ಪ್ರಾಣಿಗಳು ಜೀವನೋಪಾಯದ ಮೂಲ, ಆರೋಪಿಗೆ ಶಿಕ್ಷೆ ವಿಧಿಸುವವರೆಗೆ ಅವನ್ನು ವಶಪಡಿಸಿಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್

ಜಾನುವಾರು ಸಾಗಣೆಗೆ ಬಳಸಿದ್ದ ವಾಹನ ವಶ ಪಡೆಯಲು ಮತ್ತು ಜಾನುವಾರುಗಳನ್ನು ಗೋಶಾಲೆಗೆ ರವಾನಿಸಲು ಅಧಿಕಾರಿಗಳಿಗೆ ಅವಕಾಶ ಕಲ್ಪಿಸುವ 2017ರ ನಿಯಮಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.
Cows
Cows

ಜಾನುವಾರುಗಳ ಸಾಗಣೆಗೆ ಸಂಬಂಧಿಸಿದಂತೆ ಆರೋಪಿಯು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಅಡಿ ಅಪರಾಧಿ ಎಂದು ಘೋಷಣೆಯಾಗುವುದಕ್ಕೂ ಮುನ್ನ ಜಾನುವಾರುಗಳ ಸಾಗಣೆಗೆ ಬಳಸಿದ್ದ ವಾಹನಗಳು ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆಯಲು ಅವಕಾಶ ಕಲ್ಪಿಸಲಾಗಿರುವ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ, 2017ರ ನಿಯಮಾವಳಿಗಳನ್ನು ಮರುಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ.

ಪ್ರಾಣಿಗಳು ಜೀವನೋಪಾಯದ ಮೂಲವಾಗಿದ್ದು, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಸೆಕ್ಷನ್‌ 29ರ ಅಡಿ ಆರೋಪಿಯು ಅಪರಾಧಿ ಎಂದು ಸಾಬೀತಾದರೆ ಮಾತ್ರ ಪ್ರಾಣಿಗಳನ್ನು ವಶಕ್ಕೆ ಪಡೆಯಬಹುದು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠ ಹೇಳಿದೆ. ಅಲ್ಲದೇ, ಕಾಯಿದೆಯ ಆಶಯಕ್ಕೆ ವಿರುದ್ಧವಾಗಿ ನಿಯಮಗಳು ಇರುವಂತಿಲ್ಲ ಎಂದಿದೆ.

ಹಾಗಾಗಿ, ಕೇಂದ್ರ ಸರ್ಕಾರವು ನಿಯಮಾವಳಿಗೆ ತಿದ್ದುಪಡಿ ತರಬೇಕು. ಇಲ್ಲವಾದರೆ ನಿಯಮಗಳ ಕಾರ್ಯಾಚರಣೆಗೆ ತಡೆ ನೀಡಲಾಗುವುದು ಎಂದು ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರನ್ನು ಒಳಗೊಂಡಿದ್ದ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠವು ಆದೇಶಿಸಿದೆ.

ಜಾನುವಾರುಗಳ ಸಾಗಣೆಗೆ ಬಳಸಿದ್ದ ವಾಹನಗಳನ್ನು ವಶಕ್ಕೆ ಪಡೆಯುವುದು ಮತ್ತು ಜಾನುವಾರುಗಳನ್ನು ಗೋಶಾಲೆಗೆ ಕಳುಹಿಸುವುದಕ್ಕೆ ಅವಕಾಶ ಕಲ್ಪಿಸಿರುವ 2017ರ ನಿಯಮಾವಳಿಗಳ ಸಿಂಧುತ್ವ ಪ್ರಶ್ನಿಸಿ ಎಮ್ಮೆಗಳ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ-2017ರ ನಿಯಮಗಳು (ಪ್ರಕರಣಗಳಿಗೆ ಸಂಬಂಧಿಸಿದ ಪ್ರಾಣಿಗಳ ಪೋಷಣೆ ಮತ್ತು ನಿರ್ವಹಣೆ) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಜಾನುವಾರು ಮಾರುಕಟ್ಟೆಗಳ ನಿಯಂತ್ರಣ) ನಿಯಮಗಳು -2017ರ ಸಾಂವಿಧಾನಿಕ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಅಡಿ ವಿಚಾರಣೆ ಎದುರಿಸುತ್ತಿರುವ ಜಾನುವಾರುಗಳ ಮಾಲೀಕನ ರಾಸುಗಳನ್ನು ವಶಪಡಿಸಿಕೊಳ್ಳಲು ಈ ನಿಯಮಗಳು ಮ್ಯಾಜಿಸ್ಟ್ರೇಟ್‌ಗೆ ಅವಕಾಶ ಮಾಡಿಕೊಟ್ಟಿವೆ. ಬಳಿಕ ಅವುಗಳನ್ನು ಚಿಕಿತ್ಸಾಲಯ ಮತ್ತು ಗೋಶಾಲೆ ಇತ್ಯಾದಿಗಳಿಗೆ ರವಾನಿಸಲಾಗುತ್ತದೆ. ಆನಂತರ ಅವುಗಳನ್ನು ದತ್ತು ನೀಡಬಹುದು. ಹಾಗಾಗಿ, 1960ರ ಕಾಯಿದೆಯ ಅಡಿ ರಚಿಸಲಾಗಿರುವ 2017ರಲ್ಲಿ ರೂಪಿಸಲಾಗಿರುವ ಈ ನಿಯಮಾವಳಿಗಳಡಿ ರೈತ ಅಥವಾ ವ್ಯಾಪಾರಸ್ಥರು ತಾವು ಅಪರಾಧಿ ಎಂಬುದು ಘೋಷಣೆಯಾಗುವುದಕ್ಕೂ ಮುನ್ನವೇ ತಮ್ಮ ಜಾನುವಾರುಗಳನ್ನು ಕಳೆದುಕೊಳ್ಳುತ್ತಾರೆ .

