ರಾಜಕೀಯ ರ್‍ಯಾಲಿ, ಸಾರ್ವಜನಿಕ ಸಭೆ, ಸಮಾವೇಶಗಳಲ್ಲಿ ಚಂದ್ರಬಾಬು ನಾಯ್ಡು ಭಾಗವಹಿಸದಂತೆ ಆಂಧ್ರ ಹೈಕೋರ್ಟ್ ನಿರ್ಬಂಧ

ಆದರೆ ಸಾರ್ವಜನಿಕ ಸಮಸ್ಯೆಗಳು ಅಥವಾ ರಾಜ್ಯದ ನೀತಿಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡದಂತೆ ತೆಲುಗು ದೇಶಂ ಪಕ್ಷದ ನಾಯಕನಿಗೆ ನಿರ್ಬಂಧ ವಿಧಿಸಲು ನ್ಯಾಯಾಲಯ ನಿರಾಕರಿಸಿತು.
Chandrababu Naidu and Andhra Pradesh High Court
Chandrababu Naidu and Andhra Pradesh High Court

ಬಹುಕೋಟಿ ರೂಪಾಯಿ ಮೌಲ್ಯದ ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಜಾಮೀನು ಪಡೆದಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜಕೀಯ ರ್‍ಯಾಲಿ, ಸಾರ್ವಜನಿಕ ಮೆರವಣಿಗೆ, ಸಭೆ ಸಮಾರಂಭಗಳಲ್ಲಿ ಭಾಗವಹಿಸದಂತೆ, ಆಯೋಜಿಸದಂತೆ ಆಂಧ್ರಪ್ರದೇಶ ಹೈಕೋರ್ಟ್‌ ಶುಕ್ರವಾರ ನಿರ್ಬಂಧ ವಿಧಿಸಿದೆ [ಶ್ರೀ ನಾರಾ ಚಂದ್ರಬಾಬು ನಾಯ್ಡು ಮತ್ತು ಆಂಧ್ರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ವೈದ್ಯಕೀಯ ಕಾರಣಗಳಿಗಾಗಿ ನಾಯ್ಡು ಅವರಿಗೆ ಅಕ್ಟೋಬರ್ 31 ರಂದು ನಾಲ್ಕು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದ್ದ ನ್ಯಾಯಮೂರ್ತಿ ಟಿ ಮಲ್ಲಿಕಾರ್ಜುನ್ ರಾವ್ ಅವರು ಈಗಾಗಲೇ ವಿಧಿಸಿರುವ ಷರತ್ತುಗಳ ಜೊತೆಗೆ ಹೆಚ್ಚುವರಿಯಾಗಿ ನಿರ್ಬಂಧಗಳನ್ನು ಶುಕ್ರವಾರ ವಿಧಿಸಿದರು.

ನಾಯ್ಡು ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹೇಳಿಕೆ ನೀಡುವುದರಿಂದ ದೂರ ಇರಬೇಕು ಎಂದು ನ್ಯಾಯಾಲಯ ತಿಳಿಸಿದೆ. ಷರತ್ತುಗಳು ನಾಯ್ಡು ಅವರಿಗೆ ಸಂಪೂರ್ಣ ನಿಷೇಧ ಹೇರುವುದಿಲ್ಲ ಅಥವಾ ಅವು ನಾಯ್ಡು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ. ಬದಲಿಗೆ ಅವು ಸಮಂಜಸವಾದ ನಿರ್ಬಂಧಗಳಾಗಿದ್ದು  ಪ್ರಾಸಿಕ್ಯೂಷನ್‌ನ ಹಕ್ಕುಗಳೊಂದಿಗೆ ಸಂಘರ್ಷವಿಲ್ಲದ ಸಮತೋಲಿತ ವಿಧಾನವನ್ನು ಪ್ರತಿಬಿಂಬಿಸುತ್ತದೆ ಎಂದು ಅದು ವಿವರಿಸಿದೆ.

ತೆಲುಗು ದೇಶಂ ಪಕ್ಷದ ನಾಯಕ  ರಾಜಕೀಯ ಸಮಾವೇಶಗಳಲ್ಲಿ ಭಾಗವಹಿಸುವುದನ್ನು ತಡೆಯಲು ಕೋರಿ ಆಂಧ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ಬಂಧಗಳನ್ನು ವಿಧಿಸಿದೆ.

ಆದರೆ ಸಾರ್ವಜನಿಕ ಸಮಸ್ಯೆಗಳು ಅಥವಾ ರಾಜ್ಯದ ನೀತಿಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡದಂತೆ ತೆಲುಗು ದೇಶಂ ಪಕ್ಷದ ನಾಯಕನಿಗೆ ನಿರ್ಬಂಧ ವಿಧಿಸಲು ನ್ಯಾಯಾಲಯ ನಿರಾಕರಿಸಿತು.

ನಾಯ್ಡು ಅವರು ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವುದನ್ನು ನಿರ್ಬಂಧಿಸುವುದು ಅಥವಾ ಸಾಮಾಜಿಕ ಮಾಧ್ಯಮವನ್ನು ಬಳಸದಂತೆ ನಿರ್ಬಂಧಿಸುವುದು ಅವರ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ನಾಯ್ಡು ಅವರು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆ ಹೇಳಿಕೆ ನೀಡುತ್ತಿದ್ದಾರೆ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಅವರು ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡ ಬಗ್ಗೆ ಅಥವಾ ಆಯೋಜಿಸಿದ ಬಗ್ಗೆ ಸಾಕ್ಷ್ಯಗಳಿಲ್ಲ ಎಂದು ನುಡಿಯಿತು.

ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿ, ರಾಜ್ಯದೊಳಗಿನ ವಿವಿಧ ಸಮಸ್ಯೆಗಳ ಬಗ್ಗೆ, ವಿಶೇಷವಾಗಿ ರಾಜ್ಯದ ನೀತಿಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯವ ವ್ಯಕ್ತಪಡಿಸುವ ಸ್ವಾಭಾವಿಕ ಜವಾಬ್ದಾರಿ ನಾಯ್ಡು ಅವರಿಗೆ ಇದೆ ಎಂದು ಅದು ಅಭಿಪ್ರಾಯಪಟ್ಟಿತು. ನಾಯ್ಡು ಅವರ ನಿವಾಸಕ್ಕೆ ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿಗಳನ್ನು (ಡಿಎಸ್‌ಪಿ) ನಿಯೋಜಿಸಬೇಕೆಂಬ ರಾಜ್ಯದ ಪ್ರಾರ್ಥನೆಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.

ಇದು ಅವರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದಿರುವ ಪೀಠ ಆರೋಗ್ಯದ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡಿರುವುದನ್ನು "ಕಸ್ಟಡಿ ಜಾಮೀನು" ನೊಂದಿಗೆ ಸಮೀಕರಿಸಬಾರದು ಎಂದು ಸ್ಪಷ್ಟಪಡಿಸಿದೆ.

Related Stories

No stories found.
Kannada Bar & Bench
kannada.barandbench.com