕಾನೂನು ಪದವೀಧರರು ಹೆಚ್ಚು ಶುಲ್ಕ ಪಾವತಿಸಬೇಕಾದ ಸ್ಥಿತಿ ಬಂದೊದಗಿದೆ.
ಕೆಎಸ್‌ಬಿಸಿಯಲ್ಲಿ ನೋಂದಣಿ ಮಾಡಿಸಲು ಬಯಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ₹9,930 ಪಾವತಿಸಬೇಕಿದೆ. ಇದರಲ್ಲಿ ₹2,000 ಮುದ್ರಾಂಕ ಶುಲ್ಕ ಮತ್ತು ₹300 ಅರ್ಜಿ ನಮೂನೆ ಶುಲ್ಕ ಸೇರಿದೆ. ಮೀಸಲು ಸಮುದಾಯಗಳ ಅಭ್ಯರ್ಥಿಗಳು ನೋಂದಣಿಯಾಗಲು ₹9,225 ಪಾವತಿಸಬೇಕಿದೆ.
“ವಕೀಲರ ಕಾಯಿದೆಗೆ ಅನುಗುಣವಾಗಿ ಶುಲ್ಕ ವಿಧಿಸಲಾಗುತ್ತಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಿಧಿಸುವ ₹9,880 ರ ಪೈಕಿ ಕೇವಲ ₹750 ಅನ್ನು ಮಾತ್ರ ನೋಂದಣಿ ಶುಲ್ಕವನ್ನಾಗಿ ವಿಧಿಸಲು ಕಾಯಿದೆಯಲ್ಲಿ ಅನುಮತಿಸಲಾಗಿದೆ. ಉಳಿದ ₹6,880 ಐಚ್ಛಿಕ ಶುಲ್ಕವಾಗಿದ್ದು, ಅದನ್ನು ವಕೀಲರ ಕಲ್ಯಾಣಕ್ಕೆ ಬಳಕೆ ಮಾಡಲಾಗುತ್ತದೆ” ಎಂದು ಕೆಎಸ್‌ಬಿಸಿ ತಿಳಿಸಿದೆ.
ಮೀಸಲು ವರ್ಗದ ಅಭ್ಯರ್ಥಿಗಳು ₹125 ನೋಂದಣಿ ಶುಲ್ಕ ಮತ್ತು ಮುದ್ರಾಂಕ ಮತ್ತು ಅರ್ಜಿಯ ಶುಲ್ಕ ಹೊರತಾಗಿ ₹6,800 ಐಚ್ಛಿಕ ಇತರೆ ಶುಲ್ಕವಾಗಿ ಪಾವತಿಸಬೇಕಿದೆ. ಐಚ್ಛಿಕ ಶುಲ್ಕ ಎಂಬುದು ಐಚ್ಛಿಕ ಮಾತ್ರವಾಗಿದ್ದು, ಇತರೆ ಶುಲ್ಕಗಳ ಜೊತೆಗೆ ಪ್ರತಿಯೊಬ್ಬ ಅರ್ಜಿದಾರರು ₹6,800 ಮೌಲ್ಯದ ಡಿಮ್ಯಾಂಡ್ ಡ್ರಾಫ್ಟ್ ಸಲ್ಲಿಸಬೇಕಿದೆ. ಆರ್‌ಟಿಐಗೆ ಉತ್ತರಿಸಿರುವ ಕೆಎಸ್‌ಬಿಸಿಯು 2024ರ ಸೆಪ್ಟೆಂಬರ್ 1ರಿಂದ ನವೆಂಬರ್ 1ರವರೆಗೆ 2,764 ಅರ್ಜಿಗಳನ್ನು ಸ್ವೀಕರಿಸಿದೆ. ಪ್ರತಿಯೊಬ್ಬ ಅರ್ಜಿದಾರನು ₹6,800 ಐಚ್ಛಿಕ ಶುಲ್ಕ ಪಾವತಿಸಿದ್ದಾರೆ. 2025ರ ಜನವರಿ 10ರಂದು ಮತ್ತೆ 450 ಅರ್ಜಿದಾರರು ವಕೀಲರಾಗಿ ನೋಂದಾಯಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಮತ್ತು ಆರ್ಥಿಕ ಅಂತಸ್ತನ್ನು ಮೀರಿ ಎಲ್ಲರೂ ಐಚ್ಛಿಕ ಶುಲ್ಕ ಪಾವತಿಸಿದ್ದಾರೆ.
