[ಸಿಎಎ ವಿರೋಧಿ ಭಾಷಣ] ರಾಷ್ಟ್ರದ್ರೋಹ ಪ್ರಕರಣದಲ್ಲಿ ಶಾರ್ಜೀಲ್‌ ಇಮಾಮ್‌ಗೆ ಜಾಮೀನು ತಿರಸ್ಕರಿಸಿದ ದೆಹಲಿ ನ್ಯಾಯಾಲಯ

2019ರ ಡಿಸೆಂಬರ್‌ 13ರಂದು ಜಾಮೀಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಇಮಾಮ್‌ ಅವರು ಮಾಡಿದ ಭಾಷಣ ಕೋಮು ವಿಚಾರಗಳಿಂದ ಕೂಡಿದ್ದು, ಅದು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಮಾಡುವಂತಿತ್ತು ಎಂದು ನ್ಯಾಯಾಲಯ ಹೇಳಿದೆ.
Sharjeel Imam
Sharjeel Imam

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ 2019ರ ಡಿಸೆಂಬರ್‌ನಲ್ಲಿ ನಡೆದಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಮಾಡಿದ್ದ ಭಾಷಣ ಆಧರಿಸಿ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶಾರ್ಜೀಲ್‌ ಇಮಾಮ್‌ ಅವರ ವಿರುದ್ಧ ದಾಖಲಿಸಿದ್ದ ರಾಷ್ಟ್ರದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ದೆಹಲಿ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

2019ರ ಡಿಸೆಂಬರ್‌ 13ರಂದು ಜಾಮೀಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಇಮಾಮ್‌ ಅವರು ಮಾಡಿದ ಭಾಷಣ ಕೋಮು ದ್ವೇಷದ ವಿಚಾರಗಳಿಂದ ಕೂಡಿದ್ದು, ಅದು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಮಾಡುವಂತಿತ್ತು ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅನೂಜ್‌ ಅಗರ್ವಾಲ್‌ ಹೇಳಿದ್ದಾರೆ.

“2019ರ ಡಿಸೆಂಬರ್‌ 13ರ ಭಾಷಣವನ್ನು ಓದಿದರೆ ಅದು ಸ್ಪಷ್ಟವಾಗಿ ಕೋಮು/ವಿಭಜನಕಾರಿ ವಿಚಾರಗಳಿಂದ ಕೂಡಿದೆ. ಭಾಷಣವು ಪ್ರಚೋದನಕಾರಿ ವಿಚಾರಗಳಿಂದ ಕೂಡಿದ್ದು, ಇದು ಸಾರ್ವಜನಿಕ ನೆಮ್ಮದಿ, ಶಾಂತಿ ಮತ್ತು ಸೌಹಾರ್ದದ ಮೇಲೆ ಉದ್ದೇಶಪೂರ್ವಕ ಪ್ರಭಾವ ಉಂಟು ಮಾಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ನಮ್ಮ ಸಂವಿಧಾನದಲ್ಲಿ ಅತ್ಯುನ್ನತ ಸ್ಥಾನದಲ್ಲಿ ಇರಿಸಲಾಗಿದೆ. ಇದನ್ನು ಸಮಾಜದಲ್ಲಿ ಕೋಮು ಶಾಂತಿ ಮತ್ತು ಸೌಹಾರ್ದ ಕೆಡಿಸಲು ಬಳಸಲಾಗದು” ಎಂದು ನ್ಯಾಯಾಲಯ ಹೇಳಿದೆ.

