ವಿಪಕ್ಷಗಳ ವಿರೋಧದ ನಡುವೆ ಎಪಿಎಂಸಿ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ತಿದ್ದುಪಡಿ ವಿಧೇಯಕ ವಿಧಾನ ಪರಿಷತ್‌ನಲ್ಲೂ ಅಂಗೀಕಾರವಾದರೆ ಇನ್ಮುಂದೆ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಇದ್ದ ಅವಕಾಶ ರದ್ದಾಗಲಿದೆ.
Vidhana Soudha
Vidhana Soudha

ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ಸೇರಿಸಲಾಗಿದ್ದ ಅಂಶಗಳನ್ನು ರದ್ದುಪಡಿಸಲು ರೂಪಿಸಿರುವ ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ- 2023'ಕ್ಕೆ ಪ್ರತಿಪಕ್ಷಗಳ ತೀವ್ರ ವಿರೋಧ ಹಾಗೂ ಧರಣಿ ನಡುವೆಯೇ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ದೊರೆತಿದೆ.

ಈ ಮಧ್ಯೆ, ವಿಧೇಯಕದ ಅಂಗೀಕಾರದ ಬಳಿಕ ಸ್ಪೀಕರ್ ಅವರ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಪ್ರತಿಪಕ್ಷಗಳ ಆಗ್ರಹದಂತೆ ತಿದ್ದುಪಡಿ ವಿಧೇಯಕದ ನಿಯಮಾವಳಿ ರೂಪಿಸುವ ಮುನ್ನ ರಾಜ್ಯದ ರೈತ ಮುಖಂಡರ ಸಲಹೆ ಪಡೆಯಲು ರಾಜ್ಯ ಸರ್ಕಾರ ಸಮ್ಮತಿಸಿದೆ.

ತಿದ್ದುಪಡಿ ವಿಧೇಯಕ ವಿಧಾನ ಪರಿಷತ್‌ನಲ್ಲೂ ಅಂಗೀಕಾರವಾದರೆ ಇನ್ಮುಂದೆ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಇದ್ದ ಅವಕಾಶ ರದ್ದಾಗಲಿದೆ. ರಾಜ್ಯದ ಎಪಿಎಂಸಿಗಳ ಪ್ರಾಂಗಣಗಳಲ್ಲಿ ಮಾತ್ರ ರೈತರು ಅಧಿಸೂಚಿತ ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೈಗೊಳ್ಳಲು ಮೂಲ ಅಧಿನಿಯಮದಲ್ಲಿ ಇದ್ದ ನಿರ್ಬಂಧಗಳು ಮರು ಜಾರಿಯಾಗಲಿವೆ. ಜೊತೆಗೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ 5 ಸಾವಿರ ರೂಪಾಯಿ ಗರಿಷ್ಟ 30 ಸಾವಿರ ರೂಪಾಯಿವರೆಗೆ ದಂಡ ವಿಧಿಸಲೂ ಕಾನೂನಲ್ಲಿ ಅವಕಾಶವಾಗಲಿದೆ.

ವಿಧೇಯಕದ ತಿದ್ದುಪಡಿ ಅಂಶಗಳ ಪ್ರಕಾರ, ಸರ್ಕಾರ ಗೊತ್ತುಪಡಿಸಿದ ಮಾರುಕಟ್ಟೆ ಪ್ರಾಂಗಣ, ಉಪ ಪ್ರಾಂಗಣ, ಉಪ ಮಾರುಕಟ್ಟೆ ಪ್ರಾಂಗಣ, ಖಾಸಗಿ ಮಾರುಕಟ್ಟೆ ಪ್ರಾಂಗಣ ಅಥವಾ ಸಂದರ್ಭಾನುಸಾರವಾಗಿ ರೈತ ಗ್ರಾಹಕ ಮಾರುಕಟ್ಟೆ ಪ್ರಾಂಗಣವನ್ನು ಹೊರತುಪಡಿಸಿ ಇನ್ಯಾವುದೇ ಸ್ಥಳವನ್ನು ಕೃಷಿ ಉತ್ಪನ್ನದ ಖರೀದಿ ಮತ್ತು ಮಾರಾಟ ಮಾಡುವಂತಿಲ್ಲ. ಜಿಲ್ಲಾ, ತಾಲ್ಲೂಕು ಎಪಿಎಂಸಿಗಳು, ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಮಾಡಿರುವ ಮಾರುಕಟ್ಟೆ ಮತ್ತು ರಾಜ್ಯ ಸರ್ಕಾರ ಅನುಮತಿ ನೀಡಿದ ಯಾವುದೇ ಇತರೆ ಸಹಕಾರ ಸಂಘದ ಮೂಲಕ ಮಾಡಿರುವ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಮಾಡಬಹುದು.

