ದೇಶ ಅಸ್ಥಿರಗೊಳಿಸುವ ನೆರೆಯ ರಾಷ್ಟ್ರದ ತಂತ್ರವನ್ನು ಸುಲಭವಾಗಿ ಪರಿಗಣಿಸಲಾಗದು; ಜಪ್ತಿ ಆದೇಶ ವಜಾಕ್ಕೆ ಹೈಕೋರ್ಟ್‌ ನಕಾರ

ಹಲವು ಸಾಲ ನೀಡುವ ಕಂಪೆನಿಗಳ ಪದಾಧಿಕಾರಿಗಳು ಚೀನಾ ಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ ಅಥವಾ ಚೀನಾ ಮೂಲದ ವ್ಯಕ್ತಿಗಳು ಈ ಮೊಬೈಲ್‌ ಸಾಲ ಅಪ್ಲಿಕೇಷನ್‌ಗಳ ನಿರ್ದೇಶಕರಾಗಿ ಕುಳಿತಿದ್ದಾರೆ.
Justice M Nagaprasanna and Karnataka HC
Justice M Nagaprasanna and Karnataka HC
Published on

“ಆರ್ಥಿಕವಾಗಿ ಅಥವಾ ಬೇರಾವುದೇ ತಂತ್ರದ ಮೂಲಕ ದೇಶವನ್ನು ಅಸ್ಥಿರಗೊಳಿಸುವ ನೆರೆಯ ದೇಶದ ಪ್ರಯತ್ನವು ಇಲ್ಲಿನ ಜನರ ಸುರಕ್ಷತೆ ಮತ್ತು ರಕ್ಷಣೆಗೆ ಸಂಬಂಧಪಡಲಿದ್ದು, ಇಂಥ ವಿಚಾರದಲ್ಲಿ ಅದನ್ನು ನಗಣ್ಯವಾಗಿ ಕಾಣಲಾಗದು” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ಬ್ಯಾಂಕ್‌ ಖಾತೆ ಜಪ್ತಿ ಮಾಡಿರುವುದನ್ನು ವಜಾ ಮಾಡುವಂತೆ ಕೋರಿದ್ದ ಕಂಪೆನಿಯೊಂದರ ಮನವಿಯನ್ನು ತಿರಸ್ಕರಿಸಿದೆ.

ಕೇರಳದ ಎರ್ನಾಕುಲಂನ ಇಂಡಿಟ್ರೇಡ್‌ ಫಿನ್‌ಕಾರ್ಪ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪಿಎಂಎಲ್‌ಎ ಕಾಯಿದೆ ಸೆಕ್ಷನ್‌ 17ರ ಅಡಿ ಜಾರಿ ನಿರ್ದೇಶನಾಲಯವು ಹೊರಡಿಸಿರುವ ಆದೇಶದಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಪೀಠವು ಹೇಳಿದೆ.

ಸಾರ್ವಜನಿಕರಿಗೆ ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲ ನೀಡಿ ಸುಲಿಗೆ ಮಾಡುವುದು ಮತ್ತು ಕಿರುಕುಳ  ನೀಡುತ್ತಿರುವ ಆರೋಪದಲ್ಲಿ  ಬೆಂಗಳೂರು ನಗರದಲ್ಲಿ  15 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.  ಈ ಸಂಬಂಧದ ತನಿಖೆಯಲ್ಲಿ ಅರ್ಜಿದಾರರ ಸಂಸ್ಥೆ ಸಾಲ ನೀಡುತ್ತಿದ್ದ ರೇಜರ್ ಪೇ ಪ್ರೈವೇಟ್ ಲಿಮಿಟೆಡ್ ಮತ್ತು ಕ್ಯಾಶ್‌ಫ್ರೀ ಪೇಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ತನಿಖೆ ನಡೆಯುತ್ತಿದೆ.  ಅಲ್ಲದೆ, ಅರ್ಜಿದಾರ ಸಂಸ್ಥೆ ವಾಟರ್ ಎಲಿಫಂಟ್ ಎಂಬ ಹೆಸರಿನಲ್ಲಿ ಮತ್ತೊಂದು ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.  ಈ ಕಂಪೆನಿಯ ನಿರ್ದೇಶಕರು ಚೀನಾದವರು ಎಂದು ಹೇಳಲಾಗುತ್ತಿದೆ. ಹೀಗಾಗಿ ತನಿಖೆ ಅಗತ್ಯವಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ನ್ಯಾಯನಿರ್ಣಯ ಮಾಡುವ ಸಂಬಂಧಪಟ್ಟ ಪ್ರಾಧಿಕಾರ ನೀಡಿರುವ ನೋಟಿಸ್‌ಗೆ ಅರ್ಜಿದಾರ ಸಂಸ್ಥೆ ಉತ್ತರಿಸಬೇಕಿದೆ. ಅರ್ಜಿದಾರರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತೆರನಾದ ಉಲ್ಲೇಖ ಮಾಡಿದರೂ ಅದು ನ್ಯಾಯನಿರ್ಣಯ ಮಾಡುವ ಪ್ರಾಧಿಕಾರದ ಮುಂದಿರುವ ಪ್ರಕರಣದಲ್ಲಿ ಪೂರ್ವಾಗ್ರಹ ಉಂಟು ಮಾಡುವ ಸಾಧ್ಯತೆ ಇದೆ. ಅರ್ಜಿದಾರರ ವಾದವನ್ನು ಪರಿಶೀಲಿಸಿ, ಸೂಕ್ತ ಆದೇಶವನ್ನು ನಿರ್ಣಯ ಮಾಡುವ ಪ್ರಾಧಿಕಾರ ತೆಗೆದುಕೊಳ್ಳಲಿದೆ ಎಂದು ಪೀಠವು ಹೇಳಿದೆ.

