ಕಲ್ಯಾಣ ಕರ್ನಾಟಕ 371ಜೆ ಮೀಸಲಾತಿ: ಸ್ಥಳೀಯೇತರ ವೃಂದದಲ್ಲಿ ಅರ್ಹ ಸ್ಥಳೀಯರ ಸ್ಪರ್ಧೆ ಎತ್ತಿ ಹಿಡಿದ ಹೈಕೋರ್ಟ್

ಅದಾಗ್ಯೂ, ಇದೊಂದು ಅಸಾಧಾರಣ ಪ್ರಕರಣ ಎಂದು ಪರಿಗಣಿಸಿ ಸ್ಥಳಿಯೇತರ ಕೇಡರ್‌ನಲ್ಲಿ ಆಯ್ಕೆಯಾಗಿರುವ ಸ್ಥಳೀಯರು ಸ್ಥಳೀಯ ಕೇಡರ್‌ ಆಯ್ಕೆ ಮಾಡಿಕೊಳ್ಳುವ ಇಚ್ಛೆ ಹೊಂದಿದ್ದಾರೆಯೇ ಎಂದು ಕೇಳುವ ಮೂಲಕ ಹೊಸ ಆಯ್ಕೆ ಮಾಡಲು ಕೆಪಿಟಿಸಿಎಲ್‌ಗೆ ನಿರ್ದೇಶನ.
Karntaka HC and Justice N S Sanjay Gowda
Karntaka HC and Justice N S Sanjay Gowda

ಸ್ಥಳೀಯೇತರ ಹುದ್ದೆಗಳ ವೃಂದದಲ್ಲಿ ಅರ್ಹ ಸ್ಥಳೀಯ ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಸ್ಥಳೀಯ ವೃಂದದಲ್ಲಿ ಹೆಚ್ಚು ಸ್ಥಳೀಯರಿಗೆ ಅವಕಾಶ ಕಲ್ಪಿಸಲು ಅನುವು ಮಾಡಿದ್ದ ರಾಜ್ಯ ಸರ್ಕಾದ ಸುತ್ತೋಲೆಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಎತ್ತಿ ಹಿಡಿದಿದೆ. ಇದು ಹಿಂದುಳಿದ ಪ್ರದೇಶವಾದ ಹೈದರಾಬಾದ್‌ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ರೂಪಿಸಿರುವ ಸಂವಿಧಾನದ 371ಜೆ ವಿಧಿಯ ಆಶಯಕ್ಕೆ ಅನುಗುಣವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಮಂಡ್ಯದ ಎಚ್‌ ಎನ್‌ ನವೀನ್‌ ಕುಮಾರ್‌ ಸೇರಿದಂತೆ 76 ಅಭ್ಯರ್ಥಿಗಳು 2023ರ ಫೆಬ್ರವರಿ 1ರಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ತಿರಸ್ಕರಿಸಿದೆ.

2022ರ ಜನವರಿ 24ರಂದು ಕೆಪಿಟಿಸಿಎಲ್‌ ಸಹಾಯಕ ಎಂಜಿನಿಯರ್‌ ಮತ್ತು ಕಿರಿಯ ಎಂಜಿನಿಯರ್‌ (ಎಲೆಕ್ಟ್ರಿಕಲ್)‌ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ ರಾಜ್ಯ ಸರ್ಕಾರವು ಹೊರಡಿಸಿದ್ದ ನೇಮಕಾತಿ ಅಧಿಸೂಚನೆ ಹಿನ್ನೆಲೆಯಲ್ಲಿ ಅರ್ಜಿದಾರರು ಸಹಾಯಕ ಎಂಜಿನಿಯರ್‌ ಮತ್ತು ಕಿರಿಯ ಎಂಜಿನಿಯರ್‌ ಹುದ್ದೆಗಳಿಗೆ (ಎಲೆಕ್ಟ್ರಿಕಲ್)‌ ಅರ್ಜಿ ಹಾಕಿದ್ದರು. ಇದರ ಬೆನ್ನಿಗೇ, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಸಂವಿಧಾನದ 371ಜೆ ವಿಧಿಯಡಿ ಮೀಸಲಾತಿ ಅನ್ವಯಿಸಬೇಕು ಎಂದು ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಲಾಗಿತ್ತು.

ಅರ್ಜಿದಾರರ ಪರ ವಕೀಲರು “ಆಕ್ಷೇಪಾರ್ಹವಾದ ಸುತ್ತೋಲೆಯನ್ನು 2020ರ ಜೂನ್‌ 6ರ ನಂತರ ಮತ್ತು 2022ರ ಜೂನ್‌ 15ಕ್ಕೂ ಮುನ್ನ ಹೊರಡಿಸಿದ್ದು, 2020ರ ಜೂನ್‌ 6ರ ಸುತ್ತೋಲೆಯನ್ನು ಅನುಪಾಲಿಸಲಾಗಿದೆ. ಇದರಲ್ಲಿ ಮೀಸಲಾತಿ ಒಳಗೊಂಡ ಸ್ಥಳೀಯ ಮತ್ತು ಸ್ಥಳೀಯೇತರ ಹುದ್ದೆಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಸ್ಥಳೀಯ ಅಭ್ಯರ್ಥಿಗಳು ಸ್ಥಳೀಯ ಕೇಡರ್‌ ಆಯ್ಕೆ, ಅಭ್ಯರ್ಥಿಯು ಸ್ಥಳಿಯೇತರ ಕೇಡರ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆಯೇ, ಎರಡರಲ್ಲೂ ಆಯ್ಕೆಯಾಗುವ ಅರ್ಹತೆ ಹೊಂದಿದ್ದರೆ ಅಭ್ಯರ್ಥಿಯು ಯಾವ ಕೇಡರ್‌ ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ ಎಂದು ತಿಳಿಸಬೇಕು” ಎಂದು ವಾದಿಸಲಾಗಿತ್ತು.

