ಇಂತಹ ಆಲಸ್ಯ ನಿರೀಕ್ಷಿಸಿರಲಿಲ್ಲ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ8 ಐಎಎಸ್ ಅಧಿಕಾರಿಗಳಿಗೆ ಆಂಧ್ರ ಹೈಕೋರ್ಟ್‌ ಶಿಕ್ಷೆ

ಅಧಿಕಾರಿಗಳು ಪ್ರತಿ ತಿಂಗಳು ವಿದ್ಯಾರ್ಥಿ ನಿಲಯಕ್ಕೆ ತೆರಳಿದ ಫೋಟೊವನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ಪ್ರಕರಣವನ್ನು ಮತ್ತೆ ಆರಂಭಿಸಬೇಕು ಎಂದು ರಿಜಿಸ್ಟ್ರಿಗೆ ಸೂಚಿಸಿತು.
Andhra Pradesh High Court
Andhra Pradesh High Court
Published on

ಮಧ್ಯಂತರ ಆದೇಶ ಪಾಲಿಸದೇ ಉದ್ದೇಶಪೂರ್ವಕ ಅಸಹಕಾರ ಧೋರಣೆ ಅನುಸರಿಸಿದ ಎಂಟು ಐಎಎಸ್‌ ಅಧಿಕಾರಿಗಳನ್ನು ಆಂಧ್ರಪ್ರದೇಶ ಹೈಕೋರ್ಟ್‌ ಇತ್ತೀಚೆಗೆ ನ್ಯಾಯಾಂಗ ನಿಂದನೆ ಪ್ರಕರಣದ ತಪ್ಪಿತಸ್ಥರು ಎಂದು ಘೋಷಿಸಿತು.

ಆರಂಭದಲ್ಲಿ ಅಧಿಕಾರಿಗಳಿಗೆ ಎರಡು ವಾರಗಳ ಸಾದಾ ಜೈಲು ಶಿಕ್ಷೆ ಮತ್ತು ₹ 1,000 ದಂಡ ವಿಧಿಸಿದ್ದರು. ಬಟ್ಟು ದೇವಾನಂದ್‌ ʼತಮ್ಮ ವಯಸ್ಸು ಮತ್ತು ಸಲ್ಲಿಸಿದ ಸೇವೆಯನ್ನು ಪರಿಗಣಿಸಬೇಕುʼ ಎಂಬ ಅಧಿಕಾರಿಗಳ ಕೋರಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯ ಕೈಗೊಳ್ಳುವಂತೆ ನಿರ್ದೇಶಿಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಅವರನ್ನು ಜೈಲಿಗೆ ದೂಡುವುದು ಅಪೇಕ್ಷಣೀಯವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅಧಿಕಾರಿಗಳ ಬೇಷರತ್‌ ಕ್ಷಮೆಯಾಚನೆ ಬಳಿಕ 12 ತಿಂಗಳ ಕಾಲ ಪ್ರತಿ ತಿಂಗಳ ಒಂದು ಭಾನುವಾರ ಪ್ರತಿಯೊಬ್ಬ ಅಧಿಕಾರಿಯೂ ನಿಗದಿತ ವಿದ್ಯಾರ್ಥಿ ನಿಲಯಕ್ಕೆ ತೆರಳಿ ಅಲ್ಲಿನ ವಿದ್ಯಾರ್ಥಿಗಳು ಮತ್ತು ಉಸ್ತುವಾರಿ ಅಧಿಕಾರಿಗಳೊಂದಿಗೆ ಸಮಯ ಕಳೆಯಬೇಕು. ಅವರಲ್ಲಿ ಪ್ರೇರಣೆ ಹುಟ್ಟುವಂತಹ ಕಾರ್ಯ ಕೈಗೊಳ್ಳಬೇಕು. ಖುದ್ದು ಹಣ ಖರ್ಚು ಮಾಡಿ ಅವರಿಗೆ ಮಧ್ಯಾಹ್ನ ಅಥವಾ ರಾತ್ರಿ ಊಟ ಏರ್ಪಡಿಸಬೇಕು ಎಂದು ಪೀಠ ಸೂಚಿಸಿತು.

