ವಿವಾಹ ರದ್ದಾದ ನಂತರ ಸ್ತ್ರೀಧನವನ್ನು ಪತಿಯ ಮನೆಯವರು ಇರಿಸಿಕೊಂಡಿದ್ದರೆ ಅದು ವಿಚಾರಣೆಗೆ ಅರ್ಹ: ಹೈಕೋರ್ಟ್‌

ಸ್ತ್ರೀಧನದ ರೂಪದಲ್ಲಿ ಅರ್ಜಿದಾರರು & ಅವರ ಕುಟುಂಬದವರಿಗೆ ₹9 ಲಕ್ಷ ಪಾವತಿಸಲಾಗಿದೆ. ಅವರು ಇಟ್ಟುಕೊಂಡಿರುವ ಹಣದ ಹಿನ್ನೆಲೆಯಲ್ಲಿ ಅಗತ್ಯವಾಗಿ ಅರ್ಜಿದಾರರನ್ನು ಐಪಿಸಿ ಸೆಕ್ಷನ್‌ 406 ಅಡಿ ಅಪರಾಧಕ್ಕೆ ವಿಚಾರಣೆಗೆ ಒಳಪಡಿಸಬೇಕಿದೆ ಎಂದ ಪೀಠ.
Divorce
Divorce

ವಿವಾಹ ರದ್ದಾದ ನಂತರ ಪತಿಯ ಮನೆಗೆ ಪತ್ನಿ ತಂದಿದ್ದ ವಸ್ತುಗಳನ್ನು ಗಂಡನ ಮನೆಯವರು ಇರಿಸಿಕೊಂಡಿದ್ದರೆ ಅದು ವಿಚಾರಣೆಗೆ ಅರ್ಹ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

ಶಾಶ್ವತ ಜೀವನಾಂಶವನ್ನು ನೀಡಿ ವಿವಾಹ ರದ್ದುಗೊಂಡ ನಂತರವೂ ಸ್ತ್ರೀಧನವನ್ನು ಮರಳಿಸಲು ಕೋರಿ ಮಾಜಿ ಪತ್ನಿಯು ವಿಚಾರಣಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವುದನ್ನು ರದ್ದುಪಡಿಸಲು ಕೋರಿ ಗಣೇಶ್‌ ಪ್ರಸಾದ್‌ ಹೆಗ್ಡೆ, ವಿಶ್ವನಾಥ್‌ ಹೆಗ್ಡೆ ಮತ್ತು ಅಮಿತಾ ಹೆಗ್ಡೆ ಅವರು ಸಲ್ಲಿಸಿದ್ದ ಕ್ರಿಮಿನಲ್‌ ಮನವಿಯ ವಿಚಾರಣೆ ನಡೆಸಿದ್ದ‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಐಪಿಸಿ ಸೆಕ್ಷನ್‌ 406ರ (ನಂಬಿಕೆ ದ್ರೋಹ) ಅಡಿ ಕ್ರಿಮಿನಲ್‌ ಪ್ರಕ್ರಿಯೆ ರದ್ದುಪಡಿಸಲು ನಿರಾಕರಿಸಿದೆ.

“ಸ್ತ್ರೀಧನದ ರೂಪದಲ್ಲಿ ಅರ್ಜಿದಾರರು ಮತ್ತು ಅವರ ಕುಟುಂಬದವರಿಗೆ 9 ಲಕ್ಷ ರೂಪಾಯಿ ಪಾವತಿಸಲಾಗಿದೆ. ಅವರು ಇಟ್ಟುಕೊಂಡಿರುವ ಹಣದ ಹಿನ್ನೆಲೆಯಲ್ಲಿ ಅಗತ್ಯವಾಗಿ ಅರ್ಜಿದಾರರನ್ನು ಐಪಿಸಿ ಸೆಕ್ಷನ್‌ 406 ಅಡಿ ಅಪರಾಧಕ್ಕೆ ವಿಚಾರಣೆಗೆ ಒಳಪಡಿಸಬೇಕಿದೆ. ವಿಚಾರಣೆಯಲ್ಲಿ ಆರೋಪಮುಕ್ತವಾಗಿ ಅರ್ಜಿದಾರರು ಹೊರಬರಬೇಕಿದೆ” ಎಂದು ಪೀಠ ಹೇಳಿದೆ.

ಅರ್ಜಿದಾರರ ಪರ ವಕೀಲ ಎಸ್‌ ಬಾಲಕೃಷ್ಣನ್‌ ಅವರು “ಬಾಂಬೆ ಹೈಕೋರ್ಟ್ ವಿವಾಹ ರದ್ದುಪಡಿಸಿ ಪತ್ನಿಗೆ ಶಾಶ್ವತ ಜೀವನಾಂಶವಾಗಿ ₹4 ಲಕ್ಷ ನೀಡುವಂತೆ ಆದೇಶಿಸಿದೆ. ಅಂತೆಯೇ ಆ ಹಣವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ. ಆದ್ದರಿಂದ, ದೂರುದಾರ ಮಹಿಳೆಗೆ ಪಾವತಿಸಲು ಏನೂ ಉಳಿದಿಲ್ಲ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು” ಎಂದು ಕೋರಿದ್ದರು.

