ಅಮರಾವತಿ ರಾಜಧಾನಿ ಮತ್ತು ರಾಜಧಾನಿ ವಲಯವನ್ನು ಮುಂದಿನ ಆರು ತಿಂಗಳಲ್ಲಿ ಅಭಿವೃದ್ಧಿ ಪಡಿಸಿ, ನಿರ್ಮಿಸುವಂತೆ ಆಂಧ್ರಪ್ರದೇಶ ಹೈಕೋರ್ಟ್ ಆಂಧ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ರಾಜಧಾನಿ ರೈತು ಪರಿರಕ್ಷಣಾನಾ ಸಮಿತಿ ವರ್ಸಸ್ ಆಂಧ್ರಪ್ರದೇಶ ಸರ್ಕಾರ].
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ, ಎಂ ಸತ್ಯನಾರಾಯಣ ಮೂರ್ತಿ ಮತ್ತು ಡಿ ವಿ ಎಸ್ ಎಸ್ ಸೋಮಯಾಜುಲು ಅವರನ್ನೊಳಗೊಂಡ ಪೂರ್ಣ ಪೀಠವು ವೈ ಎಸ್ ಜಗನ್‌ಮೋಹನ ರೆಡ್ಡಿ ನೇತೃತ್ವದ ಸರ್ಕಾರವು ಜಾರಿಗೆ ತರಲು ಮುಂದಾಗಿದ್ದ 'ಆಂಧ್ರ ಪ್ರದೇಶ ರಾಜಧಾನಿ ವಲಯ ಅಭಿವೃದ್ಧಿ ಹಿಂಪಡೆವ ಕಾಯಿದೆ, 2020'ರ ವಿರುದ್ಧ ಸಲ್ಲಿಸಲಾಗಿದ್ದ "ಮೂರು ರಾಜಧಾನಿಗಳ ಪ್ರಕರಣ" ಎಂದೇ ಕರೆಯಲಾಗುವ ಮನವಿಯ ವಿಚಾರಣೆಯನ್ನು ನಡೆಸಿತು.
"ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಮತ್ತು ಭೂಮಿ ಕ್ರೋಢೀಕರಣ ಕಾಯಿದೆ, 2015ರ ಅಡಿ ಮಾಡಿಕೊಳ್ಳಲಾದ ಒಪ್ಪಂದ ಮತ್ತು ಹಿಂಪಡೆಯಲಾಗದ ಪವರ್ ಆಫ್ ಅಟಾರ್ನಿಯಂತೆ ರಾಜ್ಯ ಸರ್ಕಾರವು ಅಮರಾವತಿ ರಾಜಧಾನಿ ನಗರಿ ಮತ್ತು ರಾಜಧಾನಿ ವಲಯವನ್ನು ಆರು ತಿಂಗಳೊಳಗೆ ನಿರ್ಮಿಸಿ, ಅಭಿವೃದ್ಧಿಪಡಿಸುವಂತೆ ನಿರ್ದೇಶಿಸುತ್ತೇವೆ," ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ ನ್ಯಾಯಾಲಯವು, ರಾಜಧಾನಿಯ ಬದಲಾವಣೆಯಾಗಲಿ, ರಾಜಧಾನಿಯನ್ನು ಎರಡು ಅಥವಾ ಮೂರು ಎಂದು ವಿಭಾಗಿಸಲು ಕಾನೂನು ರೂಪಿಸುವುದಕ್ಕಾಗಲಿ ಶಾಸಕಾಂಗಕ್ಕೆ ಯಾವುದೇ ರೀತಿಯ ಶಾಸನಾತ್ಮಕ ಅರ್ಹತೆ ಇಲ್ಲ ಎಂದು ಪೂರ್ಣ ಪೀಠ ಹೇಳಿತು.
ಇದೇ ವೇಳೆ, ಸರ್ಕಾರದ ಬದಲಾವಣೆಯಾದ ಮಾತ್ರಕ್ಕೆ ಅದು ನೀತಿಯ ಬದಲಾವಣೆಗೆ ಸಾಧಾರವಾಗದು. ಪ್ರಸಕ್ತ ಸರ್ಕಾರವು ಹಿಂದಿನ ಸರ್ಕಾರದ ಅವಧಿಯಲ್ಲಿನ ಯೋಜನೆಗಳನ್ನು ಪೂರ್ಣಗೊಳಿಸುವ ಕಾನೂನಾತ್ಮಕ ಹೊಣೆಗಾರಿಕೆ ಹೊಂದಿದೆ ಎಂದು ಹೇಳಿತು.