ದೇಗುಲದ ಬಳಿ ಕೊಳೆಗೇರಿ ಪುನರ್ವಸತಿಗೆ ಆಕ್ಷೇಪ: ಭಕ್ತರು ಯಾವ ಯುಗದಲ್ಲಿದ್ದಾರೆ ಎಂದು ಕಿಡಿಕಾರಿದ ಹೈಕೋರ್ಟ್‌

ಕೊಳೆಗೇರಿ ನಿವಾಸಿಗಳಿಗೆ ಮನೆ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಶ್ರೀ ಕಾಳಿಕಾಂಬ ಸೇವಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
High Court of Karnataka
High Court of Karnataka
Published on

ದೇವಸ್ಥಾನದ ಪಕ್ಕದಲ್ಲಿ ಕೊಳೆಗೇರಿ ನಿವಾಸಿಗಳ ಪುನರ್ವಸತಿ ಕೇಂದ್ರ ನಿರ್ಮಿಸಲು ಅವಕಾಶ ನೀಡುವುದರಿಂದ ದೇಗುಲದ ಪಾವಿತ್ರ್ಯತೆ ಮತ್ತು ಪ್ರಶಾಂತತೆಗೆ ಧಕ್ಕೆಯಾಗುತ್ತದೆ ಎಂಬ ಆಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಘಾತ ವ್ಯಕ್ತಪಡಿಸಿದೆ.

ಕೊಳೆಗೇರಿ ನಿವಾಸಿಗಳಿಗೆ ಮನೆ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ, ಮಂಡ್ಯದ ಶ್ರೀ ಕಾಳಿಕಾಂಬ ಸೇವಾ ಸಮಿತಿಯ ಮರು ಪರಿಶೀಲನಾ ಅರ್ಜಿ ಹಾಗೂ ಹೊಸಹಳ್ಳಿಯ ಇಕ್ಕಳಕ್ಕಿ ರಾಮಲಿಂಗೇಗೌಡ ಸೇರಿದಂತೆ ಎಂಟು ಭಕ್ತರು ಸಲ್ಲಿಸಿದ್ದ  ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.

Justice M Nagaprasanna
Justice M Nagaprasanna

“ದೇವಸ್ಥಾನದ ಪಕ್ಕದಲ್ಲೇ ಜೋಪಡಿ ಪ್ರದೇಶ ನಿರ್ಮಾಣಗೊಂಡರೆ ಭಕ್ತರ ಧಾರ್ಮಿಕ ಭಾವನೆಗಳು, ಪಾವಿತ್ರ್ಯ ಮತ್ತು ಶಾಂತ ವಾತಾವರಣಕ್ಕೆ ಧಕ್ಕೆ ಉಂಟು ಮಾಡುತ್ತದೆ. ಇದು ಸಂವಿಧಾನದ 29ನೇ ವಿಧಿಯ ಉಲ್ಲಂಘನೆಯಾಗುತ್ತದೆ” ಎಂಬ ಅರ್ಜಿದಾರರ ವಾದವನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಪೀಠವು “ದೇಗುಲ ಸಮಿತಿಯ ಈ ನಿಲುವು ಜಾತಿ, ವರ್ಗ ಅಥವಾ ಧರ್ಮದ ಮೂಲಕ ಸಮಾಜವನ್ನು ವಿಭಜಿಸುವ ಪ್ರಯತ್ನ. ಅರ್ಜಿದಾರರ ಪೂರ್ವಗ್ರಹ ಮತ್ತು ಬಹಿಷ್ಕಾರದ ಮನಃಸ್ಥಿತಿಗೆ ತಾಜಾ ನಿದರ್ಶನ” ಎಂದು ತೀಕ್ಷ್ಣ ಪದಗಳಲ್ಲಿ ಖಂಡಿಸಿದೆ.

“ಈ ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿಲ್ಲ. ಅರ್ಜಿದಾರರು ಧಾರ್ಮಿಕ ಅಲ್ಪಸಂಖ್ಯಾತರೂ ಅಲ್ಲ. ಆದ್ದರಿಂದ, ಸಂವಿಧಾನದ 29ನೇ ವಿಧಿಯ ಅಡಿಯಲ್ಲಿ ಹಕ್ಕು ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಲು ಸಾಧ್ಯವಿಲ್ಲ. ಏಕೆಂದರೆ 29ನೇ ವಿಧಿಯ ಉಲ್ಲಂಘನೆಯು ಘೋಷಿತ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮಾತ್ರವೇ ಅನ್ವಯಿಸುತ್ತದೆ” ಎಂದು ಪೀಠ ಸ್ಪಷ್ಟಪಡಿಸಿದೆ.

