ಪ್ರಾಣಿಗಳೂ ಘನತೆಯ ಬದುಕಿಗೆ ಅರ್ಹ: ಒಂಭತ್ತು ನಾಯಿಗಳನ್ನು ಮಾಲೀಕನಿಗೆ ಮರಳಿಸುವ ಆದೇಶ ವಜಾಗೊಳಿಸಿದ ಹೈಕೋರ್ಟ್‌

‌ಆರು ಗೋಲ್ಡನ್‌ ರಿಟ್ರೀವರ್ಸ್‌ ಮತ್ತು ಮೂರು ಶಿಹ್ ತ್ಸು ನಾಯಿಗಳನ್ನು ಮಾಲೀಕನಿಗೆ ನೀಡುವಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಏಪ್ರಿಲ್‌ 25ರಂದು ನೀಡಿದ್ದ ಆದೇಶ ರದ್ದುಪಡಿಸಿದೆ.
ಪ್ರಾಣಿಗಳೂ ಘನತೆಯ ಬದುಕಿಗೆ ಅರ್ಹ: ಒಂಭತ್ತು ನಾಯಿಗಳನ್ನು ಮಾಲೀಕನಿಗೆ ಮರಳಿಸುವ ಆದೇಶ ವಜಾಗೊಳಿಸಿದ ಹೈಕೋರ್ಟ್‌
Published on

“ಪ್ರಾಣಿಗಳಿಗೆ ಮಾತು ಬಾರದಿದ್ದರೂ ನೋವು ಅನುಭವಿಸುತ್ತವೆ, ಎಷ್ಟು ದಿನ ವಿಚಿತ್ರ ಹಿಂಸೆ ಅನುಭವಿಸಲು ಸಾಧ್ಯ. ಪ್ರಾಣಿಗಳಿಗೂ ಕೂಡಾ ಘನತೆಯಿಂದ ಬದುಕುವ ಹಕ್ಕಿದೆ” ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶಿಸಿದೆ. ಒಂಭತ್ತು ನಾಯಿಗಳನ್ನು ಹಿಂಸೆ, ಲೈಂಗಿಕ ಕಿರುಕುಳ ನೀಡಿದ ಮಾಲೀಕನ ವಶಕ್ಕೆ ನೀಡಲು ನಿರಾಕರಿಸಿರುವ ನ್ಯಾಯಾಲಯವು ಅವುಗಳನ್ನು ಪ್ರಾಣಿ ದಯಾ ಸಂಘಟನೆ ವಶದಲ್ಲಿಡಲು ನ್ಯಾಯಾಲಯ ಆದೇಶಿಸಿದೆ.

‌ಆರು ಗೋಲ್ಡನ್‌ ರಿಟ್ರೀವರ್ಸ್‌ ಮತ್ತು ಮೂರು ಶಿಹ್ ತ್ಸು ನಾಯಿಗಳನ್ನು ಮಾಲೀಕನಿಗೆ ನೀಡುವಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಏಪ್ರಿಲ್‌ 25ರಂದು ನೀಡಿದ್ದ ಆದೇಶ ರದ್ದು ಕೋರಿ ಪೀಪಲ್‌ ಫಾರ್‌ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಅನಿಮಲ್ಸ್‌ (ಪೇಟಾ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ವಿಡಿಯೊದಲ್ಲಿ ನಾಯಿಗಳಿಗೆ ಕ್ರೂರವಾಗಿ ಹೊಡೆಯುವ ದೃಶ್ಯಗಳಿವೆ. ಕ್ರೌರ್ಯ ಮೆರೆದವನಿಗೆ ನಾಯಿಗಳ ಕಸ್ಟಡಿ ನೀಡಿದ ಮ್ಯಾಜಿಸ್ಟೇಟ್‌ ಆದೇಶ ಸರಿಯಲ್ಲ. ಪ್ರಾಣಿಗಳಿಗೂ ಹಿಂಸೆಯಿಂದ ರಕ್ಷಣೆ ಪಡೆದುಕೊಳ್ಳುವ ಹಕ್ಕಿದೆ” ಎಂದು ಪೀಠ ಹೇಳಿದೆ.