“ಐಚ್ಛಿಕ ಶುಲ್ಕ ಎಂದು ಹೇಳಲಾಗಿದೆ. ಆದರೆ, ಕೆಎಸ್‌ಬಿಸಿ ಕಚೇರಿಯಲ್ಲಿರುವ ನೋಟಿಸ್‌ನಲ್ಲಿ ಪ್ರತಿಯೊಬ್ಬರೂ ದಾಖಲಾತಿ ಶುಲ್ಕದ ಜೊತೆಗೆ ₹6,880 ಪಾವತಿಸಬೇಕು ಎಂದು ಹೇಳಲಾಗಿದೆ. ಇದನ್ನು ಪ್ರಶ್ನಿಸೋಣ ಎಂದುಕೊಂಡೆ. ಆದರೆ, ನನ್ನ ಹಲವು ಸ್ನೇಹಿತರು ಅಖಿಲ ಭಾರತ ವಕೀಲರ ಪರಿಷತ್ ಪರೀಕ್ಷೆ ಬರೆಯುವ ಯೋಜನೆ ಹೊಂದಿದ್ದು, ಸಮಸ್ಯೆಯಲ್ಲಿ ಸಿಲುಕುವ ಆಸಕ್ತಿ ಹೊಂದಿಲ್ಲ. ಹೀಗಾಗಿ, ನಾನು ಶುಲ್ಕ ಪಾವತಿಸಿದೆ” ಎಂದು ಹೆಸರು ಹೇಳಲು ಇಚ್ಛಿಸದ ಅರ್ಜಿದಾರರೊಬ್ಬರು “ಬಾರ್ ಅಂಡ್ ಬೆಂಚ್”ಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕೆಎಸ್‌ಬಿಸಿ ಅಧ್ಯಕ್ಷ ವಿಶಾಲ್ ರಘು ಅವರು “ಇದುವರೆಗೆ ಯಾರೊಬ್ಬರೂ ಐಚ್ಛಿಕ ಶುಲ್ಕ ಪಾವತಿಸುವುದಿಲ್ಲ ಎಂದು ಹೇಳಿಲ್ಲ. ಐಚ್ಛಿಕ ಶುಲ್ಕ ಪಾವತಿಸುವುದಿಲ್ಲ ಎಂದಾದರೆ ಅವರಿಗೆ ವೈದ್ಯಕೀಯ ಪರಿಹಾರ, ಆರ್ಥಿಕ ಸಮಸ್ಯೆಗಳಾದಾಗ ಪರಿಹಾರ ಮತ್ತು ಸಾವನ್ನಪ್ಪಿದಾಗ ನೀಡುವ ಪರಿಹಾರ ದೊರೆಯುವುದಿಲ್ಲ” ಎಂದಿದ್ದಾರೆ.
ಐಚ್ಛಿಕವಾಗಿ ಪಡೆಯುವ ಶುಲ್ಕವನ್ನು ಸದಸ್ಯರ ಕಲ್ಯಾಣ, ಸಿಬ್ಬಂದಿಯ ವೇತನ ನೀಡಲು ಬಳಕೆ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಲೆಕ್ಕಪತ್ರಗಳು ಇವೆ ಎಂದು ಕೆಎಸ್‌ಬಿಸಿ ಮೂಲಗಳು ತಿಳಿಸಿವೆ.
