ರಾಷ್ಟ್ರಕ್ಕೆ ಅಪಾಯವಿರುವ ಪ್ರಕರಣಗಳಲ್ಲಿ ಸಹಾನುಭೂತಿ ಸಲ್ಲ; ಬಾಂಗ್ಲಾ ಪ್ರಜೆ ತಾಯ್ನಾಡಿಗೆ ಕಳುಹಿಸಲು ಹೈಕೋರ್ಟ್‌ ಆದೇಶ

ಎಕ್ಸಿಟ್‌ ಪರ್ಮಿಟ್‌ ನೀಡಿರುವ ಕ್ರಮದಲ್ಲಿ ಯಾವುದೇ ತಪ್ಪು ಇಲ್ಲ. ಆದ್ದರಿಂದ, ಅರ್ಜಿದಾರೆಯನ್ನು ದೇಶದಿಂದ ಹೊರಗೆ ಕಳುಹಿಸಲು ಎಫ್‌ಆರ್‌ಆರ್‌ಓ ಕೂಡಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದಿರುವ ನ್ಯಾಯಾಲಯ.
Justice M Nagaprasanna and Karnataka HC
Justice M Nagaprasanna and Karnataka HC
Published on

ಭಾರತದ ಪ್ರಜೆಯನ್ನು ಪ್ರೀತಿಸಿ ಮದುವೆಯಾಗಿ ನಂತರ ಆತನಿಂದ ದೂರವಾಗಿದ್ದ ಬಾಂಗ್ಲಾ ಮಹಿಳೆಯ ವೀಸಾ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆಕೆಯನ್ನು ತಾಯ್ನಾಡಿಗೆ ವಾಪಸು ಕಳುಹಿಸುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗೆ (ಎಫ್‌ಆರ್‌ಆರ್‌ಒ) ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ವೀಸಾ ಅವಧಿ ವಿಸ್ತರಣೆ ಮಾಡಲು ನಿರಾಕರಿಸಿ ಎಕ್ಸಿಟ್‌ ಪರ್ಮಿಟ್‌ ನೀಡಿದ್ದ ಎಫ್‌ಆರ್‌ಆರ್‌ಒ ಕ್ರಮ ಪ್ರಶ್ನಿಸಿ ಬಾಂಗ್ಲಾ ಮಹಿಳೆ ರಕ್ತಿಮ ಖಾನುಮ್‌ (46) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಅವಧಿ ಮೀರಿ ಭಾರತದಲ್ಲಿ ನೆಲೆಸಿರುವ ವಿದೇಶಿಯರನ್ನು ದೇಶದಿಂದ ಹೊರಹಾಕಲು ಕೇಂದ್ರ ಸರ್ಕಾರ ಅಧಿಕಾರ ಹೊಂದಿದೆ. ಇಂತಹ ಪ್ರಕರಣದಲ್ಲಿ ವಿದೇಶಿಯರಿಗೆ ಯಾವುದೇ ಸಹಾನೂಭೂತಿ ತೋರಿದರೆ ಅದು ಸರ್ಕಾರ, ಎಫ್ಆರ್‌ಆರ್‌ಒ ಮತ್ತು ವಲಸಿಗರ ಬ್ಯೂರೊದ ವಿವೇಚನಾಧಿಕಾರಕ್ಕೆ ಸಂಕೋಲೆ ಹಾಕಿದಂತಾಗುತ್ತದೆ. ಅದರಲ್ಲೂ ರಾಷ್ಟ್ರಕ್ಕೆ ಅಪಾಯವಿರುವ ಪ್ರಕರಣಗಳಲ್ಲಿ ಸಹಾನುಭೂತಿ ತೋರಿಸಲಾಗದು. ಹೀಗಾಗಿ, ಎಕ್ಸಿಟ್‌ ಪರ್ಮಿಟ್‌ ನೀಡಿರುವ ಕ್ರಮದಲ್ಲಿ ಯಾವುದೇ ತಪ್ಪು ಇಲ್ಲ. ಆದ್ದರಿಂದ, ಅರ್ಜಿದಾರೆಯನ್ನು ದೇಶದಿಂದ ಹೊರಗೆ ಕಳುಹಿಸಲು ಎಫ್‌ಆರ್‌ಆರ್‌ಓ ಕೂಡಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು” ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

