ರಾಹುಲ್‌ ವಿರುದ್ಧ ಆಕ್ಷೇಪಾರ್ಹ ವಿಡಿಯೊ ಟ್ವೀಟ್‌: ಬಿಜೆಪಿ ಮುಖಂಡ ಅಮಿತ್‌ ಮಾಳವಿಯಾ ವಿರುದ್ಧದ ಎಫ್‌ಐಆರ್‌ಗೆ ತಡೆ

ಅಮಿತ್‌ ಮಾಳವೀಯ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸರು ಜೂನ್‌ 19ರಂದು ಐಪಿಸಿ ಸೆಕ್ಷನ್‌ಗಳಾದ 505 (2), 153ಎ, 120ಬಿ ಜೊತೆಗೆ 34 ಅಡಿ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆಗೆ ತಡೆ ವಿಧಿಸಲಾಗಿದೆ.
Amit Malviya and Karnataka HC
Amit Malviya and Karnataka HC
Published on

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ಆಕ್ಷೇಪಾರ್ಹವಾದ ಆನಿಮೇಟೆಡ್‌ ವಿಡಿಯೊ ಟ್ವೀಟ್‌ ಮಾಡಿದ ಆರೋಪದ ಮೇಲೆ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಮುಂದಿನ ವಿಚಾರಣೆಯವರೆಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ತಡೆ ವಿಧಿಸಿದೆ.

ಬಿಜೆಪಿಯ ಮುಖಂಡ ಅಮಿತ್‌ ಮಾಳವಿಯಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿದಾರರ ವಿರುದ್ಧ ಮುಂದಿನ ತನಿಖಾ ಪ್ರಕ್ರಿಯೆಗೆ ಅನುಮತಿಸುವುದು ಮೇಲ್ನೋಟಕ್ಕೆ ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ ಎಂದು ಹೇಳಿದೆ.

“ಆರೋಪಿತ ಟ್ವೀಟ್‌ ವ್ಯಕ್ತಿಯೊಬ್ಬರ ವಿರುದ್ಧ ಮಾಡಲಾಗಿದೆ. ವ್ಯಕ್ತಿಯೊಬ್ಬರ ವಿರುದ್ಧ ಮಾಡಿರುವ ಟ್ವೀಟ್‌ ಧರ್ಮ, ಜಾತಿ, ಹುಟ್ಟು ಅಥವಾ ವಾಸ ಸ್ಥಳದ ಆಧಾರದಲ್ಲಿ ಹೇಗೆ ವಿಭಿನ್ನ ಸಮುದಾಯ ಅಥವಾ ಗುಂಪುಗಳ ನಡುವೆ ಅಶಾಂತಿ ಅಥವಾ ಹಗೆತನವನ್ನು ಸೃಷ್ಟಿಸುತ್ತದೆ ಎಂಬುದನ್ನು ದೂರಿನಲ್ಲಿ ವಿವರಿಸಲಾಗಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

“ಕಾಂಗ್ರೆಸ್‌ ನಾಯಕನ ವಿರುದ್ಧ ಟ್ವೀಟ್‌ ಮಾಡಲಾಗಿದೆ. ಆದರೆ, ಸಮೂಹಗಳ ನಡುವೆ ಹಗೆತನವನ್ನು ಹೇಗೆ ಸೃಷ್ಟಿಸಿದೆ ಎಂಬುದನ್ನು ದೂರಿನಲ್ಲಿ ವಿವರಿಸಲಾಗಿಲ್ಲ. ಪೆಟ್ರಿಶಿಯಾ ಮುಖಿಮ್‌ ವರ್ಸಸ್‌ ಮೇಘಾಲಯ ಸರ್ಕಾರದ ನಡುವಿನ ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲೇಖಿಸಿರುವ ಪೀಠವು, ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖಾ ಪ್ರಕ್ರಿಯೆಗೆ ಅನುಮತಿಸಿದರೆ ಅದು ಮೇಲ್ನೋಟಕ್ಕೆ ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ” ಎಂದಿದ್ದು, ಮುಂದಿನ ವಿಚಾರಣೆವರೆಗೆ ಪ್ರಕರಣದ ತನಿಖೆಗೆ ತಡೆ ನೀಡಿದೆ.

ಮಾಳವಿಯಾ ಅವರನ್ನು ಪ್ರತಿನಿಧಿಸಿದ್ದ ಲೋಕಸಭಾ ಸದಸ್ಯ ಹಾಗೂ ವಕೀಲ ತೇಜಸ್ವಿ ಸೂರ್ಯ ಅವರು “ರಾಜಕೀಯ ಪ್ರೇರಿತವಾಗಿ ಎಫ್‌ಐಆರ್‌ ದಾಖಲಿಸಲಾಗಿದ್ದು, ಅರ್ಜಿದಾರರಿಗೆ ಬಂಧನ ಭೀತಿ ಇದೆ. ಟ್ವೀಟ್‌ ಮಾಡಲಾಗಿರುವ ವಿಡಿಯೋಗೆ ನೀಡಿರುವ ವಿವರಣೆಯನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅದು ಯಾವುದೇ ರೀತಿಯಲ್ಲೂ ವಿವಿಧ ಸಮುದಾಯಗಳ ನಡುವೆ ಭಾಷೆ, ಧರ್ಮದ ಆಧಾರದಲ್ಲಿ ಹಗೆತನಕ್ಕೆ ಅವಕಾಶ ಮಾಡಿಕೊಡುವುದಿಲ್ಲ” ಎಂದು ವಾದಿಸಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎ ಬೆಳ್ಳಿಯಪ್ಪ ಅವರು “ಟ್ವೀಟ್‌ ಮಾಡಲಾಗಿರುವ ವಿಡಿಯೊದಲ್ಲಿ ರಾಹುಲ್‌ ಗಾಂಧಿ ಅವರನ್ನು ದೇಶ ವಿರೋಧಿ ಎಂದು ಬಿಂಬಿಸುವ ಅಂಶಗಳಿವೆ. ಕಾಂಗ್ರೆಸ್‌ ನಾಯಕನ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಲಾಗಿದೆ” ಎಂದು ಆಕ್ಷೇಪಿಸಿದರು.

ಪ್ರಕರಣದ ಹಿನ್ನೆಲೆ: ಬಿಜೆಪಿ ಮುಖಂಡ ಅಮಿತ್ ಮಾಳವಿಯಾ ಅವರು ತಮ್ಮ ಖಾತೆಯಲ್ಲಿ ಆನಿಮೇಟೆಡ್ ವಿಡಿಯೊ ಪೋಸ್ಟ್ ಮಾಡಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿದೆ. ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯವರಿಂದ ದೇಶ ಒಡೆಯುವ ಕೆಲಸ ಮಾಡಲಾಗುತ್ತಿದೆ ಎನ್ನುವ ಅಂಶಗಳು ಇವೆ ಎಂದು ಆಕ್ಷೇಪಿಸಿ ಜೂನ್ 17ರಂದು ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನು ಆಧರಿಸಿ ಜೂನ್‌ 19ರಂದು ಹೈಗ್ರೌಂಡ್ಸ್‌ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 505 (2), 153ಎ, 120ಬಿ ಜೊತೆಗೆ 34ರ ಅಡಿ ಅಮಿತ್‌ ಮಾಳವಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆಗೆ ತಡೆ ವಿಧಿಸಲಾಗಿದೆ.

Kannada Bar & Bench
kannada.barandbench.com