ಐಚ್ಛಿಕ ಶುಲ್ಕದಲ್ಲಿ ₹2,100 ರಾಜ್ಯ ವಕೀಲರ ಕಲ್ಯಾಣ ನಿಧಿಗೆ ಸಂದಾಯವಾಗಲಿದ್ದು, ₹1,000 ಪರಿಷತ್ ಕಿರಿಯ ವಕೀಲರಿಗೆ ಆಯೋಜಿಸುವ ತರಬೇತಿ ಮತ್ತು ಸಮಾವೇಶಗಳಿಗಾಗಿ ಕೆಎಸ್‌ಬಿಸಿ ಕಾನೂನು ಅಕಾಡೆಮಿಗೆ ಸಂದಾಯವಾಗುತ್ತದೆ. ಉಳಿದಂತೆ ₹3,000 ಬಿಸಿಐ-ವಕೀಲರ ಕಲ್ಯಾಣ ನಿಧಿ (ಎಡಬ್ಲ್ಯುಎಫ್) ಆಜೀವ ಸದಸ್ಯತ್ವ ಶುಲ್ಕವಾಗಿದ್ದು, ಬಿಸಿಐ- ಎಡಬ್ಲ್ಯುಎಫ್ ಒಂದು ಬಾರಿಯ ಚಂದಾದಾರಿಕೆಗೆ ₹300, ಸರ್ಟಿಫಿಕೇಟ್ ಮತ್ತು ಅಂಚೆ ಶುಲ್ಕ ₹100 ಇರಲಿದೆ. ಸದಸ್ಯರಿಗೆ ಡಿಜಿಟಲ್ ಗುರುತಿನ ಚೀಟಿ ನೀಡಲಾಗುತ್ತದೆ. ಅದಕ್ಕಾಗಿ ₹50 ನಿಗದಿಗೊಳಿಸಲಾಗಿದೆ.
ಸಾಮಾನ್ಯ ವರ್ಗಕ್ಕೆ ವಿಧಿಸಲಾಗುವ ₹750 ಮತ್ತು ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಿಧಿಸುವ ₹125 ಅನ್ನು ಕಚೇರಿ ವೆಚ್ಚಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಕೆಎಸ್‌ಬಿಸಿ ಹೇಳಿದೆ.
“ಸುಪ್ರೀಂ ಕೋರ್ಟ್ ತೀರ್ಪು ಮತ್ತು ವಕೀಲರ ಕಾಯಿದೆಗೆ ಅನುಗುಣವಾಗಿ ನೋಂದಣಿ ಶುಲ್ಕ ವಿಧಿಸಲಾಗುತ್ತಿದೆ. ಐಚ್ಛಿಕವಾಗಿ ಸ್ವೀಕರಿಸುತ್ತಿರುವ ಶುಲ್ಕದ ಹಣವನ್ನು ವಕೀಲರಿಗಾಗಿ ಬಳಕೆ ಮಾಡಲಾಗುತ್ತಿದೆ. ಕಚೇರಿ ವೆಚ್ಚಗಳು ಹೆಚ್ಚಿದ್ದರು ಐಚ್ಛಿಕ ಶುಲ್ಕವನ್ನು ಸಿಬ್ಬಂದಿ ವೇತನ ಮತ್ತು ಇತರ ವೆಚ್ಚಗಳಿಗೆ ಬಳಕೆ ಮಾಡುವುದಿಲ್ಲ. ಇದೇ ಕಾರಣಕ್ಕಾಗಿ ಬಿಸಿಐ ಸಹ ನೋಂದಣಿ ಶುಲ್ಕ ಹೆಚ್ಚಿಸುವಂತೆ ಕೋರಿತ್ತು. 1961ರಲ್ಲಿ ವಕೀಲರ ಕಾಯಿದೆ ಅಡಿ ₹750 ನೋಂದಣಿ ಶುಲ್ಕ ನಿಗದಿಗೊಳಿಸಿದೆ. ಅಂದಿನಿಂದ ಬೆಲೆ ಏರಿಕೆ ಮತ್ತು ಬದುಕಿನ ವೆಚ್ಚದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗಿದೆ? 2025ಕ್ಕೆ ಹೋಲಿಕೆ ಮಾಡಿದರೆ 1961ರಲ್ಲಿ ಒಂದು ರೂಪಾಯಿಗೆ ಮಹತ್ವವಿತ್ತು. ಇದೇ ಕಾರಣಕ್ಕಾಗಿ ವಕೀಲರ ಕಾಯಿದೆಗೆ ತಿದ್ದುಪಡಿ ಅಗತ್ಯವಾಗಿದೆ” ಎಂದು ವಿಶಾಲ್ ರಘು ಹೇಳಿದ್ದಾರೆ.