“ಎಲ್ಲವನ್ನು ಅರಿಯುವ, ಮುಕ್ತವಾಗಿ ವಾದಿಸುವ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ಸ್ವಾತಂತ್ರ್ಯ ಕೊಡಿ” ಎಂದಿದ್ದ ಬ್ರಿಟಿನ್‌ ಮಹತ್ವದ ಕವಿ ಹಾಗೂ ಮೇಧಾವಿ ಜಾನ್‌ ಮಿಲ್ಟನ್‌ನ ಸಾಲುಗಳನ್ನು ನ್ಯಾಯಾಧೀಶರು ಜಾಮೀನು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ, ಸ್ವಾಮಿ ವಿವೇಕಾನಂದರು ಹೇಳಿರುವ “ನಮ್ಮ ಯೋಚನೆಗಳಿಂದ ನಾವು ರೂಪಿತವಾಗಿದ್ದು, ನಮ್ಮ ಯೋಚನೆಯ ಬಗ್ಗೆ ನಾವು ಜಾಗರೂಕವಾಗಿರಬೇಕು. ಯೋಚನೆಗಳು ಜೀವಂತವಾಗಿದ್ದು; ಅವು ಬಲು ದೂರ ಸಾಗುತ್ತವೆ” ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಹಕ್ಕುಗಳನ್ನು ನೀಡಿರುವ ನಮ್ಮ ಸಂವಿಧಾನವು ಸಾರ್ವಜನಿಕ ಶಾಂತಿ ಮತ್ತು ಅಪರಾಧ ಎಸಗಲು ಪ್ರಚೋದಿಸುವುದನ್ನು ತಡೆಯಲು ಕೆಲವು ನಿರ್ಬಂಧಗಳನ್ನೂ ವಿಧಿಸಿದೆ ಎಂದು ಹೇಳಿದೆ. ಇಮಾಮ್‌ ಭಾಷಣದ ಕುರಿತು ಸೂಕ್ತ ಸಂದರ್ಭದಲ್ಲಿ ಆಳವಾಗಿ ವಿಶ್ಲೇಷಿಸುವ ಅಗತ್ಯವಿದ್ದು, ಅಂದಿನ ಅವರ ಭಾಷಣವು ಸ್ಪಷ್ಟವಾಗಿ ಕೋಮು ಮತ್ತು ವಿಭಜನಕಾರಿ ವಿಚಾರಗಳಿಂದ ಕೂಡಿದೆ ಎಂದಿದೆ.

Also Read
[ದೆಹಲಿ ಗಲಭೆ] ಖಾಲಿದ್‌ ಮತ್ತು ಇಮಾಂ ಸೈದ್ಧಾಂತಿಕವಾಗಿ ಒಗ್ಗೂಡಿದವರಲ್ಲ: ದೆಹಲಿ ನ್ಯಾಯಾಲಯಕ್ಕೆ ಖಾಲಿದ್ ವಕೀಲರ ಮಾಹಿತಿ

“ಈ ಹಂತದಲ್ಲಿ ಅರ್ಜಿದಾರ/ಆರೋಪಿ ಶಾರ್ಜೀಲ್‌ ಇಮಾಮ್‌ಗೆ ಜಾಮೀನು ನೀಡಲು ನಾನು ಒಲವು ತೋರುತ್ತಿಲ್ಲ. ಆರೋಪಿಯು ಸಹ-ಆರೋಪಿಯೊಂದಿಗೆ ಯಾವುದೇ ಸಮಾನತೆಯನ್ನು ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಆತನ ಪಾತ್ರವು ಇತರ ಸಹ-ಆರೋಪಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಅದರಂತೆ, ಜಾಮೀನು ಮಂಜೂರು ಮಾಡಲು ಅರ್ಜಿದಾರ/ಆರೋಪಿ ಶಾರ್ಜೀಲ್‌ ಇಮಾಮ್ ಪರವಾಗಿ ಸಲ್ಲಿಸಲಾದ ತ್ವರಿತ ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಇಮಾಮ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 124ಎ (ರಾಷ್ಟ್ರದ್ರೋಹ), 153ಎ (ಧರ್ಮ, ಜಾತಿ, ಹುಟ್ಟಿನ ಸ್ಥಳ, ವಾಸ ಸ್ಥಾನ, ಭಾಷೆ ಇತ್ಯಾದಿ ಆಧಾರದಲ್ಲಿ ಉಭಯ ಸಮುದಾಯಗಳ ನಡುವೆ ದ್ವೇಷ ಹರಡುವುದು) ಅಡಿ ಪ್ರಕರಣ ದಾಖಲಿಸಲಾಗಿದೆ. ಈಶಾನ್ಯ ದೆಹಲಿಯಲ್ಲಿ ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆಯೂ ಇಮಾಮ್‌ ವಿರುದ್ಧ ದೂರು ದಾಖಲಾಗಿದ್ದು, ಸದ್ಯ ಅವರು ಜೈಲಿನಲ್ಲಿದ್ದಾರೆ.

Related Stories

No stories found.
Kannada Bar & Bench
kannada.barandbench.com