ಎಪಿಎಂಸಿ ತಿದ್ದುಪಡಿ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಿ ಯಾವುದೇ ಮಾರುಕಟ್ಟೆ ಪ್ರದೇಶದಲ್ಲಿ ಕೃಷಿ ಉತ್ಪನ್ನ ಖರೀದಿ ಮತ್ತು ಮಾರಾಟಕ್ಕೆ ಬಳಿಸಿದರೆ ಅಥವಾ ಅಧಿಕೃತ ಪರವಾನಗಿ ಇಲ್ಲದೆ ವ್ಯಾಪಾರಿ, ದಳ್ಳಾಳಿ, ಬ್ರೋಕರ್, ಸಂಸ್ಕರಣಕಾರ, ದಾಸ್ತಾನುದಾರನಾಗಿರುವುದು ಸಾಬೀತಾದರೆ ಅವರಿಗೆ ಮೂರು ತಿಂಗಳ ವರೆಗೆ ವಿಸ್ತರಿಸಬಹುದಾದ ಜೈಲು ಮತ್ತು ಐದು ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು. 2ನೇ ಬಾರಿ ನಿಯಮ ಉಲ್ಲಂಘನೆಗೆ 20 ಸಾವಿರ ರೂಪಾಯಿ ಮತ್ತು 3ನೇ ಬಾರಿ ಉಲ್ಲಂಘನೆಗೆ 30 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.

ಜವಳಿ, ಕಬ್ಬು, ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ಅವರು ಈ ತಿದ್ದುಪಡಿ ವಿಧೇಯಕವನ್ನು ಸದನದ ಪರ್ಯಾಲೋಚನೆಗೆ ಮಂಡಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಈ ಕಾನೂನನ್ನು ರಾಜ್ಯದಲ್ಲೂ ಜಾರಿಗೊಳಿಸಲಾಗಿತ್ತು. ಆದರೆ, ರೈತರ ವಿರೋಧ, ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಈ ಕಾನೂನನ್ನು ವಾಪಸ್ ಪಡೆದರೂ ರಾಜ್ಯದಲ್ಲಿ ಮುಂದುವರೆಸಲಾಗಿತ್ತು. ಇದರಿಂದ ರೈತರಿಗೆ ತೊಂದರೆ ಆಗುತ್ತಿತ್ತು. ಈ ಕಾರಣಕ್ಕಾಗಿ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಇದರಿಂದ ಕೃಷಿ ಮಾರುಕಟ್ಟೆಗಳು ಪುನಶ್ಚೇತನಗೊಳ್ಳಲಿದೆ. ರೈತರಿಗೆ ತಾವು ಬೆಳೆದ ಉತ್ಪನ್ನಗಳ ಮಾರಾಟಕ್ಕೆ ರಕ್ಷಣೆ ದೊರೆಯಲಿದೆ ಎಂದು ವಿವರಿಸಿದರು.

ಆನಂತರ ಸ್ಪೀಕರ್ ಯು ಟಿ ಖಾದರ್ ಅವರು ವಿಧೇಯಕ ಮೇಲೆ ಚರ್ಚೆಗೆ ಅವಕಾಶ ನೀಡಿದರು. ಅಂತಿಮವಾಗಿ ಧ್ವನಿ ಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು.

Related Stories

No stories found.
Kannada Bar & Bench
kannada.barandbench.com