“ಮನುಷ್ಯನ ರೀತಿಯಲ್ಲಿ ಪ್ರಾಣಿಗಳಿಗೆ ಮಾತು ಬಾರದೇ ಇದ್ದರೂ ಸಂವೇದನೆ, ಯಾತನೆ ಅಥವಾ ನೋವು ಅನುಭವಿಸುವ ಶಕ್ತಿ ಹೊಂದಿವೆ. ಕಾನೂನು, ತನ್ನ ನಾಗರಿಕತೆಯ ಬುದ್ಧಿವಂತಿಕೆಯಲ್ಲಿ, ಪ್ರಾಣಿಗಳನ್ನು ಕೇವಲ ಮಾನವ ಉಪಯೋಗಕ್ಕಾಗಿ ಮಾತ್ರ ಇರುವ ಕೇವಲ ವಸ್ತುಗಳಾಗಿ ನೋಡುವುದನ್ನು ಬಹಳ ಹಿಂದೆಯೇ ನಿಲ್ಲಿಸಿದೆ” ಎಂದು ಪೀಠ ಹೇಳಿದೆ.

“ಪ್ರಾಣಿಗಳು ಸಹ ಘನತೆ, ಕರುಣೆ ಮತ್ತು ಕ್ರೌರ್ಯದಿಂದ ರಕ್ಷಣೆಗೆ ಅರ್ಹ ಜೀವಿಗಳೆಂದು ಕಾನೂನು ಹೇಳುತ್ತದೆ. ನಾಗರಿಕ ಸಮಾಜದ ಅಳತೆಗೋಲು ಸಾಮಾನ್ಯವಾಗಿ ಅದು ತನ್ನ ಸಹವರ್ತಿ ಮಾನವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಮೇಲೆ ಮಾತ್ರವಲ್ಲ, ಬದಲಾಗಿ ಈ ಜಗತ್ತಿನಲ್ಲಿ ವಾಸಿಸುವ ಮೂಕ ಜೀವಿಗಳಿಗೆ ಅದು ಹೇಗೆ ನ್ಯಾಯ ಮತ್ತು ಕರುಣೆ ತೋರುತ್ತದೆ ಎಂಬುದರ ಮೇಲೆ ನಿರ್ಧರಿಸಲ್ಪಡುತ್ತದೆ” ಎಂದು ಪೀಠ ಮಾರ್ಮಿಕವಾಗಿ ಹೇಳಿದೆ.

ಹೀಗಾಗಿ, “ಪ್ರತಿ ಪ್ರಾಣಿಯ ಮೇಲಿನ ಕ್ರೌರ್ಯವು ಸಂವೇದನೆಯ ಮೇಲಿನ ಹಾನಿಯಲ್ಲ. ಬದಲಿಗೆ ಸಾಮೂಹಿಕ ಮಾನವ ಆತ್ಮಸಾಕ್ಷಿಯ ಮೇಲಿನ ಕಳಂಕವಾಗಿದೆ. ಹೀಗಾಗಿ, ಪ್ರಾಣಿಗಳ ಜೀವವನ್ನು ರಕ್ಷಿಸುವುದು ದಾನವಲ್ಲ. ಇದು ಸಾಂವಿಧಾನಿಕ ನೈತಿಕತೆಯನ್ನು ಎತ್ತಿ ಹಿಡಿಯುವುದಾಗಿದೆ. ತಮ್ಮ ಸ್ವಂತಿಕೆಯಿಂದ ಈ ಘನ ನ್ಯಾಯಾಲಯದ ಮೆಟ್ಟಿಲೇರಲಾಗದವರಿಗೂ ನ್ಯಾಯದ ಕಮಾನು ವಿಸ್ತರಿಸುತ್ತದೆ” ಎಂದು ಪೀಠವು ಹೇಳಿದೆ.

“ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಿ, ಮಾಲೀಕನು ನಾಯಿಗಳನ್ನು ನಡೆಸಿಕೊಂಡಿರುವುದು ದೃಢಪಟ್ಟಿದ್ದರೂ ಸಹ ಮ್ಯಾಜಿಸ್ಪ್ರೇಟ್‌ ಅವರು ಹೇಗೆ ಅಂತಹ ಮಾಲೀಕನಿಗೆ ನಾಯಿಗಳನ್ನು ನೀಡುವಂತೆ ಆದೇಶ ನೀಡಿದರು” ಎಂದು ಪೀಠ ಆಘಾತ ವ್ಯಕ್ತಪಡಿಸಿತು.

"ನಾಯಿಗಳ ಮಾಲೀಕನು ಅವನ್ನು ಚರಾಸ್ತಿ ರೀತಿ ಪರಿಗಣಿಸಿದ್ದು, ತನಗೆ ಇಷ್ಟ ಬಂದ ರೀತಿ ಅವುಗಳನ್ನು ನಡೆಸಿಕೊಂಡಿರುವುದು" ವಿಡಿಯೊದಿಂದ ತಿಳಿದು ಬಂದಿದೆ.

