ತರಾತುರಿಯಲ್ಲಿ ಮಂಡನೆಯಾದ ರಾಜ್ಯ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ: ಮತಾಂತರಕ್ಕೆ ವಿವಿಧ ಬಗೆಯ ಅಂಕುಶ

ವಿಧೇಯಕ ಕುರಿತಂತೆ ನಾಳೆ ಚರ್ಚೆಗೆ ಅವಕಾಶ ನೀಡುವುದಾಗಿ ಸದನಕ್ಕೆ ಸಭಾಧ್ಯಕ್ಷರು ತಿಳಿಸಿದರು. ಇದರ ಬೆನ್ನಿಗೇ ಕಾಂಗ್ರೆಸ್ ಸಭಾತ್ಯಾಗ ಮಾಡಿತು.
ತರಾತುರಿಯಲ್ಲಿ ಮಂಡನೆಯಾದ ರಾಜ್ಯ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ: ಮತಾಂತರಕ್ಕೆ ವಿವಿಧ ಬಗೆಯ ಅಂಕುಶ

ಮತಾಂತರದ ಮೇಲೆ ನಿಷೇಧ ಹೇರುವ ʼಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯಿದೆ-2021’ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಇಂದು ಮಂಡಿಸಲಾಗಿದೆ. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧೇಯಕ ಮಂಡನೆಗೆ ತರಾತುರಿಯಲ್ಲಿ ಅವಕಾಶ ನೀಡುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧೇಯಕ ಮಂಡಿಸಿದರು.

ಪ್ರತಿ ನೀಡದೆ ವಿಧಿಯೇಕ ಮಂಡಿಸಿದ್ದನ್ನು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧಿಸಿದರು. ಸಂವಿಧಾನದ 21ನೇ ವಿಧಿಗೆ ಮಸೂದೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಡಿ ಕೆ ಶಿವಕುಮಾರ್‌ ತಮಗೆ ದೊರೆತ ಮಸೂದೆಯ ಪ್ರತಿಯನ್ನು ಹರಿದುಹಾಕಿದರು. ಮಸೂದೆಯ ಕುರಿತು ನಾಳೆ ಚರ್ಚೆಗೆ ಅವಕಾಶ ನೀಡುವುದಾಗಿ ಸದನಕ್ಕೆ ಸಭಾಧ್ಯಕ್ಷರು ತಿಳಿಸಿದರು. ಇದರ ಬೆನ್ನಿಗೇ ಕಾಂಗ್ರೆಸ್‌ ಸಭಾತ್ಯಾಗ ಮಾಡಿತು.

ಏನು ಹೇಳುತ್ತದೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂರಕ್ಷಣೆ ಕಾಯಿದೆ?

  • ಬಲವಂತ ವಂಚನೆ ಒತ್ತಾಯ ಹಾಗೂ ಆಮಿಷದ ಮೂಲಕ ಹಾಗೂ ಮದುವೆಯ ಭರವಸೆ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧ.

  • ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಸೇರಿದವರು, ಅಪ್ರಾಪ್ತರು, ಮಹಿಳೆಯರು, ಬುದ್ಧಿಮಾಂದ್ಯರನ್ನು ಮತಾಂತರ ಮಾಡಿದರೆ ಅಂತಹವರಿಗೆ ಕನಿಷ್ಠ 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ, ₹ 50,000 ದಂಡ.

  • ಇತರೆ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹ 25,000 ದಂಡ.

  • ಸಾಮೂಹಿಕ ಮತಾಂತರ ಮಾಡಿದ ವ್ಯಕ್ತಿಗೆ 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹ 1 ಲಕ್ಷ ದಂಡ.

  • ಮತಾಂತರಗೊಂಡ ವ್ಯಕ್ತಿ ತನ್ನ ಹಿಂದಿನ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಮತಾಂತರವೆಂದು ಪರಗಣಿಸುವುದಿಲ್ಲ.

  • ಸಾಮೂಹಿಕ ಮತಾಂತರ ಮಾಡಿದ ವ್ಯಕ್ತಿಗೆ 3ರಿಂದ 10 ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲುಶಿಕ್ಷೆಯಿಂದ, ಇವೆರಡರಲ್ಲಿ ಯಾವುದಾದರ ಒಂದು ಬಗೆಯ ಕಾರಾವಾಸದಿಂದ ದಂಡಿತರಾಗುವರು, ಹಾಗೂ ಅಂತಹವರಿಗೆ ₹ 1 ಲಕ್ಷ ಜುಲ್ಮಾನೆ.

  • ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ 5 ಲಕ್ಷ ರೂಪಾಯಿಯವರೆಗೆ ವಿಸ್ತರಿಸಬಹುದಾದ ಯುಕ್ತ ಪರಿಹಾರವನ್ನು ನ್ಯಾಯಾಲಯ ಮಂಜೂರು ಮಾಡತಕ್ಕದ್ದು ಅದು ಜುಲ್ಮಾನೆಗೆ ಹೆಚ್ಚುವರಿಯಾಗಿರತಕ್ಕದ್ದು.

  • ಅಪರಾಧ ಪುನರಾವರ್ತನೆಯಾದರೆ ಐದು ವರ್ಷ ಸೆರೆವಾಸ ಹಾಗೂ ಎರಡು ಲಕ್ಷ ದಂಡ ವಸೂಲಿ.

  • ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕ ಮಾತ್ರ ಉದ್ದೇಶಕ್ಕಾಗಿ ನಡೆದ ವಿವಾಹ ಅಸಿಂಧುವಾಗಲಿದೆ.

  • ಮತಾಂತರಗೊಂಡ ವ್ಯಕ್ತಿಯ ಪೋಷಕರು ಒಡಹುಟ್ಟಿದವರು, ಸಹವರ್ತಿಗಳು ಹಾಗೂ ಸಹೋದ್ಯೋಗಿಗಳು ವ್ಯಕ್ತಿ ಮತಾಂತರಗೊಂಡ ಬಗ್ಗೆ ದೂರು ನೀಡಿದರೆ ಎಫ್‌ಐಆರ್‌ ದಾಖಲಿಸಲು ಅವಕಾಶ.

  • ಜಾಮೀನು ರಹಿತ, ಸಂಜ್ಞೇಯ ಅಪರಾಧವಾಗಲಿರುವ ಮತಾಂತರ.

  • ಯಾವುದೇ ವ್ಯಕ್ತಿ ಧರ್ಮ ಬದಲಿಸುವುದಾದರೆ ಜಿಲ್ಲಾಧಿಕಾರಿಗಳಿಗೆ 30 ದಿನ ಮೊದಲು ನಮೂನೆ 1ರಲ್ಲಿ ಹಾಗೂ ಮತಾಂತರ ಮಾಡುವ ವ್ಯಕ್ತಿ ನಮೂನೆ 2ರಲ್ಲಿ ಅರ್ಜಿ ಸಲ್ಲಿಸಬೇಕು. 30 ದಿನಗಳ ಒಳಗಾಗಿ ಇದಕ್ಕೆ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆ ಮೂಲಕ ವಿಚಾರಣೆ ನಡೆಸಬೇಕು. ವಿಚಾರಣೆ ವೇಳೆ ತಪ್ಪು ನಡೆದಿದ್ದರೆ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೊಲೀಸ್‌ ಇಲಾಖೆಗೆ ಸೂಚಿಸಲು ಅವಕಾಶವಿದೆ.

  • ಮತಾಂತರಗೊಂಡ ವ್ಯಕ್ತಿ ಮತಾಂತಗರ ದಿನದಿಂದ ಹಿಡಿದು ಮೂಲ ಧರ್ಮ ಮತಾಂತರಗೊಂಡ ಧರ್ಮ ಇತ್ಯಾದಿ ವಿವರಗಳನ್ನು ಜಿಲ್ಲಾಧಿಕಾರಿಗೆ ನೀಡಬೇಕು. ಮತಾಂತರಗೊಂಡ ವ್ಯಕ್ತಿ ತನ್ನ ಗುರುತು ಸ್ಥಾಪಿಸಲು ಮತ್ತು ಘೋಷಣೆಯ ಅಂಶ ಸ್ವೀಊಕರಿಸಲು ಘೋಷಣೆ ಕಳಿಸಿರುವ/ಸಲ್ಲಿಸಿದ ದಿನದಿಂದ ಇಪ್ಪತ್ತು ದಿನಗಳ ಒಳಗಾಗಿ ಜಿಲ್ಲಾ ದಂಡಾಧಿಕಾರಿ ಎದುರು ಹಾಜರಾಗಬೇಕು.

  • ಬಲವಂತದ ಮತಾಂತರ ನಡೆದಿಲ್ಲ ಎಂಬುದನ್ನು ಸಾಬೀತು ಮಾಡುವ ಹೊಣೆ ಮತಾಂತರ ಮಾಡುವ ಮತ್ತು ಮತಾಂತರಕ್ಕೆ ನೆರವು ನೀಡಿದ ವ್ಯಕ್ತಿಗೆ ಸೇರಿದ್ದು.

  • ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದರ ಅಡಿ ದೊರೆಯಲಿದೆ.

ವಿಧೇಯಕದ ಪ್ರತಿಯನ್ನು ಇಲ್ಲಿ ಓದಿ:

Attachment
PDF
Karnataka Protection of Right to Freedom of Religion Bill, 2021.pdf
Preview

Related Stories

No stories found.
Kannada Bar & Bench
kannada.barandbench.com