ಶಾಸನಸಭೆಯಲ್ಲಿ ಸದಸ್ಯರು ಆಡಿದ ಮಾತುಗಳಿಗೆ ಸಂಪೂರ್ಣ ರಕ್ಷಣೆ ಇದೆ: ಹಿರಿಯ ವಕೀಲ ಪ್ರಭುಲಿಂಗ ನಾವದಗಿ

ಎಫ್‌ಐಆರ್‌ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾದರೆ ರವಿ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಆಗ ಸಭಾಪತಿಯೂ ನ್ಯಾಯಾಲಯದ ಮುಂದೆ ನಿಂತು ಉತ್ತರಿಸಬೇಕಾಗಿ ಬರಬಹುದು ಎಂದ ನಾವದಗಿ.
MLC C T Ravi, minister Lakshmi Hebbalkar & Karnataka HC
MLC C T Ravi, minister Lakshmi Hebbalkar & Karnataka HC
Published on

"ಸದನ ನಡೆಯಲಿ ಅಥವಾ ಬಿಡಲಿ, ಅಲ್ಲಿ ಆಡಿದ ಮಾತುಗಳಿಗೆ ಸಂಬಂಧಿಸಿದಂತೆ ಸದಸ್ಯರಿಗೆ ಸಂಪೂರ್ಣ ವಿನಾಯಿತಿ ಇರಲಿದೆ ಎಂದು ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಬಲವಾಗಿ ಪ್ರತಿಪಾದಿಸಿದರು.

ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಹೇಳಿಕೆ ನೀಡಿದ ಆರೋಪ ಸಂಬಂಧ ಬಾಗೇವಾಡಿ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಿ ಟಿ ರವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರ ಸಿ ಟಿ ರವಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಪ್ರಕರಣದಲ್ಲಿ ದೂರುದಾರೆಯಾಗಿರುವ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಬಗ್ಗೆ ಅರ್ಜಿದಾರರಿಗೆ ಗೌರವವಿದೆ. ಶಾಸನಸಭೆಯಲ್ಲಿ ಶಾಸಕರು ನೀಡಿದ ಹೇಳಿಕೆ ಅಥವಾ ಮಾಡಿದ ಚರ್ಚೆಗೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸಂವಿಧಾನದಲ್ಲಿ ನಿರ್ಬಂಧವಿದೆ. ಸದನದಲ್ಲಿ ಹೇಳಿಕೆಗೆ ಸಂಬಂಧಿಸಿದಂತೆ ಶಾಸಕರಿಗೆ ರಕ್ಷಣೆಯಿದೆ” ಎಂದರು.

Advocate General Prabhuling Navadagi and Karnataka HC
Advocate General Prabhuling Navadagi and Karnataka HC

“ಸದನ ನಡೆಯುತ್ತಿತ್ತೇ, ಇಲ್ಲವೇ ಎಂದು ಕಾರ್ಯಾಂಗ ಹೇಳಲಾಗದು. ಇದು ಶಾಸಕಾಂಗದ ಭಾಗವೇ? ಇಲ್ಲವೇ ಎಂಬುದನ್ನು ಶಾಸಕಾಂಗವೇ ನಿರ್ಧರಿಸಬೇಕು. ಈ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವ ಜಿ ಪರಮೇಶ್ವರ್‌ ಅವರಿಗೆ ಪತ್ರ ಬರೆದಿದ್ದಾರೆ. ಸಭಾಪತಿ ಪ್ರಕರಣವನ್ನು ವಿಸ್ತರಿಸದಂತೆ ಮನವಿ ಮಾಡಿದ್ದಾರೆ. ಇಡೀ ಪ್ರಕರಣದಲ್ಲಿ ಇದು ಅತ್ಯಂತ ಪ್ರಮುಖ ವಿಚಾರವಾಗಿದೆ. ಎಫ್‌ಐಆರ್‌ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾದರೆ ರವಿ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಆಗ ಸಭಾಪತಿಯೂ ನ್ಯಾಯಾಲಯದ ಮುಂದೆ ನಿಂತು ಉತ್ತರಿಸಬೇಕಾಗಿ ಬರಬಹುದು” ಎಂದರು.

Also Read
ಅಶ್ಲೀಲ ಪದ ಬಳಕೆ ಪ್ರಕರಣ: ಸಿ ಟಿ ರವಿ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ರಾಜ್ಯ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು “ಘಟನೆ ನಡೆದಾಗ ಸದನ ಮುಂದೂಡಲ್ಪಟ್ಟಿತ್ತು. ಸಭಾಪತಿ ನೀಡಿರುವ ವರದಿಯಲ್ಲಿ ಸದನ ಚಾಲ್ತಿಯಲ್ಲಿರಲಿಲ್ಲ. ಆಕ್ಷೇಪಾರ್ಹವಾದ ಭಾಷೆ ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಸದನ ಮುಂದೂಡಿದ ಸಮಯದಲ್ಲಿ ಶಾಸಕರು (ಆ ಸದನದ ಸದಸ್ಯರು) ನೀಡಿದ ಹೇಳಿಕೆಗೆ ಯಾವುದೇ ರಕ್ಷಣೆ ಇಲ್ಲ. ಈ ಪ್ರಕರಣದಲ್ಲಿ ಹೆಬ್ಬಾಳ್ಕರ್‌ ವಿರುದ್ಧ ಸಿ ಟಿ ರವಿ ನೀಡಿರುವ ಹೇಳಿಕೆ ಸಂಬಂಧ ಪ್ರಕರಣ ದಾಖಲಿಸಿರುವುದು ಸೂಕ್ತವಾಗಿದೆ” ಎಂದರು.

ಈ ಮಧ್ಯೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದೂರುದಾರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪರ ವಕೀಲರು ಕಾಲಾವಕಾಶ ಕೋರಿದರು. ಇದನ್ನು ಪರಿಗಣಿಸಿದ ಪೀಠವು ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿತು.

Kannada Bar & Bench
kannada.barandbench.com