
ಕಳೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ದೇಶಕ ರಾಮಗೋಪಾಲ್ ವರ್ಮಾ ಅವರಿಗೆ ಆಂಧ್ರ ಪ್ರದೇಶ ಹೈಕೋರ್ಟ್ ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ತಮ್ಮ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಹಕರಿಸಬೇಕು ಮತ್ತು ಅಗತ್ಯವಿದ್ದಾಗ ವಿಚಾರಣೆಗೆ ಲಭ್ಯವಿರಬೇಕು ಎಂಬ ಷರತ್ತಿನ ಮೇರೆಗೆ ವರ್ಮಾ ಅವರಿಗೆ ನ್ಯಾಯಮೂರ್ತಿ ಹರಿನಾಥ್ ಎನ್ ಅವರಿದ್ದ ಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ತೆಲುಗು ದೇಶಂ ಪಕ್ಷದ (ಟಿಡಿಪಿ) ಸದಸ್ಯರೊಬ್ಬರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ವರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದು, ಎಕ್ಸ್ ಖಾತೆಯಲ್ಲಿ ವರ್ಮಾ ನೀಡಿದ್ದ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು.
ಈ ಹೇಳಿಕೆಗಳು ತಮ್ಮ ಪಕ್ಷದ ಹಿತಾಸಕ್ತಿಗೆ ಹಾನಿಕಾರಕ ಎಂಬ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವರ್ಮಾ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಹೇಳಿಕೆಗಳನ್ನು 2023 ಮತ್ತು ಮೇ 2024ರಲ್ಲಿ ವ್ಯೂಹಂ ಚಿತ್ರದ ಪ್ರಚಾರದ ಸಮಯದಲ್ಲಿ ಬಹಳ ಹಿಂದೆಯೇ ನೀಡಿದ್ದರು. ವರ್ಮಾ ವಿರುದ್ಧ ಮಾಡಲಾದ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ವರ್ಮಾ ಪರ ವಕೀಲರು ಪ್ರತಿಪಾದಿಸಿದರು.
ಭಾರತೀಯ ನ್ಯಾಯ ಸಂಹಿತೆ ಮತ್ತು 2000-2008ರ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ರ ಅಡಿಯಲ್ಲಿ ವರ್ಮಾ ಅವರು ಮಾನನಷ್ಟ, ಸಾರ್ವಜನಿಕ ಕಿಡಿಗೇಡಿತನ, ಫೋರ್ಜರಿ ಮತ್ತಿತರ ಅಪರಾಧಗಳನ್ನು ಮಾಡಿದ್ದಾರೆ. ವರ್ಮಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾನಹಾನಿಕರ ವಸ್ತು ವಿಷಯವನ್ನು ಪ್ರಕಟಿಸುವ ಮೂಲಕ ಸೆಕ್ಷನ್ 353ನ್ನು (ಸಾರ್ವಜನಿಕ ಕಿಡಿಗೇಡಿತನ) ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಾರೆ. ತನಿಖೆ ಇನ್ನೂ ಆರಂಭಿಕ ಹಂತದಲ್ಲಿದ್ದು ತನಿಖೆಗೆ ಸಹಕರಿಸುತ್ತಿಲ್ಲವಾದ್ದರಿಂದ ವರ್ಮಾ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಜಾಕ್ಕೆ ಅರ್ಹವಾಗಿದೆ ಎಂದು ರಾಜ್ಯ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದರು.
ವಾದ ಆಲಿಸಿದ ನ್ಯಾಯಾಲಯ ಅಂತಿಮವಾಗಿ ವರ್ಮಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತು. ರಾಮ್ ಗೋಪಾಲ್ ವರ್ಮಾ ಪರ ವಕೀಲ ರಾಜಗೋಪಲ್ಲವನ್ ತಾಯೀ ವಾದ ಮಂಡಿಸಿದರು.