ಮತಾಂತರ ನಿಷೇಧ ಕಾಯಿದೆಗಳು ದಲಿತರನ್ನು ಗುರಿಯಾಗಿಸಿಕೊಂಡಿವೆ: ನ್ಯಾ. ಎಸ್ ಮುರಳೀಧರ್

ಒರಿಸ್ಸಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮುರಳೀಧರ್ ಅವರು ಮತಾಂತರ ನಿಷೇಧ ಕಾಯಿದೆಗಳು ವಿನಾಶಕಾರಿ ಎಂದಿದ್ದು ಅವು ಜನತೆ ತಮ್ಮ ಖಾಸಗಿ ಆಯ್ಕೆಗಳನ್ನು ಸಾರ್ವಜನಿಕವಾಗಿಸಲು ಒತ್ತಾಯಿಸುತ್ತವೆ ಎಂದು ಹೇಳಿದರು.
Senior Advocate Dr. S Muralidhar
Senior Advocate Dr. S Muralidhar
Published on

ಮತಾಂತರ ನಿಷೇಧ ಕಾಯಿದೆಗಳು ವ್ಯಕ್ತಿಯ ಆಯ್ಕೆ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು ದಲಿತರನ್ನು ಗುರಿಯಾಗಿಸಿಕೊಂಡಿವೆ ಎಂದು ಒರಿಸ್ಸಾ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಹಿರಿಯ ವಕೀಲ ಡಾ . ಎಸ್. ಮುರಳೀಧರ್ ಈಚೆಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಎಡಿಎಫ್ ಇಂಡಿಯಾ ಸಮಿತಿ ಫೆಬ್ರವರಿ 28ರಂದು ನವೆದೆಹಲಿಯಲ್ಲಿ ಹಮ್ಮಿಕೊಂಡಿದ್ದ ಮತಾಂತರ ವಿರೋಧಿ ಕಾಯಿದೆಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಕೆಲವು ರೀತಿಯ ಬೆದರಿಕೆಯ ಪರಿಣಾಮವಾಗಿ ಮತಾಂತರ ನಡೆಯುತ್ತದೆ ಎಂದು ಭಾವಿಸುವುದು ಅಂತಹ ಕಾಯಿದೆಗಳಲ್ಲಿ ಅಂತರ್ಗತವಾಗಿರುವ ನ್ಯೂನತೆ ಎಂದು ಅಭಿಪ್ರಾಯಪಟ್ಟರು.  

ಉಪನ್ಯಾಸದ ಪ್ರಮುಖಾಂಶಗಳು

  • ಮತಾಂತರ ನಿಷೇಧ ಕಾಯಿದೆಗಳು ಬಲವಂತದ ಮತಾಂತರದ ವಿರುದ್ಧವಾಗಿರದೆ ಆಯ್ಕೆ ಸ್ವಾತಂತ್ರ್ಯದ ವಿರುದ್ಧವಾಗಿವೆ.

  • ಮತಾಂತರ ನಿಷೇಧ ಕಾಯಿದೆಗಳಲ್ಲೆಲ್ಲಾ ಒಂದು ಬಗೆಯ ಊಹೆ ಇದ್ದು ಒಬ್ಬ ನಿರ್ದಿಷ್ಟ ಧರ್ಮಕ್ಕೆ ಸೇರಿದ ಅಥವಾ ಜನಿಸಿದ ವ್ಯಕ್ತಿ ಮತ್ತೊಂದು ಧರ್ಮ ಸೇರಲು ನಿರ್ಧರಿಸಿದರೆ ಅದು ಕೆಲ ರೀತಿಯ ಬೆದರಿಕೆಯ ಪರಿಣಾಮವಾಗಿ ಆದ ಮತಾಂತರ ಎಂಬುದಾಗಿದೆ.

  • ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಆತನನ್ನು ಮತಾಂತರಿಸಿದ ಆರೋಪ ಹೊತ್ತಾತನ ಮೇಲೆ ಪುರಾವೆಯ ಭಾರವನ್ನು ಈ ಕಾಯಿದೆಗಳು ಏಕೆ ವರ್ಗಾಯಿಸುತ್ತವೆ ಎಂಬುದನ್ನು ಈ ಮೂಲಭೂತ ಊಹೆ ವಿವರಿಸುತ್ತದೆ.

  • ಇಂತಹ ಕಾಯಿದೆಗಳು ಆಯ್ಕೆ ಸ್ವಾತಂತ್ರ್ಯವನ್ನು ಗುರಿಯಾಗಿಸಿಕೊಂಡಿದ್ದು ಅವುಗಳ ಗುರಿ ಮತಾಂತರಿಸುವ ವ್ಯಕ್ತಿ ಮಾತ್ರವಲ್ಲದೆ ಸ್ವ ಇಚ್ಛೆಯಿಂದ ಮತಾಂತರವಾಗಲು ಬಯಸುವಂತಹ ದಲಿತ ಸಮುದಾಯವಾಗಿದೆ.  

