ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ ವಂಚನೆ: ಬಿಜೆಪಿ ಮುಖಂಡ ಶಿವರಾಮೇಗೌಡ ಹಾಗೂ ಕುಟುಂಬಕ್ಕೆ ನಿರೀಕ್ಷಣಾ ಜಾಮೀನು

ರಾಯಲ್‌ ಕಾನ್‌ಕಾರ್ಡ್‌ ಎಜುಕೇಷನಲ್‌ ಟ್ರಸ್ಟ್‌ ಅಧ್ಯಕ್ಷ ಮತ್ತು ಟ್ರಸ್ಟಿಯಾಗಿರುವ ಶಿವರಾಮೇಗೌಡ ಮತ್ತು ಅವರ ಕುಟುಂಬಸ್ಥರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಸಂತೋಷ್‌ ಗಜಾನನ್‌ ಭಟ್‌ ಅವರು ಪುರಸ್ಕರಿಸಿದ್ದಾರೆ.
L R Shivarame Gowda
L R Shivarame Gowda

ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳ ನೆರವಿನಿಂದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ 11 ಕೋಟಿ ಸಾಲ ಪಡೆದು ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಎಲ್‌ ಆರ್‌ ಶಿವರಾಮೇಗೌಡ ಮತ್ತು ಕುಟುಂಬದವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ರಾಯಲ್‌ ಕಾನ್‌ಕಾರ್ಡ್‌ ಎಜುಕೇಷನಲ್‌ ಟ್ರಸ್ಟ್‌ ಅಧ್ಯಕ್ಷ ಮತ್ತು ಟ್ರಸ್ಟಿಯಾಗಿರುವ ಶಿವರಾಮೇಗೌಡ ಮತ್ತು ಅವರ ಕುಟುಂಬಸ್ಥರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಸಂತೋಷ್‌ ಗಜಾನನ್‌ ಭಟ್‌ ಅವರು ಪುರಸ್ಕರಿಸಿದ್ದಾರೆ.

ಮೆಸರ್ಸ್‌ ರಾಯಲ್‌ ಕಾನ್‌ಕಾರ್ಡಕೇಷನ್‌ ಟ್ರಸ್ಟ್‌, ಎಲ್‌ ಆರ್‌ ಶಿವರಾಮೇಗೌಡ, ಸುಧಾ ಶಿವರಾಮೇಗೌಡ, ಎಲ್‌ ಎಸ್‌ ಚೇತನ್‌ ಗೌಡ, ಎಲ್‌ ಎಸ್‌ ಭವ್ಯ ಗೌಡ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆರೋಪ ಪಟ್ಟಿ ಸಲ್ಲಿಸುವವರೆಗೆ ಅಥವಾ ಮೂರು ತಿಂಗಳ ಕಾಲ ಸಂಬಂಧಿತ ಠಾಣೆಗೆ ತೆರಳಿ ಅರ್ಜಿದಾರರು ಸಹಿ ಮಾಡಬೇಕು. ತನಿಖಾಧಿಕಾರಿ ಸೂಚಿಸಿದಾಗ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ನ್ಯಾಯಾಲಯದ ಅನುಮತಿ ಪಡೆಯದೇ ವ್ಯಾಪ್ತಿಯಿಂದ ಹೊರ ಹೋಗುವಂತಿಲ್ಲ. ಅರ್ಜಿದಾರರು ಇಂಥದ್ದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಮೊದಲ ಆರೋಪಿ ನಂಜಪ್ಪ ಶಿವಪ್ರಸಾದ್‌ ಮತ್ತು ಉಮಾ ಪ್ರಸಾದ್‌ ಅವರಿಗೆ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ.

ಪ್ರಕರಣದ ಹಿನ್ನೆಲೆ: 2016ರ ಆಗಸ್ಟ್‌ನಲ್ಲಿ ನಂಜಪ್ಪ ಮತ್ತು ಉಮಾ ಅವರು ಉದ್ಯಮ ನಡೆಸುವುದಕ್ಕಾಗಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ 5 ಕೋಟಿ ಸಾಲ ಪಡೆದಿದ್ದರು. ಆನಂತರ 2016ರ ಡಿಸೆಂಬರ್‌ನಲ್ಲಿ ಮತ್ತೆ ಹೊಸದಾಗಿ ಓವರ್‌ ಡ್ರಾಫ್ಟ್‌ ಸೌಲಭ್ಯದ ಮೂಲಕ 2.5 ಕೋಟಿ ಸಾಲ ಪಡೆದಿದ್ದರು. 2018ರ ಜೂನ್‌ನಲ್ಲಿ ಮತ್ತೆ 3.5 ಕೋಟಿ ಸಾಲ ಪಡೆದಿದ್ದು, ಒಟ್ಟು 11 ಕೋಟಿ ಸಾಲ ಪಡೆದಿದ್ದರು. ಇದನ್ನು ಪಾವತಿಸದ ಹಿನ್ನೆಲೆಯಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರು ಸಿಬಿಐಗೆ ದೂರು ನೀಡಿದ್ದರು.

ಆರೋಪಿಗಳು ಒಳಸಂಚು ರೂಪಿಸಿ, ನಕಲಿ ದಾಖಲೆ ಸೃಷ್ಟಿಸಿ ಅವುಗಳನ್ನು ಬಳಸಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಸಾಲದ ಹಣವನ್ನು ಬೇರೆ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಕೊಂಡು ಅನ್ಯ ಉದ್ದೇಶಕ್ಕೆ ಬಳಸಿದ್ದರು. ಆನಂತರ ಸಾಲ ಮರುಪಾವತಿ ಮಾಡದೇ ವಂಚಿಸಿದ್ದಾರೆ ಎಂದು ಬೆಂಗಳೂರಿನ ಎಂ ಜಿ ರಸ್ತೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್‌ ಡಿ ಮೋದಿ ದೂರು ಸಲ್ಲಿಸಿದ್ದರು.

ಓಟಿಎಸ್‌ ಸೌಲಭ್ಯದ ಮೂಲಕ 6.5 ಕೋಟಿ ಕಟ್ಟಲು ತಾವು ಸಿದ್ಧರಿದ್ದೇವೆ ಎಂದು ಅರ್ಜಿದಾರರು ತಿಳಿಸಿದ್ದರು. ಇದಕ್ಕೆ ಬ್ಯಾಂಕ್‌ ಒಪ್ಪಿರಲಿಲ್ಲ.

Attachment
PDF
L R Shivarame Gowda Vs CBI.pdf
Preview

Related Stories

No stories found.
Kannada Bar & Bench
kannada.barandbench.com