ದೂರುದಾರರ ಪರ ವಕೀಲ ಪ್ರದೀಪ್‌ ನಾಯಕ್‌ ಅವರು “ಶಾಶ್ವತ ಜೀವನಾಂಶವಾಗಿ ನೀಡಿರುವ ₹4 ಲಕ್ಷದಲ್ಲಿ ಮದುವೆಗೂ ಮುನ್ನ ನೀಡಿರುವ ಹಣ ಸೇರಿಲ್ಲ. ಮದುವೆ ವೇಳೆ ಸ್ತ್ರೀಧನದ ರೂಪದಲ್ಲಿ ಒಮ್ಮೆ 4 ಲಕ್ಷ ರೂಪಾಯಿ ಮತ್ತು ಇನ್ನೊಮ್ಮೆ ನೀಡಿರುವ ₹5 ಲಕ್ಷವನ್ನು ಪತಿ ಮತ್ತವರ ಕುಟುಂಬದವರು ಇಟ್ಟುಕೊಳ್ಳುವಂತಿಲ್ಲ. ನೋಟಿಸ್‌ ನೀಡಿದರೂ ಅದನ್ನು ಮರಳಿಸದಿರುವುದು ನಂಬಿಕೆ ದ್ರೋಹವಾಗಿದೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಕರ್ನಾಟಕ ಮೂಲದ ಸದ್ಯ ಮುಂಬೈನಲ್ಲಿ ನೆಲೆಸಿರುವ ಗಣೇಶ್‌ ಪ್ರಸಾದ್‌ ಹೆಗ್ಡೆ ಹಾಗೂ ಬೆಂಗಳೂರಿನ ಮಹಿಳೆ 1998ರಲ್ಲಿ ಮದುವೆಯಾಗಿದ್ದರು. ವಧುವಿನ ಮನೆಯವರು ₹9 ಲಕ್ಷ ಸ್ತ್ರೀಧನ ನೀಡಿದ್ದರು. 2001ರಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿ, ಪತ್ನಿ ಗಂಡನ ಮನೆ ತೊರೆದಿದ್ದರು. ವಿವಾಹ ರದ್ದು ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.

Also Read
ಪತಿ ವಿರುದ್ದ ನಿರಾಧಾರವಾಗಿ ನಪುಂಸಕತ್ವ ಆರೋಪ ಮಾಡುವುದು ಮಾನಸಿಕ ಕ್ರೌರ್ಯ ಎಂದ ಹೈಕೋರ್ಟ್‌; ವಿಚ್ಛೇದನಕ್ಕೆ ಅನುಮತಿ

ತದನಂತರ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು 2009ರಲ್ಲಿ ಖಾಸಗಿ ದೂರು ದಾಖಲಿಸಿದ್ದ ಪತ್ನಿಯು ಮದುವೆ ಸಂದರ್ಭದಲ್ಲಿ ನೀಡಿದ್ದ ₹9 ಲಕ್ಷವನ್ನು ಪತಿ ಹಿಂದಿರುಗಿಸಿಲ್ಲ ಎಂದು ಆರೋಪಿಸಿ, ನಂಬಿಕೆ ದ್ರೋಹ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪತಿಯ ಕುಟುಂಬ ಸದಸ್ಯರನ್ನೂ ಆರೋಪಿಗಳನ್ನಾಗಿ ಮಾಡಲಾಗಿತ್ತು.

ಈ ಮಧ್ಯೆ, 2014ರಲ್ಲಿ ಬಾಂಬೆ ಹೈಕೋರ್ಟ್ ದಂಪತಿಯ ವಿವಾಹ ರದ್ದುಗೊಳಿಸಿ ಪತ್ನಿಗೆ ₹4 ಲಕ್ಷ ಕಾಯಂ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಮತ್ತೊಂದೆಡೆ, 2015ರಲ್ಲಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ಪತ್ನಿ ದಾಖಲಿಸಿದ್ದ ದೂರಿನಲ್ಲಿ ಆರೋಪಗಳನ್ನು ಹೊರಿಸಿ ವಿಚಾರಣೆ ನಡೆಸುತ್ತಿತ್ತು. ಈ ಪ್ರಕರಣ ರದ್ದುಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ವಜಾ ಮಾಡಲು ನ್ಯಾಯಾಲಯ ನಿರಾಕರಿಸಿದೆ.

Attachment
PDF
Ganesh Prasad Hegde V. Surekha Shetty.pdf
Preview

Related Stories

No stories found.
Kannada Bar & Bench
kannada.barandbench.com