ಉತ್ತರ ಪ್ರದೇಶ ಮದರಸಾ ಕಾಯಿದೆ ರದ್ದು: ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

ಅಲಾಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಮಾರ್ಚ್ 22ರಂದು ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿತ್ತು.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆ- 2004ನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ವಕೀಲ ಸಂಜೀವ್ ಮಲ್ಹೋತ್ರಾ ಮತ್ತು ವಕೀಲ ಪ್ರದೀಪ್ ಕುಮಾರ್ ಯಾದವ್ ಅವರ ಮೂಲಕ ಮೇಲ್ಮನವಿ ಸಲ್ಲಿಸಲಾಗಿದೆ.

ಮದರಸಾಗಳು ಇಸ್ಲಾಮಿಕ್ ಅಧ್ಯಯನ ಮತ್ತಿತರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತವೆ. ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆ- 2004 ಪ್ರಕಾರ ಮದರಸಾ ಶಿಕ್ಷಣ ಎಂಬುದು ಅರೇಬಿಕ್, ಉರ್ದು, ಪರ್ಷಿಯನ್, ಇಸ್ಲಾಮಿಕ್-ಅಧ್ಯಯನಗಳು, ತತ್ವಶಾಸ್ತ್ರ ಹಾಗೂ ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ನಿರ್ದಿಷ್ಟಪಡಿಸಿದ ಇತರ ಕಲಿಕಾ ಕ್ಷೇತ್ರವನ್ನು ಒಳಗೊಂಡಿದೆ.

ಮದರಸಾಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುವ ಮೂಲಕ ಮದರಸಾ ಶಿಕ್ಷಣ ಮಂಡಳಿಯನ್ನು ಸಬಲೀಕರಣಗೊಳಿಸುವುದು 2004ರ ಕಾಯಿದೆಯ ಉದ್ದೇಶವಾಗಿತ್ತು.

ಮಾರ್ಚ್ 22ರಂದು ನೀಡಿದ ತೀರ್ಪಿನಲ್ಲಿ ಹೈಕೋರ್ಟ್‌ನ ಲಖನೌ ಪೀಠ ಕಾಯಿದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿತು.

ಮದರಸಾ ಕಾಯಿದೆಯು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತತೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರನ್ನೊಳಗೊಂಡ ಹೈಕೋರ್ಟ್ ಪೀಠ ಹೇಳಿತ್ತು.

ಪ್ರಭುತ್ವ ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ ಧರ್ಮಗಳ ನಡುವೆ ತಾರತಮ್ಯ ಎಸಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.

ಸಂವಿಧಾನದ 14ನೇ (ಸಮಾನತೆಯ ಹಕ್ಕು), 21ನೇ (ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಹಾಗೂ 21-ಎ ವಿಧಿಗಳನ್ನು (6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣದ ಹಕ್ಕು) ಮದರಸಾ ಕಾಯಿದೆ ಉಲ್ಲಂಘಿಸಿದೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.

ಉತ್ತರ ಪ್ರದೇಶದ ಮದರಸಾಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಬೇರೆ ಶಾಲೆಗಳಿಗೆ ತೆರಳಲು ತಕ್ಷಣದ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಅದು ಸೂಚಿಸಿತ್ತು.

ಈ ತೀರ್ಪನ್ನು ಈಗ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com