

ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದಲ್ಲಿ ಆರೋಪಿಯನ್ನು ದೋಷಿ ಎಂದು ಘೋಷಿಸಿದ್ದ ಸತ್ರ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಬದಿಗೆ ಸರಿಸಿದೆ. ಅಲ್ಲದೇ, ಸತ್ರ ನ್ಯಾಯಾಲಯಕ್ಕೆ ವ್ಯಾಪ್ತಿ ಇಲ್ಲದಿದ್ದರೂ ವಿಚಾರಣಾಧೀನ ನ್ಯಾಯಾಲಯದ ಖುಲಾಸೆ ಆದೇಶವನ್ನು ಪ್ರಶ್ನಿಸಿ, ರಾಜ್ಯ ಸರ್ಕಾರವು ತಪ್ಪಾಗಿ ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ ಎಂದಿದೆ.
ವಿಚಾರಣಾಧೀನ ನ್ಯಾಯಾಲಯದ ಖುಲಾಸೆ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ್ದ ಸತ್ರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕೆ ಕೇಶವ ಮೇಲ್ಮನವಿ ಸಲ್ಲಿಸಿದ್ದನ್ನು ನ್ಯಾಯಮೂರ್ತಿ ಜಿ ಬಸವರಾಜ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ. ಸತ್ರ ನ್ಯಾಯಾಲಯವು ಕೇಶವ ಅವರನ್ನು ಐಪಿಸಿ ಸೆಕ್ಷನ್‌ಗಳಾದ 279, 337, 338 ಮತ್ತು 304-ಎ ಅಡಿ ಅಪರಾಧದಲ್ಲಿ ದೋಷಿ ಎಂದು ತೀರ್ಮಾನಿಸಿತ್ತು.
“ಕ್ರಿಮಿನಲ್ ಅಪರಾಧ ಸಂಹಿತೆ ಸೆಕ್ಷನ್ 378ಕ್ಕೆ ತಿದ್ದುಪಡಿಯಾದ ಬಳಿಕ ಸಂಜ್ಞೇ ಮತ್ತು ಜಾಮೀನುರಹಿತ ಅಪರಾಧವಾಗಿದ್ದಾಗ ಮಾತ್ರ ಮ್ಯಾಜಿಸ್ಟ್ರೇಟ್ ಮಾಡಿದ ಖುಲಾಸೆ ಆದೇಶವನ್ನು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಬಹುದು. ಉಳಿದೆಲ್ಲಾ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ಮಾಡಿದ ಖುಲಾಸೆ ಆದೇಶವನ್ನು ಮೇಲ್ಮನವಿಯ ಮೂಲಕ ಹೈಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಬಹುದಾಗಿದೆ. ಐಪಿಸಿ ಸೆಕ್ಷನ್‌ಗಳಾದ 279, 337, 338 ಮತ್ತು 304-ಎ ಜಾಮೀನು ನೀಡಬಹುದಾದ ಅಪರಾಧಗಳಾಗಿದ್ದು, ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಿತ್ತು” ಎಂದು ಹೈಕೋರ್ಟ್ ನಿರ್ದೇಶಿಸಿದೆ.
“ಜಾಮೀನು ಸಹಿತ ಅಪರಾಧಗಳಲ್ಲಿ ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿಯು ಹೇಗೆ ಊರ್ಜಿತವಾಗುತ್ತದೆ ಎಂಬುದನ್ನು ತೋರಿಸಲು ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕರು ವಿಫಲರಾಗಿದ್ದಾರೆ. ಅಪರಾಧ ಪ್ರಕ್ರಿಯೆ ಸಂಹಿತೆ ಸೆಕ್ಷನ್ 378ರ ಉಪ ಸೆಕ್ಷನ್ (1)ರ ಕ್ಲಾಸ್ (b) ಅಡಿ ಅಂಥ ಮೇಲ್ಮನವಿಯು ಸತ್ರ ನ್ಯಾಯಾಲಯದ ವ್ಯಾಪ್ತಿಗೆ ಬರಲ್ಲ” ಎಂದು ಹೈಕೋರ್ಟ್ ಹೇಳಿದೆ.
