ಗೋವಧೆ ಮಾಡುವವರು ನರಕದಿ ಕೊಳೆಯುತ್ತಾರೆ; ಗೋಹತ್ಯೆ ನಿಷೇಧಿಸಿ, ರಾಷ್ಟ್ರೀಯ ಪ್ರಾಣಿಯನ್ನಾಗಿಸಿ: ಅಲಾಹಾಬಾದ್‌ ಹೈಕೋರ್ಟ್

ನಾವು ಜಾತ್ಯತೀತ ರಾಷ್ಟ್ರದಲ್ಲಿರುವುದರಿಂದ ಹಿಂದೂ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಗೋವನ್ನು ಹಿಂದೂಗಳು ಎಲ್ಲಾ ಪ್ರಾಣಿಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
Cow and Lucknow bench of Allahabad High Court
Cow and Lucknow bench of Allahabad High Court

ಗೋವು ಹಿಂದೂ ಧರ್ಮದಲ್ಲಿ ದೈವಿಕತೆಯ ರೂಪವಾಗಿರುವುದರಿಂದ ದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸಿ ಗೋವನ್ನು ರಾಷ್ಟ್ರೀಯ ಸಂರಕ್ಷಿತ ಪ್ರಾಣಿ ಎಂದು ಘೋಷಿಸುವಂತೆ ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ [ಮೊ. ಅಬ್ದುಲ್ ಖಲಿಕ್ ಮತ್ತು ಸರ್ಕಾರದ ನಡುವಣ ಪ್ರಕರಣ].

ಪುರಾಣಗಳ ಪ್ರಕಾರ, ಗೋವನ್ನು ಕೊಲ್ಲುವ ಅಥವಾ ಇತರರನ್ನು ಕೊಲ್ಲಲು ಅನುಮತಿಸುವ ಯಾರೇ ಆಗಲಿ ನರಕದಲ್ಲಿ ಕೊಳೆಯುತ್ತಾರೆ ಎಂದು ಫೆಬ್ರವರಿ 14ರಂದು ನೀಡಿದ ಆದೇಶದಲ್ಲಿ, ನ್ಯಾ. ಶಮೀಮ್ ಅಹ್ಮದ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

“ಪುರೋಹಿತರು ಮತ್ತು ಹಸುಗಳಿಗೆ ಬ್ರಹ್ಮ ಒಂದೇ ಸಮಯದಲ್ಲಿ ಜೀವ ನೀಡಿದನೆಂದು ಪುರಾಣಗಳು ಹೇಳುತ್ತವೆ. ಅ ಮೂಲಕ ಪುರೋಹಿತರು ಧಾರ್ಮಿಕ ಗ್ರಂಥ ಪಠಿಸುವಾಗ ಹಾಗೂ ಹಸುಗಳು ಧಾರ್ಮಿಕ ವಿಧಿಗಳಿಗೆ ತುಪ್ಪವನ್ನು ನೈವೇದ್ಯವಾಗಿ ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದು. ಹಸುಗಳನ್ನು ಕೊಲ್ಲುವ ಅಥವಾ ಇತರರಿಗೆ ಕೊಲ್ಲುವಂತೆ ಅನುಮತಿಸುವ ಯಾರೇ ಅಗಲಿ, ಅವರ ದೇಹದ ಮೇಲೆ ಎಷ್ಟು ರೋಮಗಳಿವೆಯೇ ಅಷ್ಟು ವರ್ಷಗಳ ಕಾಲ ನರಕದಲ್ಲಿ ಕೊಳೆಯುತ್ತಾರೆ. ಅಂತೆಯೇ ನಂದಿಯನ್ನು ಶಿವನ ವಾಹನವಾಗಿ ಚಿತ್ರಿಸಲಾಗಿದ್ದು ಇದು ದನಗಳಿಗೆ ನೀಡಿದ ಗೌರವದ ಸಂಕೇತವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ನಾವು ಜಾತ್ಯತೀತ ರಾಷ್ಟ್ರದಲ್ಲಿರುವುದರಿಂದ ಹಿಂದೂ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳನ್ನು ಗೌರವಿಸಬೇಕು. ಗೋವನ್ನು ಹಿಂದೂಗಳು ಎಲ್ಲಾ ಪ್ರಾಣಿಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ ಎಂದು ಕೂಡ ಪೀಠ ತಿಳಿಸಿದೆ.

ದೇಶದಲ್ಲಿ ಗೋಹತ್ಯೆ ನಿಷೇಧಿಸಲು ಮತ್ತು ಅದನ್ನು 'ಸಂರಕ್ಷಿತ ರಾಷ್ಟ್ರೀಯ ಪ್ರಾಣಿ' ಎಂದು ಘೋಷಿಸಲು ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ  ತೆಗೆದುಕೊಳ್ಳಬೇಕು ಎಂದು ಈ ನ್ಯಾಯಾಲಯ ಆಶಿಸುತ್ತದೆ ಮತ್ತು ನಂಬುತ್ತದೆ ಎಂದು ಪೀಠ ಹೇಳಿದೆ.

ಆ ಮೂಲಕ ಗೋಹತ್ಯೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ  ಮೊಹಮ್ಮದ್‌ ಅಬ್ದುಲ್ ಖಲಿಕ್ ಎಂಬುವವರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಲು ಪೀಠ ನಿರಾಕರಿಸಿದೆ. ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com