ಹಲವು ಮೊಬೈಲ್‌ ಸಾಲದ ಅಪ್ಲಿಕೇಶನ್‌ಗಳು ಇದ್ದು, ಅವುಗಳ ಕಾರ್ಯವಿಧಾನ ಸಾರ್ವಜನಿಕಗೊಂಡಿದೆ. ಸುಲಭವಾಗಿ ವಂಚನೆಗೆ ಒಳಗಾಗಬಹುದಾದ ವ್ಯಕ್ತಿಗಳಿಗೆ ಕರೆ ಮಾಡಿ ಯಾವುದೇ ದಾಖಲೆ ನೀಡದೆ ಸಣ್ಣ ಮೊತ್ತದ ಸಾಲ ನೀಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ತಮ್ಮ ಸ್ಮಾರ್ಟ್‌ಫೋನ್‌ನಿಂದ ಅಪ್ಲಿಕೇಶನ್‌ ಒಂದನ್ನು ಡೌನ್‌ಲೋಡ್‌ ಮಾಡಿ ಅದರಲ್ಲಿ ತಮ್ಮ ಮೊಬೈಲ್‌ ಪ್ರವೇಶಿಕೆಗೆ ಅನುವು ಮಾಡಿಕೊಡಬೇಕು ಎಂಬ ಹೇಳಲಾಗುತ್ತದೆ. ಯಾವುದೇ ದಾಖಲೆ ಇಲ್ಲದೇ ಸಾಲ ದೊರೆಯುವುದಕ್ಕೆ ಮರುಳಾಗಿ ಅವರು ಎಲ್ಲಾ ಷರತ್ತುಗಳಿಗೆ ಒಪ್ಪಿ, ಮೊಬೈಲ್‌ ಪ್ರವೇಶಿಕೆಗೆ ಅನುಮತಿಸುತ್ತಾರೆ. ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವ ಮೊಬೈಲ್‌ ಸಾಲದ ಅಪ್ಲಿಕೇಶನ್‌/ಕಂಪೆನಿಗಳು ಸಾಲ ಮರುಪಾವತಿ ಮಾಡದಿದ್ದರೆ ಮೊಬೈಲ್‌ನಿಂದ ಸಂಗ್ರಹಿಸಿರುವ ದಾಖಲೆಯನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಒಡ್ಡಿವೆ. ಕೆಲವು ಪ್ರಕರಣಗಳಲ್ಲಿ ಸಾಲ ಪಡೆದಿರುವವರು ಪಾವತಿಸಬೇಕಾದ ಇಎಂಐಗೆ ವಿರುದ್ಧವಾಗಿ 16-20 ಇಎಂಐ ಪಾವತಿಸುವಂತೆ ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಸಾಲ ಅಪ್ಲಿಕೇಶನ್‌ಗಳ ಪ್ರತಿನಿಧಿಗಳ ಕಿರುಕುಳ ತಾಳಲಾರದೇ ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ಹಲವು ಕಂಪೆನಿಗಳ ಪದಾಧಿಕಾರಿಗಳು ಚೀನಾ ಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ ಅಥವಾ ಚೀನಾ ಮೂಲದ ವ್ಯಕ್ತಿಗಳು ಈ ಮೊಬೈಲ್‌ ಸಾಲ ಅಪ್ಲಿಕೇಷನ್‌ಗಳ ನಿರ್ದೇಶಕರಾಗಿ ಕುಳಿತಿದ್ದಾರೆ. ಹೀಗಾಗಿ, ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: 2022ರ ಸೆಪ್ಟೆಂಬರ್2 ರಂದು ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು ಅರ್ಜಿದಾರ ಕಂಪೆನಿಯ ಬ್ಯಾಂಕ್ ಖಾತೆಗಳನ್ನು ಜಫ್ತಿ ಮಾಡುವುದಕ್ಕೆ ನಿರ್ದೇಶನ ನೀಡಿದ್ದರು. 2022ರ ಅಕ್ಟೋಬರ್ 14ರಂದು ಈ ಸಂಬಂಧ ಕಾರಣ ಕೇಳಿ ಶೋಕಾಸ್‌ ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಕಂಪೆನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

Kannada Bar & Bench
kannada.barandbench.com