  • ಬೌದ್ಧಧರ್ಮ ಸ್ವೀಕರಿಸಲು ಬಯಸುವ ದಲಿತನೊಬ್ಬ ಜಿಲ್ಲಾಧಿಕಾರಿ ಎದುರು ಬೇರೆ ಧರ್ಮವನ್ನು ಏಕೆ ಆಯ್ಕೆ ಮಾಡುತ್ತಿದ್ದೇನೆ ಎಂದು ವಿವರಿಸಬೇಕಾಗುತ್ತದೆ. ತನ್ನ ವೈಯಕ್ತಿಕ ಆಯ್ಕೆಯನ್ನು ಜಗಜ್ಜಾಹೀರುಗೊಳಿಸಬೇಕಾಗುತ್ತದೆ.

  • ಈ ಕಾಯಿದೆಗಳು ಜನರು ತಮ್ಮ ಖಾಸಗಿ ಆಯ್ಕೆಗಳನ್ನು ಸಾರ್ವಜನಿಕವಾಗಿಸಲು ಒತ್ತಾಯಿಸುತ್ತವೆ. ವ್ಯಕ್ತಿಗಳ ವೈಯಕ್ತಿಕ ಆಯ್ಕೆಯನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳಬೇಕಾದಂತಹ ಸ್ಥಿತಿಯನ್ನು ತಂದೊಡ್ಡಿವೆ. ಇದು ಈ ಕಾಯಿದೆಗಳ ಹಾನಿಕರ ಅಂಶ.

  • ಕಾಯಿದೆಗಳಡಿ ಯಾರು ದೂರು ಸಲ್ಲಿಸಬಹುದು ಎಂಬ ಅಂಶದಲ್ಲೂ ಸಮಸ್ಯೆ ಇದೆ. ಬಲವಂತದ ಮತಾಂತರದ ವಿರುದ್ಧ ದೂರು ನೀಡಬೇಕಿರುವುದು ಹಾಗೆ ಮತಾಂತರಕ್ಕೆ ಒಳಗಾದ ವ್ಯಕ್ತಿ ಮಾತ್ರ. ಆದರೆ ಈ ಕಾಯಿದೆಗಳು ನೆಂಟರಿಷ್ಟರು ಹೀಗೆ ಯಾರು ಬೇಕಾದರೂ ದೂರು ನೀಡಲು ಅವಕಾಶ ನೀಡುತ್ತವೆ.

  • ಹೀಗಾದಾಗ ನಿಗಾ ಗುಂಪುಗಳು ಮತಾಂತರ ಘೋಷಿಸಿರುವ ಮಾಹಿತಿ ಪಡೆದು ಅಂತರ್‌ ಧರ್ಮೀಯ ವಿವಾಹವಾಗುವವರಿಗೆ ಬೆದರಿಕೆಯೊಡ್ಡುವ ಸಾಧ್ಯತೆಗಳಿವೆ.

  • ಈ ಕಾಯಿದೆಗಳನ್ನು ಕೇವಲ ಅಸಾಂವಿಧಾನಿಕ ಎಂದು ಘೋಷಿಸಿದರಷ್ಟೇ ಸಾಲದು ಸಮಾಜ ಬದಲಾಗುವ ಅಗತ್ಯವಿದೆ.

  • ಸಾಂವಿಧಾನಿಕ ಮೌಲ್ಯ ಮತ್ತು ಆಶಯಗಳಿಗೆ ವಿರುದ್ಧವಾಗಿ ದೇಶದ ಸಾಮಾಜಿಕ ಆಚರಣೆಗಳು ಜಡ್ಡುಗಟ್ಟಿವೆ. ಸಮಾಜ ಬದಲಾದಾಗ, ಪೂರ್ವಾಗ್ರಹಗಳಿಂದ ವಿಮುಕ್ತವಾದಾಗ ನಿಜವಾದ ಮನುಷ್ಯರಾಗಿ ನಮಗೆ ಗೆಲುವು ದೊರೆಯುತ್ತದೆ.  

ಎಡಿಎಫ್‌ ಅಂತರರಾಷ್ಟ್ರೀಯ ಘಟಕದ ನಿರ್ದೇಶಕಿ ತೆಹ್ಮಿನಾ ಅರೋರಾ, ಎಡಿಎಫ್‌ ಭಾರತ ಘಟಕದ ನಿರ್ದೇಶಕ ಶಿಜು ಥಾಮಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Kannada Bar & Bench
kannada.barandbench.com