ಕಳೆದ ಆಗಸ್ಟ್‌ನಲ್ಲಿ ಚುನಾವಣೋತ್ತರವಾಗಿ ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಂಡು ಮತದಾರರಿಗೆ ವಂಚಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ. [ಚಂದನ್ ಕುಮಾರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಕೆಲವು ಷರತ್ತುಗಳಿಗೆ ಒಳಪಟ್ಟು ಪಕ್ಷಾಂತರ ವಿರೋಧಿ ಕಾಯಿದೆ ಮತ್ತು ಸಂವಿಧಾನದ 10 ನೇ ಶೆಡ್ಯೂಲ್ ಚುನಾವಣೋತ್ತರ ಮೈತ್ರಿಗೆ ಅನುಮತಿ ನೀಡಿವೆ ಎಂದು ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಎಂಎಂ ಸುಂದ್ರೇಶ್ ಅವರ ಪೀಠ ಹೇಳಿದೆ.
ನಿತೀಶ್ ಕುಮಾರ್ ಅವರ ಪಕ್ಷ ಸಂಯುಕ್ತ ಜನತಾದಳ 2020 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಬಿಜೆಪಿಯೊಂದಿಗೆ ಮೈತ್ರಿ ಕಡೆದುಕೊಂಡ ಜೆಡಿಯು ತನ್ನ ಹಳೆಯ ಮಿತ್ರಪಕ್ಷ ಆರ್‌ಜೆಡಿ ಕೈಹಿಡಿದು ಈ ವರ್ಷದ ಆಗಸ್ಟ್‌ನಲ್ಲಿ ನಿತೀಶ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.
ನಿತೀಶ್ ಅವರು ಮುಖ್ಯಮಂತ್ರಿಯಾಗಿ ಮರುನೇಮಕಗೊಂಡಿರುವುದು ಸಂವಿಧಾನದ ನಿಯಮಗಳ ಉಲ್ಲಂಘನೆಯಾಗಿದ್ದು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಕೋರಿ ಚಂದನ್ ಕುಮಾರ್ ಎಂಬುವವರು ಅರ್ಜಿ ಸಲ್ಲಿಸಿದ್ದರು.
ರಾಜ್ಯದ ಜನರು ಜೆಡಿಯು ಮತ್ತು ಬಿಜೆಪಿಯ ಮೈತ್ರಿಗೆ ಮತ ಹಾಕಿರುವುದರಿಂದ ನಿತೀಶ್ ಅವರ ಪಕ್ಷ ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಮತದಾರರಿಗೆ ಮಾಡಿದ ವಂಚನೆಯಾಗಿದೆ ಎಂದಿದ್ದ ಅರ್ಜಿದಾರರು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ಪಕ್ಷಗಳು ಪಕ್ಷಾಂತರಗೊಳ್ಳದಂತೆ ಕಾನೂನು ಜಾರಿಗೆ ತರಬೇಕೆಂದು ಕೂಡ ವಿನಂತಿಸಿದ್ದರು.