“ವೀಸಾ ಅವಧಿ ಪೂರ್ಣಗೊಂಡಿದ್ದು, ಅದನ್ನು ಸಕ್ಷಮ ಪ್ರಾಧಿಕಾರ ವಿಸ್ತರಿಸಿಲ್ಲ. ದಾಖಲೆಗಳು ಇಲ್ಲದೆ ಭಾರತದಲ್ಲಿ ಉಳಿಯಲು ವಿದೇಶಿಯರು ಯಾವುದೇ ಹಕ್ಕನ್ನು ಪ್ರತಿಪಾದಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಎಫ್‌ಆರ್‌ಆರ್‌ಒ ಪ್ರತಿನಿಧಿಸಿದ್ದ ಉಪ ಸಾಲಿಸಿಟರ್‌ ಜನರಲ್ ಶಾಂತಿ ಭೂಷಣ್‌ ಅವರು “ಅರ್ಜಿದಾರೆ ನೆಲೆಸಿರುವ ಪ್ರದೇಶ ವ್ಯಾಪ್ತಿಯ ಪೊಲೀಸರು ಆಕೆಯ ವೀಸಾ ವಿಸ್ತರಿಸದಂತೆ ಎಫ್ಆರ್ ಆರ್‌ಒಗೆ ಶಿಫಾರಸು ಮಾಡಿದ್ದಾರೆ. ಸದ್ಯ ಆಕೆಯನ್ನು ಪತಿ ತೊರೆದಿದ್ದಾರೆ. ಭಾರತದಲ್ಲಿನ ಆಕೆಯ ಕಾರ್ಯಗಳು ಸಂಶಯಾಸ್ಪದವಾಗಿವೆ. ಆಕೆ ಭಾರತದಲ್ಲಿಯೇ ಉಳಿಯಲು ಯಾವುದೇ ಸಹಾನುಭೂತಿ ತೋರಿಸಬಾರದು” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ರಕ್ತಿಮ ಖಾನುಮ್‌ (46) ಬಾಂಗ್ಲಾ ದೇಶದ ಹುಟ್ಟಿ ಬೆಳೆದವರು. ಭಾರತದ ಜರ್ನಾದನ ರೆಡ್ಡಿ ಎಂಬಾತ ಆಕೆಯ ಸಂಪರ್ಕಕ್ಕೆ ಬಂದಿದ್ದು, 2017ರ ಡಿಸೆಂಬರ್‌ 25ರಂದು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಜನಾರ್ದನ ರೆಡ್ಡಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಅಲ್ಪ ಕಾಲ ದಂಪತಿ ಚೆನ್ನೈನಲ್ಲಿ ವಾಸವಿದ್ದರು. ಬಳಿಕ ಸಂಬಂಧ ಹಳಸಿದ್ದರಿಂದ ಅವರಿಬ್ಬರು ದೂರವಾಗಿದ್ದರು. 2019ರಲ್ಲಿ ರಕ್ತಿಮ ಅವರ ಪ್ರವಾಸಿ ವೀಸಾ ಅವಧಿ ಕೊನೆಗೊಂಡಿತ್ತು. ಇದರಿಂದ ಪ್ರವಾಸಿ ವೀಸಾವನ್ನು ಪ್ರವೇಶ ವೀಸಾವಾಗಿ ಪರಿವರ್ತಿಸಿಕೊಂಡಿದ್ದ ಅವರು ಭಾರತಲ್ಲಿಯೇ ನೆಲೆಸಿದ್ದರು. ಆ ವೀಸಾ ಅವಧಿಯೂ 2022ರ ಆಗಸ್ಟ್‌ 20ರಂದು ಕೊನೆಗೊಂಡಿತ್ತು.

ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ರಕ್ತಿಮ, ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಿದ್ದರು. ಭಾರತದಲ್ಲಿ ನೆಲೆಸಲು ಪತಿಯ ಸಹಿ ಇರುವ ಸಮ್ಮತಿ ಪತ್ರ ಸಲ್ಲಿಸುವಂತೆ ಎಫ್‌ಆರ್‌ಆರ್‌ಒ ಸೂಚಿಸಿದ್ದರು. ಆ ಪತ್ರ ಸಲ್ಲಿಸದಿದ್ದಾಗ ವೀಸಾ ವಿಸ್ತರಣೆಗೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಎಫ್‌ಆರ್‌ಆರ್‌ಒ, ಭಾರತ ಬಿಟ್ಟು ತೆರಳುವಂತೆ ರಕ್ತಿಮಗೆ ಎಕ್ಸಿಟ್‌ ಪರ್ಮಿಟ್‌ ನೀಡಿದ್ದರು. ಅದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Attachment
PDF
Raktima Khanum Vs UoI.pdf
Preview
Kannada Bar & Bench
kannada.barandbench.com