ವ್ಯಾಪ್ತಿಯ ವಿಚಾರಕ್ಕೆ ಒತ್ತು ನೀಡಿರುವ ಹೈಕೋರ್ಟ್ “ಸತ್ರ ನ್ಯಾಯಾಲಯದ ಆದೇಶವು ಮೂಲದಲ್ಲಿ ವ್ಯಾಪ್ತಿ ಹೊಂದಿಲ್ಲ. ಇಂಥ ಸಂದರ್ಭದಲ್ಲಿ ಪ್ರಕ್ರಿಯೆ ಮುಂದುವರಿಸುವುದು ನ್ಯಾಯಾಲಯದ ಪ್ರಕ್ರಿಯೆ ದುರ್ಬಳಕೆಯಾಗಲಿದ್ದು, ಆರೋಪಿಗೆ ಸಂವಿಧಾನದ ಅಡಿ ದೊರೆತಿರುವ 21ನೇ ವಿಧಿಯ ಹಕ್ಕಿನ ಉಲ್ಲಂಘನೆಯಾಗಲಿದೆ. ವ್ಯಾಪ್ತಿಯನ್ನು ಪರೋಕ್ಷವಾಗಿ ಭಾವಿಸಿಕೊಳ್ಳಲಾಗದು. ನ್ಯಾಯದಾನದ ದುರ್ಬಳಕೆ ತಪ್ಪಿಸಲು ಅಂತರ್ಗತವಾದ ಅಧಿಕಾರವನ್ನು ಸೂಕ್ತ ವ್ಯಾಪ್ತಿಗೆ ಅನ್ವಯಿಸಬೇಕಾಗುತ್ತದೆ” ಎಂದಿದೆ.
ಹೀಗಾಗಿ, ವಿಚಾರಣಾಧೀನ ನ್ಯಾಯಾಲಯ ಮಾಡಿರುವ ಖುಲಾಸೆ ಆದೇಶದಲ್ಲಿ ವಾಸ್ತವಿಕ ಅಥವಾ ಕಾನೂನಾತ್ಮಕ ದೋಷಗಳಿಲ್ಲ. ಆದರೆ, ಪ್ರಥಮ ಮೇಲ್ಮನವಿ ನ್ಯಾಯಾಲಯವು ಖುಲಾಸೆ ಆದೇಶವನ್ನು ಬದಿಗೆ ಸರಿಸಲು ಸೂಕ್ತ ಕಾರಣಗಳನ್ನು ನೀಡಿಲ್ಲ ಎಂದು ಮೇಲ್ಮನವಿ ಪುರಸ್ಕರಿಸಿದೆ.
ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿದ್ದ ಸಾಬಪ್ಪ ಬಿ ಎಂ ಅವರು “ಜಾಮೀನುರಹಿತ ಅಪರಾಧಗಳಲ್ಲಿ ಖುಲಾಸೆ ಆದೇಶ ಮಾಡಿದಾಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳಿಗೆ ಮೇಲ್ಮನವಿ ವಿಚಾರಣೆ ನಡೆಸುವ ಅಧಿಕಾರವಿಲ್ಲ. ಅಪರಾಧ ಪ್ರಕ್ರಿಯೆ ಸಂಹಿತೆ ಸೆಕ್ಷನ್ 378ರ ಉಪ ಸೆಕ್ಷನ್ (1)ರ ಕ್ಲಾಸ್ (a) ಅಡಿ ಖುಲಾಸೆ ಆದೇಶ ಬರುವುದಿಲ್ಲ. ಹೀಗಾಗಿ, ಪ್ರಥಮ ಮೇಲ್ಮನವಿ ನ್ಯಾಯಾಲಯ ಮಾಡಿರುವ ಆದೇಶವು ಅಸಿಂಧುವಾಗುತ್ತದೆ” ಎಂದಿದ್ದರು.
ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕಿ ಅಸ್ಮಾ ಕೌಸರ್ ಅವರು “ಮೆರಿಟ್ ಮೇಲೆ ಪ್ರಥಮ ಮೇಲ್ಮನವಿ ನ್ಯಾಯಾಲಯ ತೀರ್ಪು ಪ್ರಕಟಿಸಿರುವುದು ನ್ಯಾಯಯುತವಾಗಿದ್ದು, ಇದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ” ಎಂದಿದ್ದರು.