“ಈ ವಿಡಿಯೊವನ್ನು ನೋಡಿಯೂ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಅದು ಹೇಗೆ ನಾಯಿಗಳನ್ನು ಮಾಲೀಕನಿಗೆ ಹಿಂದಿರುಗಿಸಲು ಆದೇಶಿಸಿದೆ ಎಂಬುದು ಅರ್ಥವಾಗುತ್ತಿಲ್ಲ. ನಾಯಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಸಂಬಂಧ ತನಿಖೆ ನಡೆಯುತ್ತಿದೆ” ಎಂದೂ ನ್ಯಾಯಾಲಯ ಹೇಳಿದೆ.

ಪೇಟಾ ಪರ ವಕೀಲರು “ಮಾಲೀಕರಿಂದ ದೌರ್ಜನ್ಯ ಅನುಭವಿಸುತ್ತಿದ್ದ ನಾಯಿಗಳನ್ನು ರಕ್ಷಿಸಲಾಗಿದೆ. ಆದರೆ ಮ್ಯಾಜಿಸ್ಟೇಟ್‌ ಕೋರ್ಟ್‌ ಮತ್ತೆ ಅವುಗಳನ್ನು ಮಾಲೀಕರಿಗೆ ಹಸ್ತಾಂತರ ಮಾಡಲು ಆದೇಶಿಸಿರುವುದರಿಂದ ಮತ್ತೆ ನಾಯಿಗಳ ಪ್ರಾಣಕ್ಕೆ ಆಪತ್ತು ಎದುರಾಗಿದೆ. ಹೀಗಾಗಿ, ನಾಯಿಗಳ ರಕ್ಷಿಸುವ ಉದ್ದೇಶದಿಂದ ಅವುಗಳನ್ನು ಪೇಟಾ ವಶಕ್ಕೆ ನೀಡಬೇಕು” ಎಂದು ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ನಾಗಸಂದ್ರದ ವಾಸಿ ಕೆ ಇ ರಮೇಶ್‌ ಎಂಬಾತನ ಬಳಿ ಬೇರೆ ಬೇರೆ ತಳಿಯ 9 ನಾಯಿಗಳಿದ್ದವು. ಆತ ನಾಯಿಗಳ ಮೇಲೆ ಪದೇ ಪದೇ ವೈರ್‌ ಹಾಗೂ ಪೈಪ್‌ಗಳಿಂದ ಹಲ್ಲೆ ನಡೆಸುವುದು, ಲೈಂಗಿಕ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ಆತ ನಾಯಿಗಳಿಗೆ ಹಿಂಸೆ ನೀಡುತ್ತಿರುವ ಕೆಲ ವಿಡಿಯೋಗಳೊಂದಿಗೆ ನೆರೆಹೊರೆಯವರು ಪೇಟಾ ಸಂಸ್ಥೆಗೆ ದೂರು ನೀಡಿದ್ದರು. ಆ ದೂರಿನ ಮೇರೆಗೆ ಪೇಟಾ ಸಂಸ್ಥೆಗೆ 9 ನಾಯಿಗಳನ್ನು ರಕ್ಷಿಸಿ ತನ್ನ ಸುಪರ್ದಿನಲ್ಲಿ ಸುರಕ್ಷಿತವಾಗಿಟ್ಟುಕೊಂಡಿತ್ತು. ಬಿಎನ್‌ ಎಸ್‌ 2023ರಡಿ ಸೆಕ್ಷನ್‌ 325 ಮತ್ತು 62, ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1960ರಡಿ ಸೆಕ್ಷನ್‌11(1) ರಡಿ ಎಫ್‌ಐಆರ್‌ ದಾಖಲು ಮಾಡಿತ್ತು. ಆದರೆ, ಮಾಲೀಕ ರಮೇಶ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಮ್ಯಾಜಿಸ್ಪ್ರೇಟ್‌ ನಾಯಿಗಳನ್ನು ಮಾಲೀಕನಿಗೆ ಹಿಂತಿರುಗಿಸಲು ಅನುಮತಿ ನೀಡಿದ್ದರು. ಅದನ್ನು ಪ್ರಶ್ನಿಸಿ ಪೇಟಾ ಸಂಸ್ಥೆ ಹೈಕೋರ್ಟ್‌ ಮೊರೆ ಹೋಗಿತ್ತು. ಹೈಕೋರ್ಟ್‌ ಕಳೆದ ಮೇ 21ರಂದು ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ ವಿಚಾರಣೆ ಮುಂದೂಡಿತ್ತು.

Kannada Bar & Bench
kannada.barandbench.com