ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆ ಗೋಲಿಬಾರ್‌: ಪೊಲೀಸರು ತಪ್ಪು ಮಾಡಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದ ಸರ್ಕಾರ

ಸಿಎಎ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ 2019ರ ಡಿಸೆಂಬರ್‌ 19ರಂದು ಮಂಗಳೂರು ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದರು. ಜಲೀಲ್‌ ಮತ್ತು ನೌಶೀನ್‌ ಎಂಬ ಇಬ್ಬರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.
ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆ ಗೋಲಿಬಾರ್‌: ಪೊಲೀಸರು ತಪ್ಪು ಮಾಡಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದ ಸರ್ಕಾರ
Karnataka HC

ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ್ದ ಹಿಂಸಾಚಾರ ಮತ್ತು ಗೋಲಿಬಾರ್‌ನಲ್ಲಿ ಪೊಲೀಸರಿಂದ ಲೋಪವಾಗಿಲ್ಲ ಎಂದು ಮ್ಯಾಜಿಸ್ಟ್ರೇಟ್‌ ತನಿಖೆಯಲ್ಲಿ ಹೇಳಲಾಗಿದೆ ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. 2019ರ ಡಿಸೆಂಬರ್‌ 19ರಂದು ನಡೆದಿದ್ದ‌ ಪೊಲೀಸರ ಗುಂಡಿನ ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದರು.

ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್‌ ಎಸ್‌ ದೊರೆಸ್ವಾಮಿ ಮತ್ತು ಮಂಗಳೂರು ನಗರದ ಮಾಜಿ ಮೇಯರ್‌ ಕೆ ಅಶ್ರಫ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು “ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ತನಿಖಾ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಪೊಲೀಸರ ವಿರುದ್ಧದ ಆರೋಪಗಳ ಕುರಿತೂ ತನಿಖೆ ನಡೆಸಲಾಗಿದೆ. ಗಲಭೆಗೆ ಕಾರಣರಾದವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ದೂರುಗಳ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ” ಎಂದರು. ಜುಲೈ 26ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್‌ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ರಾಜ್ಯ ಸರ್ಕಾರವು ಸಲ್ಲಿಸಿದ್ದು, ಈ ಸಂಬಂಧ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಕೋರಿತ್ತು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಪೊಲೀಸರ ವಿರುದ್ಧ ಕನಿಷ್ಠ 10 ದೂರುಗಳನ್ನು ದಾಖಲಿಸಲಾಗಿದ್ದು, ಯಾವುದರ ಕುರಿತೂ ತನಿಖೆ ನಡೆಸಲಾಗಿಲ್ಲ. ಪೊಲೀಸರ ವಿರುದ್ಧ ದೂರು ನೀಡಿದರೂ ಎಫ್‌ಐಆರ್‌ ದಾಖಲಿಸಲಾಗಿಲ್ಲ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸಕಾರಾತ್ಮಕವಾಗಿ ನಿರ್ದೇಶಿಸಿದ್ದು, ಎಫ್ಐಆರ್‌ ದಾಖಲಿಸುವಂತೆ ಆದೇಶ ಮಾಡಿದೆ. ಮ್ಯಾಜಿಸ್ಟ್ರೇಟ್ ತನಿಖೆ ಪೊಲೀಸರಿಂದ, ಪೊಲೀಸರಿಗಾಗಿ, ಪೊಲೀಸರಿಗೋಸ್ಕರ ಎಂಬಂತಿದೆ. ಪೊಲೀಸರ ವಿರುದ್ಧ ದಾಖಲಾದ ದೂರುಗಳ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಜುಲೈನಲ್ಲಿ ನ್ಯಾಯಾಲಯ ನಿರ್ದೇಶನ ನೀಡಿದೆ. ಆದರೆ, ಈವರೆಗೆ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ” ಎಂದರು.

ಇಲ್ಲಿಯವರೆಗಿನ ನ್ಯಾಯಾಲಯದ ಆದೇಶಗಳಿಗೆ ಸಂಬಂಧಿಸಿದಂತೆ ಸಂಕ್ಷಿಪ್ತವಾಗಿ ಹಿರಿಯ ಅಧಿಕಾರಿಗಳಿಂದ ಅನುಪಾಲನಾ ವರದಿ ಸಲ್ಲಿಸಬೇಕು. ಮ್ಯಾಜಿಸ್ಟ್ರೇಟ್ ತನಿಖಾ ವರದಿ, ದೂರುಗಳ ತನಿಖೆ ಬಗ್ಗೆ ಅಫಿಡವಿಟ್‌ ಸಲ್ಲಿಸಬೇಕು. ಮುಚ್ಚಿದ ಲಕೋಟೆ ತೆರೆದು ಮ್ಯಾಜಿಸ್ಟ್ರೇಟ್‌ ತನಿಖೆ ಪರಿಶೀಲಿಸಿದ ಬಳಿಕ ಅರ್ಜಿದಾರರ ಪರ ವಕೀಲರಿಗೆ ವರದಿ ನೀಡುವಂತೆ ಸೂಚಿಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ಪೀಠವು ನವೆಂಬರ್ 30ಕ್ಕೆ ಮುಂದೂಡಿತು.

Also Read
ಸಿಎಎ ವಿರೋಧಿ ಪ್ರತಿಭಟನೆ: ಮಂಗಳೂರು ಗಲಭೆಯ ಆಪಾದನೆ ಹೊರಿಸಲಾದ 21 ಮಂದಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಅರ್ಜಿದಾರರು ಕೋರಿದ್ದು, ಸ್ಥಳೀಯ ಪೊಲೀಸರು ಪಕ್ಷಪಾತದಿಂದ ವರ್ತಿಸಿದ್ದಾರೆ. ಗಲಭೆಯಲ್ಲಿ ಗಾಯಗೊಂಡವರು ನೀಡಿದ ದೂರನ್ನು ಆಧರಿಸಿ ಪೊಲೀಸರು ದೂರು ದಾಖಲಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ 2019ರ ಡಿಸೆಂಬರ್‌ 19ರಂದು ಮಂಗಳೂರು ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದರು. ಮಂಗಳೂರಿನ ಬಂದರ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜಲೀಲ್‌ ಮತ್ತು ನೌಶೀನ್‌ ಎಂಬ ಇಬ್ಬರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು.

Related Stories

No stories found.