ವಿವೇಚನಾರಹಿತ ಆದೇಶದ ಮೂಲಕ ಸಂಸ್ಥೆಯೊಂದನ್ನು ಕಪ್ಪುಪಟ್ಟಿಗೆ ಸೇರಿಸಿದ್ದ ರೈಲ್ವೆ ಇಲಾಖೆ ಆದೇಶ ವಜಾಗೊಳಿಸಿದ ಹೈಕೋರ್ಟ್‌

ಸರ್ಕಾರದ ಆಡಳಿತಾತ್ಮಕ ಪ್ರಾಧಿಕಾರಗಳು ಅಥವಾ ಅಧಿಕಾರಿಗಳು ಯಾವುದೇ ಪ್ರಕರಣಗಳಲ್ಲಿ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಸಮರ್ಥ ಹಾಗೂ ಸೂಕ್ತ ಕಾರಣ ನಮೂದಿಸಬೇಕು. ಅದು ಕಾನೂನಾತ್ಮಕವೂ ಮತ್ತು ತರ್ಕ ಬದ್ಧವೂ ಆಗಿರಬೇಕು ಎಂದಿರುವ ನ್ಯಾಯಾಲಯ.
High Court of Karnataka
High Court of Karnataka

“ವಿವೇಚನಾರಹಿತ ಆದೇಶ, ಅಸಮಂಜಸ ಆದೇಶವಾಗಿರುತ್ತದೆ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದ್ದು, ಗುತ್ತಿಗೆದಾರ ಸಂಸ್ಥೆಯೊಂದನ್ನು ಕಪ್ಪುಪಟ್ಟಿಗೆ ಸೇರಿಸಿ ರೈಲ್ವೆ ಇಲಾಖೆ ಹೊರಡಿಸಿದ್ದ ಆದೇಶವನ್ನು ವಜಾ ಮಾಡಿದೆ.

ಬೆಂಗಳೂರಿನ ಕೃಷಿ ಇನ್ಫ್ರಾಟೆಕ್ ಮತ್ತು ಎಂ ಸೂರ್ಯನಾರಾಯಣ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಅವರ ಪೀಠವು ಭಾಗಶಃ ಪುರಸ್ಕರಿಸಿದೆ.

ಅರ್ಜಿದಾರ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿರುವುದಕ್ಕೆ ರೈಲ್ವೆ ಇಲಾಖೆಯು ತನ್ನ ಆದೇಶದಲ್ಲಿ ಸಕಾರಣ ನಮೂದಿಸದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ನ್ಯಾಯಾಲಯವು ಸರ್ಕಾರದ ಆಡಳಿತಾತ್ಮಕ ಪ್ರಾಧಿಕಾರಗಳು ಅಥವಾ ಅಧಿಕಾರಿಗಳು ಯಾವುದೇ ಪ್ರಕರಣಗಳಲ್ಲಿ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಸಮರ್ಥ ಹಾಗೂ ಸೂಕ್ತ ಕಾರಣ ನಮೂದಿಸಬೇಕು. ವಿವೇಚನೆ ಬಳಸಿ ಆದೇಶ ಮಾಡಬೇಕು. ಅದು ಕಾನೂನು ಮತ್ತು ತರ್ಕ ಬದ್ಧವಾಗಿರಬೇಕು. ಇಲ್ಲವಾದರೆ ಆದೇಶಗಳು ಅಸಮಂಜಸ ಮತ್ತು ದಮನಕಾರಿ ನೀತಿಯಾಗಲಿದೆ ಎಂದು ಕಟುವಾಗಿ ನುಡಿದಿದೆ.

ಸಂಸ್ಥೆಯೊಂದನ್ನು ಕಪ್ಪು ಪಟ್ಟಿಗೆ ಸೇರಿಸಿದರೆ ಅದಕ್ಕೆ ಸಮರ್ಥವಾದ ಕಾರಣ ನೀಡಬೇಕು. ಆದೇಶ ಹೊರಡಿಸುವ ಮುನ್ನ ಅದರ ವಾದ, ಮನವಿ ಹಾಗೂ ಆಕ್ಷೇಪಣೆ ಆಲಿಸಬೇಕು ಹಾಗೂ ಕೂಲಂಕಶವಾಗಿ ಪರಿಶೀಲಿಸಬೇಕು. ವಿವೇಚನಾ ರಹಿತವಾಗಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದರೆ, ಅದರ ಆರ್ಥಿಕ ಸ್ಥಿತಿಗತಿಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

ಅಲ್ಲದೇ, ಪ್ರಕರಣವನ್ನು ರೈಲ್ವೆ ಇಲಾಖೆಗೆ ಹಿಂದಿರುಗಿಸಿರುವ ನ್ಯಾಯಾಲಯವು ಅರ್ಜಿದಾರ ಸಂಸ್ಥೆಯ ವಾದ ಆಲಿಸಿ ಹೊಸದಾಗಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿದೆ.

ಅರ್ಜಿದಾರ ಸಂಸ್ಥೆ ಯಶವಂತಪುರ-ಯಲಹಂಕ ರೈಲು ಮಾರ್ಗದಲ್ಲಿ ಬರುವ ಮೇಲ್ಸೇತುವೆಗಳಿಗೆ ಕಬ್ಬಿಣದ ಗಿರ್ಡರ್ ಅಳವಡಿಕೆ ಕಾಮಗಾರಿಯ ಟೆಂಡರ್ ಪಡೆದಿತ್ತು. 2015ರ ಜೂನ್‌ 5ರಂದು ಕಾಮಗಾರಿ ಆರಂಭಿಸಿತ್ತು. 2018ರ ನವೆಂಬರ್ 5ರಂದು ಕಾಮಗಾರಿ ಪೂರ್ಣಗೊಳಿಸಿದ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಇದಾದ ಎರಡು ವರ್ಷಗಳ ನಂತರ 2021ರ ಆಗಸ್ಟ್‌ 10ರಂದು ಅರ್ಜಿದಾರ ಸಂಸ್ಥೆಗೆ ರೈಲ್ವೆ ಇಲಾಖೆ, ನೋಟಿಸ್ ಜಾರಿಗೊಳಿಸಿ ದುರ್ನಡತೆ ಆರೋಪ ಹೊರಿಸಿತ್ತು. ನಂತರ ಸಂಸ್ಥೆಯನ್ನು ಐದು ವರ್ಷಗಳ ಕಾಲ ಕಪ್ಪು ಪಟ್ಟಿಗೆ ಸೇರಿಸಿ 2022ರ ಅಕ್ಟೋಬರ್‌ 17ರಂದು ಆದೇಶಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಸಂಸ್ಥೆಯು ಯಾವುದೇ ಗಂಭೀರವಾದ ಆರೋಪ ಇಲ್ಲದಿದ್ದರೂ ಹಾಗೂ ತಾನು ನೀಡಿದ ಉತ್ತರವನ್ನು ಪರಿಗಣಿಸದೆ ಕಪ್ಪು ಪಟ್ಟಿಗೆ ಸೇರಿಸಿರುವ ರೈಲ್ವೆ ಇಲಾಖೆ ಕ್ರಮ ನ್ಯಾಯಸಮ್ಮತವಾಗಿಲ್ಲ ಎಂದು ಆಕ್ಷೇಪಿಸಿತ್ತು.

Related Stories

No stories found.
Kannada Bar & Bench
kannada.barandbench.com