Telangana High Court and Amit Shah
Telangana High Court and Amit Shah facebook

ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ: ಕಾಂಗ್ರೆಸ್ಸಿಗರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ತೆಲಂಗಾಣ ಹೈಕೋರ್ಟ್ ಆದೇಶ

ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 3ರಂದು ಹೈದರಾಬಾದ್ ಪೊಲೀಸರು ತೆಲಂಗಾಣ ಕಾಂಗ್ರೆಸ್‌ನ ಹಲವು ಸದಸ್ಯರನ್ನು ಬಂಧಿಸಿದ್ದರು.
Published on

ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರ ನಕಲಿ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ತೆಲಂಗಾಣ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ.

ಈ ಸಂಬಂಧ ಮೇ 3 ರಂದು ಹೊರಡಿಸಿದ ಆದೇಶದಲ್ಲಿ ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ ಅವರು ರಾಜ್ಯ ಮತ್ತು ದೆಹಲಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಆದರೂ ಪ್ರಕರಣದ ತನಿಖೆ ನಡೆಸುವ ರಾಜ್ಯ ಸರ್ಕಾರದ ಹಾದಿಗೆ ತನ್ನ ಆದೇಶ ಅಡ್ಡಿಯಾಗದು ಎಂದು ನ್ಯಾಯಾಲಯ ನುಡಿದಿದೆ.

ಕಾಂಗ್ರೆಸ್ ಕಾರ್ಯಕರ್ತರ ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಹೈದರಾಬಾದ್‌ ಪೊಲೀಸ್ ಆಯುಕ್ತರು ಹಾಗೂ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿದೆ.   

ಶಿಂಕು ಶರಣ್ ಸಿಂಗ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ಪ್ರಶ್ನಿಸಿ ಕಾಂಗ್ರೆಸ್ ಕಾರ್ಯಕರ್ತರಾದ ಮನ್ನೆ ಸತೀಶ್, ಅಸ್ಮಾ ತಸ್ಲೀಮ್, ಅಂಬಲ ಶಿವಕುಮಾರ್, ಪೆಟ್ಟಂ ನವೀನ್, ಕೋಯಾ ಗೀತಾ ಹಗೂ ಪೆಂಡ್ಯಾಲ ವಂಶಿ ಕೃಷ್ಣ ಅರ್ಜಿ ಸಲ್ಲಿಸಿದ್ದರು.

ಬಿಜೆಪಿ ಅಧಿಕಾರದಲ್ಲಿ ಮುಂದುವರಿದರೆ ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು (ಎಸ್‌ಸಿ/ಎಸ್‌ಟಿ) ಮತ್ತು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ರದ್ದುಗೊಳಿಸಲಾಗುವುದು ಎಂಬ ಶಾ ಅವರ ತಿರುಚಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪ ಇವರ ಮೇಲಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 3ರಂದು ಹೈದರಾಬಾದ್ ಪೊಲೀಸರು ತೆಲಂಗಾಣ ಕಾಂಗ್ರೆಸ್‌ನ ಹಲವು ಸದಸ್ಯರನ್ನು ಬಂಧಿಸಿದ್ದರು.

ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದೆದುರು ಹಾಜರುಪಡಿಸಿಸಲಾಗಿತ್ತು ಪ್ರತಿಯೊಬ್ಬರೂ ₹ 10,000 ಮೌಲ್ಯದ ತಲಾ ಎರಡು ಶ್ಯೂರಿಟಿ ನೀಡಬೇಕು. ಮುಂದಿನ ಆದೇಶದವರೆಗೆ ತನಿಖಾಧಿಕಾರಿಗಳೆದುರು ವಾರಕ್ಕೆ ಎರಡು ಬಾರಿ ಹಾಜರಾಗುತ್ತಿರಬೇಕು ಎಂದು ಆದೇಶಿಸಿದ್ದ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು.

Kannada Bar & Bench
kannada.barandbench.com