

ಮಹಾಭಾರತದ ಕೃಷ್ಣ, ಪಾಂಡವರು, ಧೃತರಾಷ್ಟ್ರ ಮತ್ತು ದ್ರೌಪದಿ ಪಾತ್ರಗಳಿಗೆ ಅವಹೇಳನ ಮಾಡಿದ ಆರೋಪದ ಸಂಬಂಧ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋನ ಕಲಾವಿದರು ಮತ್ತು ತಂಡದ ಸದಸ್ಯರನ್ನು ಬಂಧಿಸಿದಂತೆ ಆದೇಶಿಸಿರುವ ಕರ್ನಾಟಕ ಹೈಕೋರ್ಟ್, “ವಾಕ್ ಸ್ವಾತಂತ್ರ್ಯದ ನೆಪದಲ್ಲಿ ನೀವು ಏನಾದರೂ ಮಾಡಬಹುದೇ?” ಎಂದು ಕಟುವಾಗಿ ಪ್ರಶ್ನಿಸಿದೆ.
ಜೀ ಎಂಟರ್‌ಪ್ರೈಸಸ್ ಮತ್ತು ಕಾಮಿಡಿ ಕಿಲಾಡಿಗಳು ಶೋನ ನಿರ್ದೇಶಕ ಕೆ ಅನಿಲ್ ಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಂಗಳವಾರ ನಡೆಸಿತು.
“ಪ್ರಕರಣವು ತನಿಖೆಯ ಹಂತದಲ್ಲಿದ್ದು, ಅರ್ಜಿದಾರರು ತನಿಖೆಯಲ್ಲಿ ಭಾಗವಹಿಸಬೇಕು. ತನಿಖೆಯ ನೆಪದಲ್ಲಿ ಪ್ರಾಸಿಕ್ಯೂಷನ್, ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ಬಲವಂತದ ಕ್ರಮಕೈಗೊಳ್ಳಬಾರದು” ಎಂದು ನ್ಯಾಯಾಲಯ ಆದೇಶಿಸಿತು.
ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ಕಾಮಿಡಿ ಕಿಲಾಡಿಗಳ ಆಕ್ಷೇಪಿತ ಷೋ ಮಹಾಭಾರತದ ಒಂದು ಭಾಗವನ್ನು ತಾಲೀಮು ಮಾಡುತ್ತಿರುವುದಕ್ಕೆ ಸಂಬಂಧಿಸಿದ್ದಾಗಿದೆ. ಯಾವುದೇ ದೇವತೆಗಳನ್ನು ಅವಹೇಳನ ಮಾಡುವ ಉದ್ದೇಶವಿಲ್ಲ” ಎಂದರು.
ಆಗ ಪೀಠವು “ವಾಕ್ ಸ್ವಾತಂತ್ರ್ಯದ ನೆಪದಲ್ಲಿ ನಿಮಗೆ ಅನಿಸಿದ್ದೆಲ್ಲವನ್ನೂ ಮಾಡಬಹುದೇ? ದೇವರು, ಪೌರಾಣಿಕ ವ್ಯಕ್ತಿಗಳನ್ನು ನಿಷ್ಪ್ರಯೋಜಕರು ಎನ್ನುವ ರೀತಿಯಲ್ಲಿ ಬಿಂಬಿಸುವವರಿಗೆ ಅನುಗ್ರಹ ತೋರುವ ಅಗತ್ಯವಿಲ್ಲ? ಅವರಿಗೇಕೆ ನಾನು ಅನುಗ್ರಹ ತೋರಬೇಕು? ಅಂಥವರನ್ನು ಏಕೆ ಬಿಡಬೇಕು? ದೂರನ್ನು ನೋಡಿದ್ದೀರಾ? ಕೃಷ್ಣ ದೇವರನ್ನು ಏನೆಂದು ಬಿಂಬಿಸಿದ್ದಾರೆ? ದೂರನ್ನು ಓದಿದ್ದೀರಾ, ಅದು ಓದುವ ರೀತಿಯಲ್ಲಿ ಇದೆಯೇ? ದ್ರೌಪದಿಯನ್ನು ಹೇಗೆ ಬಿಂಬಿಸಿಲಾಗಿದೆ? ಅದನ್ನು ಓದಲಾಗುತ್ತದೆಯೇ? ಕಾಮಿಡಿಯ ಹೆಸರಿನಲ್ಲಿ ಏನಾದರೂ ಈ ದೇಶದಲ್ಲಿ ನಡೆಯಬಹುದೇ? ವಾಕ್ ಸ್ವಾತಂತ್ರ್ಯದ ಈ ರೀತಿಯ ಬಳಕೆ ಸರಿಯೇ? ದೂರನ್ನು ಓದಲಾಗದು, ಅದಾಗ್ಯೂ, ನಾವು ಅನುಕಂಪ ತೋರಬೇಕೇ?" ಎಂದಿತು.
