ರೈತರು ಬೆಳೆದ ದಿನಸಿ ಪದಾರ್ಥಗಳ ಖರೀದಿ ಮತ್ತು ಮಾರಾಟಕ್ಕೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರಿಂದ ಸ್ಪರ್ಧಾತ್ಮಕತೆ ಹೆಚ್ಚಿ ರೈತರಿಗೆ ಅನುಕೂಲವಾಗುತ್ತದೆ. ಈ ಕಾರಣದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಅಧಿನಿಯಮ – 2020 ಜಾರಿಗೊಳಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ತಿದ್ದುಪಡಿ ಕಾಯಿದೆಯಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗಲಿದ್ದು, ಸಣ್ಣ, ಮಧ್ಯಮ ವರ್ಗದ ರೈತರಿಗೆ ಹೊಡೆತ ಬೀಳಲಿದೆ ಎಂಬ ಆರೋಪ ಕೇಳಿ ಬಂದಿದೆ.
ಕೇಂದ್ರ ಸರ್ಕಾರದ 2017ರ ಮಾದರಿ ಕೃಷಿ ಉತ್ಪನ್ನ ಮತ್ತು ಜೀವನೋಪಾಯ ಮಾರುಕಟ್ಟೆ ಕಾಯಿದೆ (ಎಪಿಎಲ್‌ಎಂ) ಅನುಸಾರ ರಾಜ್ಯದಲ್ಲೂ ವಿಧೇಯಕ ತಯಾರಿಸಲಾಗಿದೆ.
ಮಾರುಕಟ್ಟೆ ಪ್ರಾಂಗಣ, ಉಪ ಪ್ರಾಂಗಣ ಅಥವಾ ಬೇರಾವುದೇ ಸ್ಥಳದಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ಖರೀದಿ ಅಥವಾ ಮಾರಾಟಕ್ಕಾಗಿ ಉಪಯೋಗಿಸಬಹುದಾಗಿದೆ.
ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಸಂಘ, ಪ್ರಾಥಮಿಕ ಕೃಷಿ ಸಹಕಾರ ಪತ್ತಿನ ಸಂಘ, ಸರ್ಕಾರದ ಅನುಮತಿ ಪಡೆದ ಯಾವುದೇ ಸಹಕಾರ ಸಂಘದ ಮೂಲಕ ಖರೀದಿ ಮತ್ತು ಮಾರಾಟ ಮಾಡಬಹುದಾಗಿದೆ.
ವ್ಯಾಪಾರಸ್ಥರು, ವಿವಿಧ ಕಂಪನಿಯವರು ನೇರವಾಗಿ ರೈತರ ಮನೆ ಬಾಗಿಲಿಗೆ ತೆರಳಿ ಬೆಳೆ ಖರೀದಿಸಬಹುದು.
ರಾಜ್ಯದ ಯಾವುದೇ ಜಿಲ್ಲೆಯ ಎಪಿಎಂಸಿಯಲ್ಲಿ (ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ದಿ ಕಾಯಿದೆ) ರೈತರು ತಮ್ಮ ಬೆಳೆ ಮತ್ತು ಉತ್ಪನ್ನಗಳ ಮಾರಾಟ ಮಾಡಬಹುದು.
ರೈತರು ಬೆಳೆದ ಉತ್ಪನ್ನಗಳ ಮಾರಾಟ ಸಂಬಂಧ ಆನ್‌ಲೈನ್ ಮಾರ್ಕೆಟಿಂಗ್ ಸೌಲಭ್ಯದ ಲಾಭ ಪಡೆಯಬಹುದು.
ಹಳೆಯ ಕಾಯಿದೆಯಂತೆ ವರ್ತಕರು ನೇರವಾಗಿ ರೈತರ ಹೊಲದಿಂದ ಬೆಳೆ ಖರೀದಿಸುವಂತಿಲ್ಲ. ಹಾಗೆ ಮಾಡಿದರೆ ವರ್ತಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬಹುದಾಗಿತ್ತು. ಇನ್ನು ಮುಂದೆ ಅದಕ್ಕೆ ಅವಕಾಶ ಇರುವುದಿಲ್ಲ.
ಹೊಸ ಕಾಯಿದೆಯ ಮೂಲಕ ಎಪಿಎಂಸಿಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವ ಉದ್ದೇಶ ಹೊಂದಲಾಗಿದೆ.
ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ: ರಾಜ್ಯದಲ್ಲಿರುವ 170 ಕ್ಕೂ ಅಧಿಕ ಎಪಿಎಂಸಿ ಪ್ರಾಂಗಣಗಳ ಪೈಕಿ ಶೇ. 70 ರಷ್ಟು ಯಾರ್ಡ್‌ಗಳಲ್ಲಿ ಉತ್ತಮ ವ್ಯವಹಾರ ನಡೆಯುತ್ತಿದೆ. ಇವುಗಳ ವ್ಯವಹಾರದಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ 1000 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಸಂದಾಯವಾಗುತ್ತಿದೆ. ತಿದ್ದುಪಡಿ ಕಾಯಿದೆಯಿಂದ ರಾಜ್ಯದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ ಖೋತಾ ಆಗಲಿದೆ.
ಬೇಡಿಕೆಗೆ ಅವಕಾಶ: ಎಪಿಎಂಸಿ ಪ್ರಾಂಗಣಕ್ಕೆ ತಂದ ಉತ್ಪನ್ನಗಳ ಬೆಲೆಗಾಗಿ ರೈತರು ಬೇಡಿಕೆ ಇಡಬಹುದು. ಉತ್ಪನ್ನಕ್ಕೆ ಸೂಕ್ತ ಬೆಲೆ ಸಿಗದಿದ್ದರೆ ಹರಾಜು ಹಾಕಿ ಮಾರಾಟ ಮಾಡಬಹುದು. ಇದಕ್ಕೆ ಯಾವುದೇ ತೆರನಾದ ಶುಲ್ಕವಿಲ್ಲ.
ನೇರ ವ್ಯವಹಾರ: ಕಾಯಿದೆಗೆ ತಿದ್ದುಪಡಿಯಿಂದ ವರ್ತಕರು ನೇರವಾಗಿ ರೈತರ ಹೊಲಗಳಿಗೆ ತೆರಳಿ ವ್ಯಾಪಾರ-ವಹಿವಾಟು ನಡೆಸುವ ಅವಕಾಶ ಸಿಗಲಿದೆ. ಇದರಿಂದ ಸರಕಾರಕ್ಕೆ ಯಾವುದೇ ತೆರನಾದ ಶುಲ್ಕ ಸಂಗ್ರಹಿಸುವ ಅವಕಾಶ ಸಿಗುವುದಿಲ್ಲ.
ಆಡಳಿತ ನಿಗಾ ಇದೆ: ಎಪಿಎಂಸಿ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸಿದರೆ ಪ್ರತಿ ವ್ಯವಹಾರದ ಮೇಲೆ ಎಪಿಎಂಸಿ ಚುನಾಯಿತ ಆಡಳಿತ ಮಂಡಳಿ ನಿಗಾ ಇಟ್ಟಿರುತ್ತದೆ. ಇಲ್ಲಿ ರೈತನಿಗೆ ಮೋಸ ಆಗುವ ಸಾಧ್ಯತೆ ಕಡಿಮೆ ಇರುತ್ತದೆ. ಒಂದೊಮ್ಮೆ ನೇರವಾಗಿ ಹೊಲಕ್ಕೆ ತೆರಳಿ ಖರೀದಿ ಮಾಡಿದರೆ ಆಡಳಿತ ಮಂಡಳಿಯ ಭದ್ರತೆ ಸಿಗುವುದಿಲ್ಲ.
ಬಂಡವಾಳಶಾಹಿಗಳಿಗೆ ಅನುಕೂಲ: ಎಪಿಎಂಸಿ ಕಾಯಿದೆಗೆ ತಿದ್ದುಪಡಿಯಿಂದ ಬಂಡವಾಳಶಾಹಿಗಳಿಗೆ ಮತ್ತು ಕಾರ್ಪೊರೇಟ್ ವಲಯದ ಬಹುರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚು ಅನುಕೂಲವಾಗುವ ಆತಂಕ.
ಎಪಿಎಂಸಿ ದುರ್ಬಲ ಸಾಧ್ಯತೆ: ತಿದ್ದುಪಡಿ ಕಾಯಿದೆಯಿಂದ ಎಪಿಎಂಸಿಗಳು ದುರ್ಬಲವಾಗುವ ಆತಂಕವಿದೆ.
ರೈತರಿಗೆ ಹಣದ ಸಮಸ್ಯೆ: ಹೊಸ ವ್ಯವಸ್ಥೆಯಲ್ಲಿ ರೈತರಿಗೆ ಕೃಷಿ ಉತ್ಪನ್ನ ಮಾರಾಟವಾದ ತಕ್ಷಣ ಹಣ ಸಿಗುವುದು ಅನುಮಾನ.