“ಭಾರತ ದೇಶವನ್ನು ಉನ್ನತ ದೇಶವನ್ನಾಗಿ ನೋಡಬೇಕೆಂದಿದ್ದರೆ, ಅದು ತನ್ನ ನಾಗರಿಕರನ್ನು ಎರಡನೇ ದರ್ಜೆಗೆ ಇಳಿಸಿ ನೋಡಲು ಸಾಧ್ಯವಿಲ್ಲ. ಜೋಪಡಿ ನಿವಾಸಿಗಳ ಘನತೆ ಯಾವುದೇ ಭಕ್ತರ ಘನತೆಗಿಂತ ಕೀಳಾಗಿಲ್ಲ. ದೇಶದಲ್ಲಿ ಒಬ್ಬರ ಹಕ್ಕನ್ನು ಉಳಿಸಲಿಕ್ಕಾಗಿ ಇನ್ನೊಬ್ಬರ ಹಕ್ಕನ್ನು ಅಡಗಿಸುವ ಅಗತ್ಯವಿಲ್ಲ. ನಮ್ಮ ದೇಶದ ಸಂವಿಧಾನಕ್ಕೆ ಮಾನವನ ಮೌಲ್ಯಾಧಾರಿತ ವರ್ಗ ಶ್ರೇಣಿಯಿಲ್ಲ. ಅದರ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ” ಎಂದು ಪ್ರತಿಪಾದಿಸಿದೆ.

ಸುದೀರ್ಘ ವ್ಯಾಜ್ಯದ ನಂತರ ಮಂಡ್ಯದ ಸರ್ವೇ ನಂ 843 ಮತ್ತು 844ರಲ್ಲಿ ಒಟ್ಟು 28½ ಗುಂಟೆ ಭೂಮಿಯನ್ನು ಕಾಯಿದೆಯ ಸೆಕ್ಷನ್‌ 3ರ ಅಡಿಯಲ್ಲಿ ಮರು-ಜೋಪಡಿ ಪ್ರದೇಶ ಎಂದು ಘೋಷಿಸಿ, ಆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿ ಜೋಪಡಿ ವಾಸಿಗಳಿಗೆ ಪುನರ್ವಸತಿ ಕಲ್ಪಿಸುವಂತೆ ಆದೇಶ ಹೊರಡಿಸಲಾಗಿತ್ತು. ಈ ಕುರಿತಂತೆ ಜಿಲ್ಲಾಧಿಕಾರಿ 2018ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದರು. ರಾಜ್ಯ ಸರ್ಕಾರದ ಪರ ರಾಹುಲ್‌ ಕಾರ್ಯಪ್ಪ ಮತ್ತು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಪರ ಹೈಕೋರ್ಟ್‌ ವಕೀಲ ಎಂ ಪಿ ಶ್ರೀಕಾಂತ್‌ ವಾದಿಸಿದ್ದರು.

‘ಅರ್ಜಿದಾರರ ವಾದದ ಹಿಂದಿರುವ ಅರ್ಥವನ್ನು ಗಮನಿಸಿದರೆ ಜೋಪಡಿ ವಾಸಿಗಳು ಕೆಳಮಟ್ಟದ ವ್ಯಕ್ತಿಗಳು, ಭಕ್ತಿ ತೋರಿಸುವ, ಪೂಜಾ ಸ್ಥಳದ ಸಮೀಪ ವಾಸಿಸುವ ಹಕ್ಕಿನಿಂದ ವಂಚಿತರಾದವರು ಎಂದೇ ಆಗಿದೆ. ಇಂತಹ ಮಾತುಗಳು ಈ ಪ್ರಬುದ್ಧ ಯುಗದಲ್ಲಿ, ಅತ್ಯಂತ ಭೀಕರವಾಗಿ ಕಾಣುತ್ತವೆ. ದೇವಾಲಯ ಸಮಿತಿಯ ಎಲ್ಲ ವಾದಾಂಶಗಳು ಗಾಢವಾದ ನೋವುಂಟು ಮಾಡಿವೆ’ ಎಂದು ಬೇಸರಿಸಿದೆ.

Attachment
PDF
Ikkalakki Ramalingegowda Vs State of Karnataka
Preview
Kannada Bar & Bench
kannada.barandbench.com