ಆಗ ಸಂದೇಶ್ ಚೌಟ ಅವರು “ಹಿಂದೂ ದೇವರುಗಳನ್ನು ನೇರವಾಗಿ ಬಿಂಬಿಸಲಾಗಿಲ್ಲ. ನಾಟಕಕ್ಕಾಗಿ ಆ ಪಾತ್ರಗಳ ತಾಲೀಮು ಮಾಡಲಾಗುತ್ತಿತ್ತು. ಅದನ್ನು ಕಾಮಿಡಿ ಸರಣಿಯಲ್ಲಿ ಪ್ರಸಾರ ಮಾಡಲಾಗಿದೆ. ಐದು ಸರಣಿ ಕಾರ್ಯಕ್ರಮಗಳು ನಡೆದಿವೆ. ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಲು ಇದನ್ನು ಮಾಡಲಾಗಿಲ್ಲ” ಎಂದರು.
ಆಗ ಪೀಠವು “ಹಾಗಾದರೆ ಇದು ಏನು?” ಎಂದಿತು. ಇದಕ್ಕೆ ಚೌಟ ಅವರು “ಈ ಪ್ರಕರಣದಲ್ಲಿ ಪ್ರಕ್ರಿಯಾ ಲೋಪವಾಗಿದೆ. ಹುಬ್ಬಳ್ಳಿಯ ಘಟನೆಗೆ ಸಂಬಂಧಿಸಿದಂತೆ ಮೊದಲಿಗೆ ದೂರು ದಾಖಲಿಸಲಾಗಿತ್ತು. ಅದನ್ನು ಆನಂತರ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಇಂಥ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಯಾಗಬೇಕು. ಈ ಪ್ರಕರಣದಲ್ಲಿ ಅದೂ ಆಗಿಲ್ಲ” ಎಂದರು.
ಆಗ ಪೀಠವು “ಪ್ರಾಸಿಕ್ಯೂಷನ್ ಸರಿಯಾದ ಪ್ರಕ್ರಿಯೆ ಪಾಲಿಸದೇ ಇರುವುದಕ್ಕೆ ಇಂಥ ಪ್ರಕರಣಗಳು ಮುಕ್ತಾಯ ಕಾಣುತ್ತವೆ. ಪ್ರತಿ ಪ್ರಕರಣದಲ್ಲೂ ನೀವು ಸಮಸ್ಯೆ ಮಾಡುತ್ತೀರಿ. ಇದು ಉದ್ದೇಶಪೂರ್ವಕವೋ ಏನೋ? ಯಾರಿಗೆ ಗೊತ್ತು” ಎಂದಿತು.
ಈ ನಡುವೆ ಚೌಟ ಅವರು “ಹಿಂದೂ ದೇವತೆಗಳ ಕುರಿತು ಕಲಾವಿದರು ತಾಲೀಮು ಮಾಡುವುದಕ್ಕೆ ಸಂಬಂಧಿಸಿದ ಎಪಿಸೋಡ್ ಅದಾಗಿದೆ. ಇದು ದೇವರುಗಳಿಗೆ ಸಂಬಂಧಿಸಿದ್ದಲ್ಲ” ಎಂದರು.
ಇದಕ್ಕೆ ಪೀಠವು “ನ್ಯಾಯಾಲಯಗಳು ಹೆಚ್ಚು ಉದಾರವಾಗಿರುವುದರಿಂದ ಈ ಘಟನೆಗಳು ನಡೆಯುತ್ತಿವೆ. ನಾವು ಸ್ವಲ್ಪ ಕಠಿಣವಾದರೆ ಅದು ಬೇರೆಯದೇ ರೀತಿಯಲ್ಲಿರುತ್ತದೆ. ಕಾಮಿಡಿ ವಿಪರೀತವಾಗುತ್ತಿದೆ. ಇದೇ ಇಲ್ಲಿ ಸಮಸ್ಯೆಯಾಗುತ್ತಿರುವುದು” ಎಂದಿತು.