ಹಿಂದೆಯೇ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರವು ನಿಯಮಾವಳಿಗಳ ತಿದ್ದುಪಡಿ ಮಾಡಿ ಮತ್ತೊಮ್ಮೆ ಅಧಿಸೂಚನೆ ಹೊರಡಿಸುವುದಾಗಿ ಭರವಸೆ ನೀಡಿತ್ತು. ಆದರೆ, ಇದುವರೆಗೂ ಈ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆಗಳಾಗಿಲ್ಲ. ಗೋವುಗಳನ್ನು ನೈಜ ಮಾಲೀಕರಿಂದ ವಶಪಡಿಸಿಕೊಳ್ಳುವ ಉದ್ದೇಶದಿಂದ ಕಾನೂನು ಜಾರಿಗೊಳಿಸಲಾಗಿದೆ ಎಂದು ಸಂಘಟನೆಯು ಆರೋಪಿಸಿದೆ.

Also Read
ಅಪ್ರಾಪ್ತರ ಮೇಲಿನ ದೌರ್ಜನ್ಯ: ನಟ ನವಾಜುದ್ದೀನ್‌ ಸಿದ್ಧಿಕಿ ಬಂಧಿಸದಂತೆ ಅಲಾಹಾಬಾದ್‌ ಹೈಕೋರ್ಟ್‌ ಮಧ್ಯಂತರ ಪರಿಹಾರ

ಈ ನಿಯಮಾವಳಿಗಳು ಸಮಾಜಘಾತುಕ ಶಕ್ತಿಗಳು ಕಾನೂನನ್ನು ತಮ್ಮ ಕೈಗೆತ್ತಿಕೊಂಡು ಜಾನುವಾರುಗಳ ವ್ಯಾಪಾರಿಗಳನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಇದು ಸಮಾಜದ ಧ್ರುವೀಕರಣಕ್ಕೆ ಕಾರಣವಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಪ್ರಕರಣದ ಸಂಬಂಧ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಜಯಂತ್‌ ಸೂದ್‌ ಅವರು ಪ್ರಾಣಿಗಳಿಗೆ ಚಿತ್ರಹಿಂಸೆ ನೀಡುತ್ತಿರುವುದಕ್ಕೆ ಸಾಕ್ಷ್ಯವಿದೆ ಎಂದು ಹೇಳಿದ್ದಾರೆ. ಇತ್ತ ನ್ಯಾಯಾಲಯವು ಒಂದೋ ನಿಯಮಗಳಿಗೆ ತಿದ್ದುಪಡಿ ಮಾಡಬೇಕು, ಇಲ್ಲವೇ ಅದರ ಕಾರ್ಯಾಚರಣೆಗೆ ತಾನು ತಡೆ ನೀಡುವುದಾಗಿ ಹೇಳಿದೆ. ಕೇಂದ್ರ ಸರ್ಕಾರವು ಸಂಕ್ಷಿಪ್ತ ಪ್ರತಿಕ್ರಿಯೆ ಸಲ್ಲಿಸಲಿದ್ದು, ವಿಚಾರಣೆಯನ್ನು ಜನವರಿ 11ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com