ದಾಖಲೆಗಳ ಪ್ರಕಾರ ಕೆಎಸ್‌ಬಿಸಿಯು ಪ್ರತಿ ತಿಂಗಳು ಕಚೇರಿ ವೆಚ್ಚವಾಗಿ ₹15.7 ಲಕ್ಷ ಖರ್ಚು ಮಾಡುತ್ತದೆ. ಇದರಲ್ಲಿ 20 ಸದಸ್ಯರಿಗೆ ವೇತನಕ್ಕಾಗಿ ₹9,66,554 ವೆಚ್ಚ ಮಾಡುತ್ತಿದೆ. ಇದರ ಜೊತೆಗೆ ವಿದ್ಯುತ್, ಸ್ವಚ್ಛತೆ, ಇಂಟರ್‌ನೆಟ್ ಶುಲ್ಕಗಳು ಪ್ರತ್ಯೇಕವಾಗಿರಲಿವೆ. ಒಂದೇ ದಿನ ನೂರಾರು ವಕೀಲರು ನೋಂದಣಿಯಾಗುವ ದಿನ ಅವರಿಗೆ ವಸತಿ ವ್ಯವಸ್ಥೆ ಮಾಡಬೇಕಾಗುತ್ತದೆ. ಇದಕ್ಕಾಗಿ ಹೈಕೋರ್ಟ್ ಕಟ್ಟಡಕ್ಕೆ ಸೇರಿಕೊಂಡಿರುವ ಪ್ರೆಸ್ ಕ್ಲಬ್ ಇಂಡಿಯಾ ಹಾಲ್ ಅನ್ನು ದಿನಕ್ಕೆ ₹20,000 ಬಾಡಿಗೆಯಂತೆ ಪಡೆಯಲಾಗುತ್ತದೆ. ಕುರ್ಚಿಗಳಿಗೆ ಪ್ರತ್ಯೇಕವಾಗಿ ಬಾಡಿಗೆ ಪಾವತಿಸಬೇಕಿದೆ. ಇದಕ್ಕೆಲ್ಲವೂ ಎಲ್ಲಿಂದ ಹಣ ತರುವುದು?” ಎಂದು ರಘು ಪ್ರಶ್ನಿಸಿದ್ದಾರೆ.
2024ರ ಆಗಸ್ಟ್ 1ರಿಂದ ನವೆಂಬರ್ 1ರವರೆಗೆ ಕೆಎಸ್‌ಬಿಸಿಯು 15 ಸಭೆಗಳನ್ನು ನಡೆಸಿದ್ದು, ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ನೋಂದಣಿ ಶುಲ್ಕ ನಿಗದಿಗೊಳಿಸುವುದಕ್ಕೆ ವಕೀಲರ ಕಾಯಿದೆ ತಿದ್ದುಪಡಿ ಮಾಡಬೇಕು ಎಂದು ಚರ್ಚಿಸಲಾಗಿದೆ ಎಂದು ಕೆಎಸ್‌ಬಿಸಿ ಹೇಳಿದೆ.