“ಎಲ್ಲವನ್ನೂ ಒಂದೇ ರೀತಿಯಲ್ಲಿ ಕಾಣಲಾಗದು.. ಎಲ್ಲವೂ ಇದೇ ರೀತಿ ಆದರೆ ಹಾಗೆ ಇರಲಿ ಬಿಡಿ. ಕಾಮಿಡಿ ಎಂಬುದು ನಿಜ, ಆದರೆ ಅದು ಇನ್ನೊಬ್ಬರಿಗೆ ಹೊರೆಯಾಗಬಾರದು” ಎಂದಿತು.
ಇದಕ್ಕೆ ಚೌಟ ಅವರು “ಅದು ತಾಲೀಮಷ್ಟೇ” ಎಂದರು. ಇದಕ್ಕೆ ಪೀಠವು “ತಾಲೀಮನ್ನು ಪ್ರಸಾರ ಮಾಡಿದ್ದೇಕೆ?” ಎಂದಿತು.
ಪ್ರಕರಣದ ಹಿನ್ನೆಲೆ: ಜೀ5 ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೊದಲ್ಲಿ ಶೂಟಿಂಗ್ ಆದ ಕಾಮಿಡಿ ಕಿಲಾಡಿಗಳು ಸೀಸನ್ 5ರ 7ನೇ ಎಪಿಸೋಡ್ ಪಾತ್ರಗಳಲ್ಲಿ ನಟಿಸಿದ ಹಾಗೂ ಸ್ಕ್ರಿಪ್ಟ್ ತಯಾರಿಸಿದವರು, ನಿರ್ದೇಶಕರು, ಕನ್ನಡ ವಾಹಿನಿ, ಜಿ5 ಒಟಿಟಿ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮಹಾಭಾರತದಲ್ಲಿನ ಪೂಜ್ಯರ ಪಾತ್ರಗಳನ್ನು ಹಿಂದೂ ಧರ್ಮದ ಭಾವನೆಗೆ ಧಕ್ಕೆ ಬರುವಂತೆ ಶ್ರೀ ಕೃಷ್ಣನ ಪಾತ್ರದಾರಿಗೆ ಮಂಗ್ಯಾನ ಮಗ, ಪಾಂಡವರಿಗೆ ಪಂಚೆ ಇಲ್ಲದ ಪಾಂಡವರು ಎಂದು ಕರೆಯಲಾಗಿದೆ, ಧೃತರಾಷ್ಟ್ರನನ್ನು ನಿಂದಿಸಲಾಗಿದೆ ಹಾಗೂ ಶ್ರೀಕೃಷ್ಣನ ಪಾತ್ರದಾರಿಗೆ 2-3 ಸಾರಿ ಕಪಾಳ ಮೋಕ್ಷ ಮತ್ತು ದ್ರೌಪದಿ ಪಾತ್ರದಾರಿಗೆ ಮೈಮೇಲೆ ಸಾರಾಯಿ ಸಿಂಪಡಿಸಿ ಪೂಜ್ಯರ ಪಾತ್ರಗಳಿಗೆ ಅವಹೇಳನ ಮಾಡಿ, ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಹುಬ್ಬಳ್ಳಿಯ ಕೇಶ್ವಾಪುರದ ಪ್ರಶಾಂತ್ ನರಗುಂದ 2025ರ ನವೆಂಬರ್ 15ರಂದು ದೂರು ನೀಡಿದ್ದರು.
ಇದರ ಅನ್ವಯ ಕಾಮಿಡಿ ಕಿಲಾಡಿಗಳು ಕಲಾವಿದರು, ಸ್ಕ್ರಿಪ್ಟ್ ರೈಟರ್, ನಿರ್ದೇಶಕ, ಜೀ ಕನ್ನಡ, ಜಿ5 ಒಟಿಟಿ, ಕಾಮಿಡಿ ಕಿಲಾಡಿಗಳು ಪ್ರಸಾರಕರು ಮತ್ತು ಇತರರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 299ರ ಅಡಿ ಹುಬ್ಬಳ್ಳಿಯ ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಅದನ್ನು ಬೆಂಗಳೂರಿನ ಸುಬ್ರಮಣ್ಯಪುರ ಠಾಣೆಗೆ ವರ್ಗಾಯಿಸಲಾಗಿತ್ತು.