ಕೆಎಒಎ ಕಾಯಿದೆ ಅಡಿ ಮಾತ್ರ ವಸತಿ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘದ ನೋಂದಣಿ: ಹೈಕೋರ್ಟ್‌

ವಸತಿ ಸಮುಚ್ಛಯಗಳಿಗೆಂದೇ ಕೆಒಎ ಕಾಯಿದೆ ರೂಪಿಸಲಾಗಿದೆ. ಹೀಗಾಗಿ ಸಂಘಗಳನ್ನು ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯಿದೆ (ಕೆಎಒಎ) ಅಡಿಯೇ ನೋಂದಾಯಿಸಬೇಕೇ ಹೊರತು ಕರ್ನಾಟಕ ಸಹಕಾರ ಸೊಸೈಟಿಗಳ ಕಾಯಿದೆಯಡಿ ಅಲ್ಲ ಎಂದಿರುವ ಹೈಕೋರ್ಟ್‌.
Justice K S Hemalekha
Justice K S Hemalekha
Published on

ವಸತಿ ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್‌ನ ಮಾಲೀಕರ ಸಂಘವನ್ನು ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯಿದೆ (ಕೆಎಒಎ) ಅಡಿಯೇ ನೋಂದಾಯಿಸಬೇಕು ಎಂದು ಈಚೆಗೆ ಪುನರುಚ್ಚರಿಸಿರುವ ಕರ್ನಾಟಕ ಹೈಕೋರ್ಟ್‌, ರಾಜ್ಯ ಸಹಕಾರ ಸೊಸೈಟಿಗಳ ಕಾಯಿದೆಯಡಿ ಮಾಡಿದ್ದ ನೋಂದಣಿ ರದ್ದುಗೊಳಿಸಿದೆ.

ಬೆಂಗಳೂರಿನ ಯಲಹಂಕದ ಆವಲಹಳ್ಳಿಯ ರಾಮ್‌ಕಿ ಒನ್‌ ನಾರ್ತ್‌ ಅಪಾರ್ಟ್‌ಮೆಂಟ್‌ನ ಮಾಲೀಕರ ಸಂಘದ ರೇಖಾ ಕಣ್ಣನ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಕರ್ನಾಟಕ ಸಹಕಾರ ಸೊಸೈಟಿಗಳ ಕಾಯಿದೆಯಡಿ 2023ರ ಅಕ್ಟೋಬರ್‌ 19ರಂದು ಸೊಸೈಟಿ ನೋಂದಣಿ ಮಾಡಿಕೊಂಡು ಡೆಪ್ಯೂಟಿ ರಿಜಿಸ್ಟ್ರಾರ್‌ ಹೊರಡಿಸಿದ್ದ ಆದೇಶ ರದ್ದುಗೊಳಿಸಿದೆ ಮತ್ತು ಐದನೇ ಪ್ರತಿವಾದಿ ರಾಮ್‌ ಕಿ ಎಸ್ಟೇಟ್‌ ಫಾರ್ಮ್ಸ್‌ ಲಿಮಿಟೆಡ್‌ಗೆ ರಾಮ್‌ಕಿ ನಾರ್ತ್‌ ಹೆಸರಿನಲ್ಲಿ ಸಂಘವನ್ನು ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯಿದೆ (ಕೆಎಎಒ) ಅಡಿ ನೋಂದಣಿ ಮಾಡಿಸುವಂತೆ ಆದೇಶಿಸಿದೆ.

ಕ್ರಯ ಪತ್ರಕ್ಕೂ ಮುನ್ನ ಅಪಾರ್ಟ್‌ಮೆಂಟ್‌ ಮಾಲೀಕರು ಐದನೇ ಪ್ರತಿವಾದಿ ಬಿಲ್ಡರ್‌ ಪರ ಡೀಡ್‌ ಆಫ್‌ ಡಿಕ್ಲರೇಷನ್‌ ಕಮ್‌ ಅಂಡರ್‌ಟೇಕಿಂಗ್‌ ಮಾಡಿಕೊಂಡಿದ್ದರು. ಅದರಂತೆ ಡೀಡ್‌ ಆಫ್‌ ಡಿಕ್ಲರೇಷನ್‌ಗೆ ಸಹಿ ಮಾಡಿ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘ ರಚಿಸುವುದಾಗಿ ಒಪ್ಪಿಕೊಂಡಿದ್ದರು. ರಾಮ್‌ಕಿ ಒನ್‌ ನಾರ್ತ್‌ ಕೇವಲ ವಸತಿ ಫ್ಲಾಟ್‌ಗಳನ್ನು ಒಳಗೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

ಕೆಎಒನಲ್ಲಿನ ಅಂಶ ಪ್ರಸ್ತಾಪಿಸಿರುವ ನ್ಯಾಯಾಲಯವು ಕೆಎಒಎ ಅಡಿ ಅತ್ಯಂತ ಸ್ಪಷ್ಟವಾಗಿ ಹೇಳಲಾಗಿರುವುದು ಏನೆಂದರೆ ಆಸ್ತಿಯನ್ನು ಅಥವಾ ಫ್ಲಾಟ್‌ಗಳನ್ನು ವಸತಿ ಉದ್ದೇಶಕ್ಕೆ ಮಾತ್ರ ಬಳಸುವುದಾದರೆ ಆಗ ಕೆಎಒಎ ಅನ್ವಯವಾಗುತ್ತದೆ. ಕ್ರಯಪತ್ರಗಳನ್ನು ಗಮನಿಸಿದರೆ ಇಡೀ ಯೋಜನೆ ವಸತಿ ಬಳಕೆಯ ಉದ್ದೇಶದ್ದಾಗಿದೆ ಮತ್ತು ಯೋಜನೆಯ ಯಾವುದೇ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿಲ್ಲ. ಹೀಗಾಗಿ ಸಹಕಾರ ಸೊಸೈಟಿಗಳ ಕಾಯಿದೆ ಈ ವಿಚಾರದಲ್ಲಿ ಅನ್ವಯಿಸಲ್ಲ ಎಂದು ಆದೇಶಿಸಿದೆ.

ವಸತಿ ಸಮುಚ್ಛಯಗಳಿಗೆಂದೇ ಕೆಎಒಎ ಕಾಯಿದೆ ರೂಪಿಸಲಾಗಿದೆ. ಹೀಗಾಗಿ ಸಂಘಗಳನ್ನು ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯಿದೆ (ಕೆಎಒಎ) ಅಡಿಯೇ ನೋಂದಾಯಿಸಬೇಕೇ ಹೊರತು ಕರ್ನಾಟಕ ಸಹಕಾರ ಸೊಸೈಟಿಗಳ ಕಾಯಿದೆಯಡಿ ಅಲ್ಲ. ಕೆಸಿಎಸ್‌ ಅಡಿ ವಸತಿ ಸಮುಚ್ಛಯಗಳ ಸಂಘ ನೋಂದಣಿಗೆ ಅವಕಾಶವಿಲ್ಲ. ಹೀಗಾಗಿ ಅರ್ಜಿದಾರರು ಅಪಾರ್ಟ್‌ಮೆಂಟ್‌ ಓನರ್ಸ್‌ ಅಸೋಸಿಯೇಷನ್‌ ಅನ್ನು ಕೆಎಒಎ ಕಾಯಿದೆಯಡಿ ನೋಂದಾಯಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.

Kannada Bar & Bench
kannada.barandbench.com