ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ (ಇ ಡಿ) ವಿರೋಧ ವ್ಯಕ್ತಪಡಿಸಿದ್ದು ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿಂದಿನ ಪ್ರಮುಖ ಸಂಚುಕೋರ ಮತ್ತು ಮೆದುಳು ಅವರೇ ಎಂದು ವಾದಿಸಿದೆ.
ವಕೀಲ ಶ್ರೀರಾಮ್ ಶಿರ್ಸಾಟ್ ಅವರ ಮೂಲಕ ಸಲ್ಲಿಸಲಾದ 61 ಪುಟಗಳ ಪ್ರತಿಕ್ರಿಯೆಯಲ್ಲಿ “ಬಾರ್ ಅಂಗಡಿ ಮಾಲೀಕರಿಂದ ಸಂಗ್ರಹಿಸಿದ ಸಾಕ್ಷ್ಯದ ಪ್ರಕಾರ ಅಕ್ರಮ ಹಣ ವರ್ಗಾವಣೆಯಲ್ಲಿ ದೇಶ್‌ಮುಖ್ ಮಹತ್ವದ ಪಾತ್ರ ವಹಿಸಿದ್ದಾರೆ ಮತ್ತು ಅದನ್ನು ಕಾನೂನುಬದ್ಧ ದೇಣಿಗೆ ಎಂದು ಬಿಂಬಿಸುವ ಮೂಲಕ ಕಳಂಕ ತೊಡೆದು ಹಾಕಲು ಹೊರಟಿದ್ದರು" ಎಂದು ಇ ಡಿ ಆರೋಪಿಸಿದೆ.
ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ದೇಶಮುಖ್ ಪ್ರಮುಖ ಶಂಕಿತ ಎಂದಿರುವುದನ್ನು ಇಡಿ ಉಲ್ಲೇಖಿಸಿದೆ. ಅವರಿಗೆ ಐದು ಬಾರಿ ಸಮನ್ಸ್ ನೀಡಿದಾಗಲೂ ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅರ್ಜಿ ವಿಲೇವಾರಿ ಆಗುವವರೆಗೂ ದೇಶ್‌ಮುಖ್ ತನಿಖಾ ಸಂಸ್ಥೆಗೆ ಸಹಕಾರ ನೀಡಲಿಲ್ಲ ಅಥವಾ ಹಾಜರಾಗಲಿಲ್ಲ ಎಂದು ಅದು ವಾದಿಸಿದೆ.
ವಿಶೇಷ ನ್ಯಾಯಾಲಯ ತಮ್ಮ ಡಿಫಾಲ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ 10 ದಿನಗಳ ನಂತರ ಈ ಜಾಮೀನು ಅರ್ಜಿಯನ್ನು ದೇಶ್‌ಮುಖ್ ಸಲ್ಲಿಸಿದ್ದಾರೆ.