'ವರಾಹರೂಪಂ' ಹಾಡು ಪ್ರದರ್ಶಿಸದಂತೆ ʼಕಾಂತಾರʼ ಚಿತ್ರ ತಂಡಕ್ಕೆ ನಿರ್ಬಂಧ ವಿಧಿಸಿದ ಕೇರಳದ ಮತ್ತೊಂದು ನ್ಯಾಯಾಲಯ

ತನ್ನ ನವರಸಂ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಕೇರಳದ ಜನಪ್ರಿಯ ಸಂಗೀತ ತಂಡ ಥೈಕ್ಕುಡಂ ಬ್ರಿಜ್ ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಕೋರಿಕ್ಕೋಡ್ ನ್ಯಾಯಾಲಯ ವರಾಹರೂಪಂ ಹಾಡಿಗೆ ತಡೆ ನೀಡಿತ್ತು.
Kantara
Kantara

ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಚಲನಚಿತ್ರದ ʼಕಾಂತಾರʼದ ʼವರಾಹರೂಪಂʼ ಹಾಡನ್ನು ಪ್ರದರ್ಶಿಸದಂತೆ ಕೇರಳದ ಮತ್ತೊಂದು ನ್ಯಾಯಾಲಯ ಬುಧವಾರ ನಿರ್ಬಂಧ ವಿಧಿಸಿದೆ.

ನವರಸಂ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ಮಾತೃಭೂಮಿ ಮ್ಯೂಸಿಕ್ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ದಾವೆಗೆ ಸಂಬಂಧಿಸಿದಂತೆ ಪಾಲಕ್ಕಾಡ್ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಈ ಆದೇಶ ನೀಡಿದೆ.

ಮುಂದಿನ ಆದೇಶದವರೆಗೆ ಹಾಡಿನ ಪ್ರದರ್ಶನ, ಸ್ಟ್ರೀಮಿಂಗ್‌ ಅಥವಾ ಸಾರ್ವಜನಿಕರಿಗೆ ವಿತರಿಸದಂತೆ ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ ಎಂದು ಮಲಯಾಳಂ ದಿನಪತ್ರಿಕೆ ʼಮಾತೃಭೂಮಿʼ  ವರದಿ ತಿಳಿಸಿದೆ.

Also Read
ʼತೈಕ್ಕುಡಂ ಬ್ರಿಜ್‌ʼ ಮೊಕದ್ದಮೆ: ʼಕಾಂತಾರʼ ಚಲನಚಿತ್ರದ 'ವರಾಹರೂಪಂ' ಹಾಡಿಗೆ ಕೇರಳ ನ್ಯಾಯಾಲಯದ ನಿರ್ಬಂಧ

ಪೃಥ್ವಿರಾಜ್ ಪ್ರೊಡಕ್ಷನ್ಸ್, ಸಂಗೀತ ಸಂಯೋಜಕ ಬಿ ಅಜನೀಶ್ ಲೋಕನಾಥ್, ಅಮೆಜಾನ್, ಸ್ಪಾಟಿಫೈ, ಯೂಟ್ಯೂಬ್, ವಿಂಕ್ ಮ್ಯೂಸಿಕ್ ಮತ್ತು ಜಿಯೋಸಾವನ್‌ಗೆ ನೋಟಿಸ್ ನೀಡಲಾಗಿದೆ ಎಂದು ಅದು ಹೇಳಿದೆ.

ತನ್ನ ನವರಸಂ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಕೇರಳದ ಜನಪ್ರಿಯ ಸಂಗೀತ ತಂಡ ಥೈಕ್ಕುಡಂ ಬ್ರಿಜ್‌ ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಕೋರಿಕ್ಕೋಡ್‌ ಪ್ರಧಾನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ವರಾಹರೂಪಂ ಹಾಡಿಗೆ ತಡೆ ನೀಡಿದ್ದರು.

ರಿಷಬ್ ಶೆಟ್ಟಿ ಅಭಿನಯದ ಸೆಪ್ಟೆಂಬರ್ 30, 2022ರಂದು ಬ್ಲಾಕ್‌ಬಸ್ಟರ್ ಕನ್ನಡ ಚಲನಚಿತ್ರ ʼಕಾಂತಾರʼ ಬಿಡುಗಡೆಯಾಯಿತು. ಇದಾದ ಕೆಲ ದಿನಗಳಲ್ಲಿಯೇ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ಸಂಗೀತ ಸಂಯೋಜಕ ಬಿ ಅಜನೀಶ್ ಲೋಕನಾಥ್ 'ವರಾಹ ರೂಪಂ' ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪ ಎದುರಿಸಿದರು.

ಐದು ವರ್ಷಗಳ ಹಿಂದೆ ಮಾತೃಭೂಮಿ ಕಪ್ಪಾ ಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ʼನವರಸಂʼ ಗೀತೆಯನ್ನು ಈವರೆಗೆ ಸುಮಾರು 62 ಲಕ್ಷ ಬಾರಿ ವೀಕ್ಷಿಸಲಾಗಿದೆ. ಹೊಂಬಾಳೆ ಫಿಲಂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ 13 ದಿನಗಳ ಹಿಂದೆ  ಬಿಡುಗಡೆಯಾದ ವರಾಹ ರೂಪಂ ಈಗಾಗಲೇ 2.3 ಕೋಟಿ ವೀಕ್ಷಣೆ ಪಡೆದುಕೊಂಡಿದೆ.

Kannada Bar & Bench
kannada.barandbench.com