ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನನ್ನು ಮಿತವಾಗಿ ನೀಡಬೇಕು: ಸುಪ್ರೀಂ ಕೋರ್ಟ್‌

ಆದರ್ಶ ಸಮೂಹ ಕಂಪನಿ ಹಗರಣದಲ್ಲಿ ಆರೋಪಿಗಳಾಗಿದ್ದ ವಿವಿಧ ವ್ಯಕ್ತಿಗಳಿಗೆ ನೀಡಲಾದ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
Supreme Court
Supreme Court
Published on

ಆರ್ಥಿಕ ಅಪರಾಧಗಳು 'ವಿಭಿನ್ನ' ವರ್ಗವಾಗಿರುವುದರಿಂದ, ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅಂತಹ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನನ್ನು ಮಿತವಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ.

ಆದರ್ಶ ಸಮೂಹ ಕಂಪನಿ ಹಗರಣದಲ್ಲಿ ಆರೋಪಿಗಳಾಗಿದ್ದ ವಿವಿಧ ವ್ಯಕ್ತಿಗಳಿಗೆ ನೀಡಲಾದ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಆರ್ಥಿಕ ಅಪರಾಧಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಗಳು, ಅದರಲ್ಲಿಯೂ ಕಾನೂನಿಂದ ನುಣುಚಿಕೊಳ್ಳುವವರಿಗೆ ಅಥವಾ ವಾರಂಟ್‌ ಜಾರಿಗೆ ಅಡ್ಡಿಪಡಿಸುವವರಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ನ್ಯಾಯಾಲಯ ಹೇಳಿದೆ.

ಆರ್ಥಿಕ ಅಪರಾಧಗಳು ವಿಭಿನ್ನ ವರ್ಗದ ಅಪರಾಧಗಳು ಎಂಬುದು ಇತ್ಯರ್ಥವಾಗದೆ ಇರುವ ವಿಷಯವೇನಲ್ಲ. ಏಕೆಂದರೆ ಇವು ಸಾರ್ವಜನಿಕ ಬೊಕ್ಕಸಕ್ಕೆ ಅಪಾರ ನಷ್ಟ ಉಂಟು ಮಾಡುವ ಆಳ ಪಿತೂರಿಯನ್ನು ಒಳಗೊಂಡಿವೆ. ಹಾಗಾಗಿ ಇಂತಹ ಅಪರಾಧಗಳನ್ನು ದೇಶದ ಹಣಕಾಸು  ಸ್ಥಿತಿಗೆ ಬೆದರಿಕೆ ಒಡ್ಡುವ ಇಡೀ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಗಂಭೀರ ಅಪರಾಧಗಳೆಂದು ಪರಿಗಣಿಸಬೇಕಿದೆ ಎಂದು ಪೀಠ ವಿವರಿಸಿದೆ.

ಸುಪ್ರೀಂ ಕೋರ್ಟ್‌ ಅವಲೋಕನದ ಪ್ರಮುಖಾಂಶಗಳು

  • ಗಂಭೀರ ಆರ್ಥಿಕ ಅಪರಾಧಗಳಲ್ಲಿ ನಿರೀಕ್ಷಣಾ ಜಾಮೀನು ಹಕ್ಕಲ್ಲ.

  • ಕಂಪನಿಗಳ ಕಾಯಿದೆಯಡಿ ಜಾಮೀನು ಪಡೆಯಲು ಅವಳಿ ಷರತ್ತುಗಳನ್ನು ಈಡೇರಿಸಿರಬೇಕು.

    ಈ ವಿಷಯದಲ್ಲಿನ ಅವಳಿ ಷರತ್ತುಗಳೆಂದರೆ:

    (i) ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಜಾಮೀನನ್ನು ವಿರೋಧಿಸುವ ಅವಕಾಶವಿರಬೇಕು, ಹಾಗೂ

    (ii) ಆರೋಪಿಯು ತಪ್ಪಿತಸ್ಥನಲ್ಲ ಮತ್ತು ಮತ್ತೆ ಅದೇ ರೀತಿಯ ಅಪರಾಧ ಎಸಗುವ ಸಾಧ್ಯತೆಯಿಲ್ಲ ಎಂದು ನ್ಯಾಯಾಲಯಕ್ಕೆ ನಂಬಲು ಸಮಂಜಸವಾದ ಆಧಾರಗಳಿರಬೇಕು.

  • ವಿಚಾರಣಾ ನ್ಯಾಯಾಲಯಗಳು ಪದೇ ಪದೇ ಜಾಮೀನು ರಹಿತ ವಾರೆಂಟ್‌ ಹೊರಡಿಸಿ ಘೋಷಿತ ಪ್ರಕ್ರಿಯೆಯ ಬಳಿಕವೂ ಹೈಕೋರ್ಟ್‌ಗಳು ನಿರೀಕ್ಷಣಾ ಜಾಮೀನು ನೀಡುವುದು ವಿಕೃತ ಮತ್ತು ಸಮರ್ಥನೀಯವಲ್ಲ.

  • ನ್ಯಾಯಾಲಯದ ಆದೇಶಗಳು, ನ್ಯಾಯಿಕ ಪ್ರಕ್ರಿಯೆಗಳನ್ನು ಪಾಲಿಸದಿರುವುದು ಮತ್ತು ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನಗಳು ನ್ಯಾಯಕ್ಕೆ ಅಡ್ಡಿಪಡಿಸಿದಂತೆ.

ಅಂತೆಯೇ ಗಂಭೀರ ಅಪರಾಧ ತನಿಖಾ ದಳ (ಎಸ್‌ಎಫ್‌ಐಒ) ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿಗಳು ಒಂದು ವಾರದೊಳಗೆ ವಿಶೇಷ ನ್ಯಾಯಾಲಯದ ಮುಂದೆ ಶರಣಾಗುವಂತೆ ನಿರ್ದೇಶಿಸಿತು. ಅವರ ಜಾಮೀನು ಅರ್ಜಿಗಳನ್ನು ಕಾನೂನಿನ ಪ್ರಕಾರ ನಿರ್ಧರಿಸಬೇಕು ಎಂದು ಪೀಠ ಸೂಚಿಸಿತು.

ಆದರೆ ಆರೋಪಿಗಳಾದ ಅಕ್ಷತ್ ಸಿಂಗ್, ನವೀನ್ ಕುಮಾರ್ ಮತ್ತು ಮಹೇಶ್ ದತ್ ಶರ್ಮಾ ಅವರಿಗೆ ನೀಡಲಾದ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸುವ ಅರ್ಜಿಗಳನ್ನು ಕೆಳ ನ್ಯಾಯಾಲಯ ಈಗಾಗಲೇ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದರಿಂದ ವಜಾಗೊಳಿಸಲಾಯಿತು. 

ಎಸ್‌ಎಫ್‌ಐಒ ಪರ ವಕೀಲರಾದ ಪದ್ಮೇಶ್ ಮಿಶ್ರಾ, ಹರಿ ಕಿಶನ್, ಸುದರ್ಶನ್ ಲಂಬಾ ಮತ್ತು ಅಮರೀಶ್ ಕುಮಾರ್ ವಾದ ಮಂಡಿಸಿದ್ದರು. ಆರೋಪಿ ಅಕ್ಷತ್ ಸಿಂಗ್ ಅವರನ್ನು ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com