ಶಾಲಾ ಆವರಣವೊಂದರಲ್ಲಿ ಗ್ರಾಮ ಸಭೆಯ ಕಟ್ಟಡ ನಿರ್ಮಾಣ ಮಾಡುತ್ತಿದ್ದುದನ್ನು ವಿರೋಧಿಸಿ ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿಗಳ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಶಾಲಾ ಆವರಣದಲ್ಲಿ ಕಟ್ಟಡ ನಿರ್ಮಾಣ ಮಾಡುವುದರಿಂದ ಶಾಲಾ ವಾತಾವರಣ ಹದಗೆಡುತ್ತದೆ. ಶಾಲೆಯ ಆರೋಗ್ಯಕರ ವಾತಾವರಣಕ್ಕೆ ತೊಂದರೆಯಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದರು. ಇದನ್ನು ಮಹತ್ವದ ಸಂಗತಿ ಎಂದು ಪರಿಗಣಿಸಿದ್ದ ನ್ಯಾಯಾಲಯ ಮುಂದಿನ ಆದೇಶದವರೆಗೆ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳದಂತೆ ಪ್ರತಿವಾದಿಗಳಿಗೆ ಮಧ್ಯಂತರ ಆದೇಶ ನೀಡಿತ್ತು. ಆದರೂ ಪ್ರತಿವಾದಿಗಳು ಶಾಲೆಯ ಆವರಣದಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆ ಆರಂಭಿಸಿದ್ದರು. ಒಂದು ವರ್ಷ ಕಳೆದರೂ ಇಬ್ಬರನ್ನು ಹೊರತುಪಡಿಸಿ ಉಳಿದ ಪ್ರತಿವಾದಿಗಳು ನ್ಯಾಯಾಲಯಕ್ಕೆ ಪ್ರತಿ ಅಫಿಡವಿಟ್‌ ಸಲ್ಲಿಸಲು ವಿಫಲರಾಗಿದ್ದರು .

ಈ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡ ನ್ಯಾಯಾಲಯ “ಅಖಿಲ ಭಾರತ ಸೇವೆಯಲ್ಲಿ ತೊಡಗಿರುವ ಹಿರಿಯ ಅಧಿಕಾರಿಗಳಿಂದ ಇಂತಹ ಇಂತಹ ಆಲಸ್ಯ ಮತ್ತು ದುಂಡಾವರ್ತನೆ ನಿರೀಕ್ಷಿಸಿರಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿತು.

ಆದರೂ ಅಧಿಕಾರಿಗಳ ಬೇಷರತ್‌ ಕ್ಷಮೆಯಾಚನೆ ಬಳಿಕ ತಪ್ಪಿತಸ್ಥ ಅಧಿಕಾರಿಗಳಿಗೆ ವಿಧಿಸಲಾಗಿದ್ದ ಎರಡು ವಾರಗಳ ಸಾದಾ ಜೈಲು ಶಿಕ್ಷೆ ಮತ್ತು ₹ 1,000 ದಂಡವನ್ನು ಹಿಂಪಡೆದು ಸಾಮಾಜಿಕ ಕಾರ್ಯದಲ್ಲಿ ತೊಡಗುವಂತೆ ಸೂಚಿಸಿತು. ಅಧಿಕಾರಿಗಳು ಪ್ರತಿ ತಿಂಗಳು ವಿದ್ಯಾರ್ಥಿ ನಿಲಯಕ್ಕೆ ತೆರಳಿದ ಫೋಟೊವನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ಪ್ರಕರಣವನ್ನು ಮತ್ತೆ ಆರಂಭಿಸಬೇಕು ಎಂದು ರಿಜಿಸ್ಟ್ರಿಗೆ ಸೂಚಿಸಿತು.

Kannada Bar & Bench
kannada.barandbench.com