ದೇಶ್‌ಮುಖ್‌ ಪ್ರಕರಣ: ಮುಖ್ಯ ಕಾರ್ಯದರ್ಶಿಗೆ ಸಿಬಿಐ ಸಮನ್ಸ್‌; ಹೈಕೋರ್ಟ್‌ ಮೆಟ್ಟಿಲೇರಿದ ಮಹಾರಾಷ್ಟ್ರ ಸರ್ಕಾರ

ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ನಡೆಸಲಿರುವ ನ್ಯಾ. ನಿತಿನ್‌ ಜಾಮ್‌ದಾರ್ ಮತ್ತು ಎಸ್‌ ವಿ ಕೋತ್ವಾಲ್‌ ನೇತೃತ್ವದ ಪೀಠ.
Maharashtra government, CBI, Bombay High Court
Maharashtra government, CBI, Bombay High Court

ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್‌ ದೇಶ್‌ಮುಖ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅವರಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಮನ್ಸ್‌ ನೀಡಿರುವುದರ ವಿರುದ್ಧ ಮಹಾರಾಷ್ಟ್ರ ಸರ್ಕಾರವು ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದೆ. ಮುಖ್ಯ ಕಾರ್ಯದರ್ಶಿ ಸೀತಾರಾಮ್‌ ಕುಂಟೆ ಹಾಗೂ ಪೊಲೀಸ್ ಮಹಾನಿರ್ದೇಶಕ ಸಂಜಯ್ ಪಾಂಡೆ ಅವರಿಗೆ ಸಿಬಿಐ ಸಮನ್ಸ್‌ ಜಾರಿಗೊಳಿಸಿದೆ.

ಪ್ರಕರಣದ ಸಂಬಂದ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿರುವ ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ತಡೆ ನೀಡಬೇಕೆಂದು ಕೋರಿದ್ದು, ತನಿಖೆಗಾಗಿ ಪ್ರತ್ಯೇಕ ವಿಶೇಷ ತನಿಖಾ ದಳವನ್ನು ರಚಿಸಲು ಕೋರಿದೆ. ಪ್ರಕರಣವನ್ನು ಬುಧವಾರ ನ್ಯಾ. ನಿತಿನ್‌ ಜಾಮ್‌ದಾರ್‌ ಹಾಗೂ ನ್ಯಾ. ಎಸ್‌ ವಿ ಕೋತ್ವಾಲ್‌ ಅವರಿದ್ದ ಪೀಠದ ಮುಂದೆ ತುರ್ತು ವಿಚಾರಣೆಗೆ ಕೋರಿ ಗಮನಕ್ಕೆ ತರಲಾಯಿತು.

ಈ ವೇಳೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ವಕೀಲರಾದ ರಣ್‌ಬೀರ್ ಸಿಂಗ್ ಅವರಿಗೆ ನ್ಯಾ. ಕೋತ್ವಾಲ್‌ ಅವರು ಪ್ರಕರಣದಲ್ಲಿ ಅಂತಹ ತುರ್ತೇನಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಂಗ್ ಅವರು, ಪ್ರಕರಣವನ್ನು ಮುಂದೆ ಮಾಡಿ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರದ ಉತ್ತರದಿಂದ ತೃಪ್ತವಾಗದ ಪೀಠವು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 20ಕ್ಕೆ ಪಟ್ಟಿ ಮಾಡಿತು.

ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ವಿರುದ್ಧ ತೀವ್ರ ತರಹದ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆಯನ್ನು ನಡೆಸುವಂತೆ ಬಾಂಬೆ ಹೈಕೋರ್ಟ್‌ ಸಿಬಿಐಗೆ ಸೂಚಿಸಿತ್ತು. ಮಾಜಿ ಮುಂಬೈ ಪೊಲೀಸ್‌ ಕಮಿಷನರ್‌ ಪರಮ್‌ ಬೀರ್ ಸಿಂಗ್ ಅವರು ಈ ಸಂಬಂಧ ಪತ್ರವೊಂದನ್ನು ಬರೆದಿದ್ದನ್ನು ಆಧರಿಸಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಆರೋಪಗಳ ಹಿನ್ನೆಲೆಯಲ್ಲಿ ದೇಶ್‌ಮುಖ್‌ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ಇತ್ತೀಚೆಗೆ ಸಿಬಿಐ ನಿರ್ದೇಶಕ ಸುಭೋದ್‌ ಜೈಸ್ವಾಲ್‌ ವಿರುದ್ಧ ಅಕ್ರಮವಾಗಿ ಫೋನ್‌ ಟ್ಯಾಪಿಂಗ್ ಮತ್ತು ದತ್ತಾಂಶವನ್ನು ಸೋರಿಕೆ ಮಾಡಿರುವ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದ ಮುಂಬೈ ಪೊಲೀಸರು ಸುಭೋದ್‌ ಅವರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಸಮನ್ಸ್‌ ಜಾರಿಗೊಳಿಸಿದ್ದರು. ಇದರ ಬೆನ್ನಿಗೆ ಮಹಾರಾಷ್ಟ್ರ ಸರ್ಕಾರದ ಉನ್ನತ ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಬಿಐ ಸಮನ್ಸ್‌ ಜಾರಿಗೊಳಿಸಿದೆ.

Related Stories

No stories found.
Kannada Bar & Bench
kannada.barandbench.com