ಸಪ್ತಶೃಂಗಿ ದೇಗುಲದಲ್ಲಿ ಪ್ರಾಣಿ ಬಲಿಗೆ ಅವಕಾಶ ನೀಡುವುದಾಗಿ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಹಾರಾಷ್ಟ್ರ ಸರ್ಕಾರ

ಈ ಹೇಳಿಕೆಯೊಂದಿಗೆ, ಸರ್ಕಾರ ಪ್ರಾಣಿ ಬಲಿ ನಿಷೇಧಿಸಿ 2017ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.
Bombay High Court
Bombay High Court

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಸಪ್ತಶೃಂಗಿ ದೇವಸ್ಥಾನದಲ್ಲಿ ಪ್ರಾಣಿ ಬಲಿಗೆ ಅನುಮತಿ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಎಸ್‌ ವಿ ಗಂಗಾಪುರವಾಲಾ ಮತ್ತು ಆರ್‌ ಎನ್ ಲಡ್ಡಾ ಅವರಿದ್ದ ವಿಭಾಗೀಯ ಪೀಠವು  ಸರ್ಕಾರದ ಈ ಹೇಳಿಕೆಯನ್ನು ದಾಖಲಿಸಿಕೊಂಡಿತು. ಬಳಿಕ ದೇವಾಲಯದ ಆವರಣದಲ್ಲಿ ಪ್ರಾಣಿ ಬಲಿಗೆ ರಾಜ್ಯಾದ್ಯಂತ ನಿಷೇಧ ಹೇರಿದ್ದ ಉಪವಿಭಾಗಾಧಿಕಾರಿ (ಎಸ್‌ಡಿಒ) ಆದೇಶವನ್ನು ಪ್ರಶ್ನಿಸಿ ಆದಿವಾಸಿ ವಿಕಾಸ್ ಸಂಸ್ಥೆ 2019ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತು.

Also Read
ಗೋವಿಗೆ ಮೂಲಭೂತ ಹಕ್ಕು ಕಲ್ಪಿಸಿ, ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು: ಅಲಾಹಾಬಾದ್‌ ಹೈಕೋರ್ಟ್‌

2016ರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹನ್ನೆರಡು ಜನ ಗಾಯಗೊಂಡ ನಂತರ  ಪ್ರಾಣಿ ಬಲಿಯನ್ನು ಸ್ಥಗಿತಗೊಳಿಸಲಾಗಿತ್ತು. ಅನಾದಿ ಕಾಲದಿಂದಲೂ, ಬುಡಕಟ್ಟು ಮತ್ತಿತರ ಸಮುದಾಯಗಳು ಮೇಕೆ ಬಲಿ ನೀಡುತ್ತಿದ್ದು ಇದು ತಮ್ಮ ಧರ್ಮದ ಅವಿಭಾಜ್ಯ ಅಂಗವಾಗಿದೆ. ಸಪ್ತಶೃಂಗಿ ದೇವಸ್ಥಾನವಿರುವ ಗ್ರಾಮದಲ್ಲಿ ಆಚರಣೆ ಮುಂದುವರೆಸದಿದ್ದರೆ ಅಶುಭವಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಯಾವುದೇ ಆಕ್ಷೇಪ ಸಲ್ಲಿಸಲು ಅವಕಾಶ ನೀಡದೆ ಉಪ ವಿಭಾಗಾಧಿಕಾರಿ ಆದೇಶ ಜಾರಿಗೊಳಿಸಿದ್ದು ಪ್ರಾಣಿಬಲಿ ನಿಷೇಧ ತೆಗೆದುಹಾಕುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಧಾರ್ಮಿಕ ವಿಧಿ ವಿಧಾನ ಕೈಗೊಳ್ಳುವ ವೇಳೆ ಕೇವಲ ಆರು ಮಂದಿಗೆ ಭಾಗವಹಿಸಲು ಹಾಗೂ ಒಂದು ಮೇಕೆ ಬಲಿ ನೀಡಲು ಟ್ರಸ್ಟ್‌ ಪ್ರಸ್ತಾವನೆ ಸಲ್ಲಿಸಿತ್ತು.

ಆದರೆ ಪ್ರಾಣಿಬಲಿಗೆ ಮಾತ್ರ ತಾನು ಅವಕಾಶ ನೀಡಲಿದ್ದು ಉಳಿದ ಆಚರಣೆಗೆ ಅನುಮತಿ ನೀಡುವುದಿಲ್ಲ ಎಂದು ಸರ್ಕಾರ ವಾದಿಸಿತು. ಈ ನಿಲುವನ್ನು ಒಪ್ಪಿದ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Adhivasi_Vikas_Sanstha_v__State_of_Maharashtra___Ors__.pdf
Preview

Related Stories

No stories found.
Kannada Bar & Bench
kannada.barandbench.com