ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಶನಿವಾರ ವಿಜಯವಾಡದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರಿಗೆ ಚಹಾ ಕೂಟ ಏರ್ಪಡಿಸಿದ್ದರು. ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಮೂರ್ತಿಗಳಾಗಿದ್ದ ರಮಣ ಅವರ ಬಗ್ಗೆ ಅಂದಿನ ಸಿಜೆಐ ಎಸ್ ಎ ಬೊಬ್ಡೆ ಅವರಿಗೆ ದೂರು ನೀಡಿದ ಒಂದು ವರ್ಷದ ಬಳಿಕ ಈ ಔಪಚಾರಿಕ, ಸೌಹಾರ್ದ ಬೆಳವಣಿಗೆ ನಡೆದಿದೆ.
ನಗರದ ಇಂದಿರಾ ಗಾಂಧಿ ಮುನ್ಸಿಪಲ್ ಕಾರ್ಪೊರೇಷನ್ ಸ್ಟೇಡಿಯಂನಲ್ಲಿ ಸಿಜೆಐ ಅವರಿಗೆ ಆತಿಥ್ಯ ನೀಡಿ ಅವರೊಂದಿಗೆ ಕೇಕ್ ಕತ್ತರಿಸಿದರು ಎಂದು ವರದಿಯಾಗಿದೆ. ಜೊತೆಗೆ ಜಗನ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಸಿಜೆಐಗೆ ಪರಿಚಯಿಸಿದರು ಎಂದು ವರದಿಯಾಗಿದೆ.
ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಗನ್ ಅವರು ನ್ಯಾ.ರಮಣ ವಿರುದ್ಧ ಆರೋಪ ಮಾಡಿ 2020ರ ಅಕ್ಟೋಬರ್‌ನಲ್ಲಿ ಅಂದಿನ ಸಿಜೆಐ ಎಸ್ ಎ ಬೊಬ್ಡೆ ಅವರಿಗೆ ಪತ್ರ ಬರೆದಿದ್ದರು. ಪ್ರತಿಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ಪರವಾಗಿ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ನ್ಯಾ. ರಮಣ ನೇಮಕಾತಿ ಮತ್ತು ರೋಸ್ಟರ್‌ನಲ್ಲಿ ತೊಡಗಿದ್ದಾರೆ. ಅಲ್ಲದೆ ನ್ಯಾ. ರಮಣ ಅವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಟಿಡಿಪಿ ನೇತಾರ ಚಂದ್ರಬಾಬು ನಾಯ್ಡು ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಜಗನ್ ಆರೋಪಿಸಿದ್ದರು.
ಆದರೆ ಈ ದೂರಿನ ಕುರಿತಂತೆ ಆಂದ್ರಪ್ರದೇಶ ಹೈಕೋರ್ಟ್ ಖಾರವಾದ ಆದೇಶ ನೀಡಿತು. ಇದು ಹೈಕೋರ್ಟನ್ನು ದುರ್ಬಲಗೊಳಿಸಲು ಜಗನ್ ಆಡಳಿತ ನಡೆಸುತ್ತಿರುವ ಯತ್ನ ಎಂದು ಅದು ಟೀಕಿಸಿತು. ಇತ್ತ ತಾವು ಮಾಡಿದ್ದ ಆರೋಪಗಳನ್ನು ಸಾಬೀತುಪಡಿಸುವುದಕ್ಕಾಗಿ ಜಗನ್ ಅಂದಿನ ಸಿಜೆಐ ಬೊಬ್ಡೆ ಅವರಿಗೆ ಅಫಿಡವಿಟ್ ಸಲ್ಲಿಸಿದ್ದರು. ಆದರೆ ದೂರು ಪರಿಶೀಲಿಸುವುಕ್ಕಾಗಿ ಆಂತರಿಕ ತನಿಖೆ ನಡೆಸಿದ ಸುಪ್ರೀಂಕೋರ್ಟ್ ಅಂತಿಮವಾಗಿ ದೂರನ್ನು ವಜಾಗೊಳಿಸಿತ್ತು.