ಅದಾಗ್ಯೂ, “2023ರ ಫೆಬ್ರವರಿ 1ರಂದು ರಾಜ್ಯ ಸರ್ಕಾರವು ಆರನೇ ಸುತ್ತೋಲೆಯ (ಆಕ್ಷೇಪಾರ್ಹವಾದ ಸುತ್ತೋಲೆ) ಮೂಲಕ ಸ್ಪಷ್ಟನೆ ಹೊರಡಿಸಿದ್ದರಿಂದ ಕೆಪಿಟಿಸಿಎಲ್‌ ಸ್ಥಳೀಯ ಅಭ್ಯರ್ಥಿಗಳು ಮಾಡಿದ್ದ ಆಯ್ಕೆಯನ್ನು ಪರಿಗಣಿಸುವಂತಿರಲಿಲ್ಲ. ಬದಲಿಗೆ ಕೆಪಿಟಿಸಿಎಲ್‌ ಸ್ಥಳಿಯೇತರ ಅಭ್ಯರ್ಥಿಗಳಿಗೆ ವಿರುದ್ಧವಾಗಿ ಮೊದಲು ಸ್ಥಳೀಯ ಅಭ್ಯರ್ಥಿಯತ್ವವನ್ನು ಪರಿಗಣಿಸಬೇಕು. ಸ್ಥಳಿಯೇತರ ಕೇಡರ್‌ ವಿಭಾಗದಲ್ಲಿ ಆಯ್ಕೆಯಾಗಲು ಅವರು ವಿಫಲವಾದರೆ ಆನಂತರ ಅವರನ್ನು ಸ್ಥಳೀಯ ಕೇಡರ್‌ ಹುದ್ದೆಗಳಿಗೆ ಕೆಪಿಟಿಸಿಎಲ್‌ ಪರಿಗಣಿಸಬೇಕು” ಎಂದು ಹೇಳಲಾಗಿತ್ತು.

“ಅರ್ಜಿದಾರರು ಸ್ಥಳಿಯೇತರ ಪ್ರದೇಶದವರಾಗಿದ್ದು, ಸರ್ಕಾರವು ಹೊರಡಿಸಿರುವ ಸುತ್ತೋಲೆಯಿಂದ ಬಾಧಿತರಾಗಿದ್ದಾರೆ. ಸ್ಥಳೀಯ ಅಭ್ಯರ್ಥಿಗಳಿಂದ ಆಯ್ಕೆ ಪಡೆದಿರುವುದೂ ಸೇರಿದಂತೆ ನಿರ್ದಿಷ್ಟ ಆಯ್ಕೆ ಪ್ರಕ್ರಿಯೆಯ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ. ಈಗ ಅದನ್ನು ಸರ್ಕಾರ ಬದಲಿಸಲಾಗದು. ಈ ಬದಲಾಯಿಸುವ ಪ್ರಕ್ರಿಯೆಯು ಆಟದ ನಿಯಮವನ್ನು ಮಧ್ಯಂತರದಲ್ಲಿ ಬದಲಿಸುವುದಕ್ಕೆ ಸಮನಾಗುತ್ತದೆ. ಇದು ಸ್ಥಾಪಿತ ಕಾನೂನಿಗೆ ವಿರುದ್ಧವಾಗಿದೆ” ಎಂದು ವಾದಿಸಿದ್ದರು.

“ಸ್ಥಳೀಯ ಕೇಡರ್‌ಗೆ ಆಯ್ಕೆ ಮಾಡುವ ಮೂಲಕ ಸ್ಥಳೀಯ ಅಭ್ಯರ್ಥಿಗಳು ಸ್ಥಳೀಯೇತರ ಕೇಡರ್‌ನಲ್ಲಿ ನೇಮಕಾತಿ ಪಡೆಯುವ ಹಕ್ಕನ್ನು ಅವರು ಬಳಕೆ ಮಾಡಿದ್ದಾರೆ. ಇದನ್ನು ಈ ಹಂತದಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ಆಧರಿಸಿ ಬದಲಿಸಲಾಗದು. 2022ರ ಜೂನ್‌ 15ರಂದು ಹೊರಡಿಸಿರುವ ಐದನೇ ಸುತ್ತೋಲೆಯನ್ನು ಭವಿಷ್ಯದಲ್ಲಿ ಅನ್ವಯಿಬಹುದು ಆದರೆ 2022ರ ಜೂನ್‌ 15ರಂದು ಹೊರಡಿಸಿರುವ ಸುತ್ತೋಲೆಯು ಮೂಲತಃ ಪೂರ್ವಾನ್ವಯವಾಗುತ್ತದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ವಾದಿಸಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಸಂವಿಧಾನದ 371ಜೆ ಉದ್ದೇಶವನ್ನು ಸಾಧಿಸಲು 2023ರ ಫೆಬ್ರವರಿ 1ರಂದು ಹೊರಡಿಸಿರುವ ಸುತ್ತೋಲೆ ಅಗತ್ಯ. ಇದು ರಾಜ್ಯಪಾಲರ ಆದೇಶದ 19ನೇ ಪ್ಯಾರಾದಡಿ ಕಲ್ಪಿಸಿರುವ ಅಧಿಕಾರದ ವ್ಯಾಪ್ತಿಗೆ ಬರುತ್ತದೆ. 2023ರ ಫೆಬ್ರವರಿ 1ರ ಸುತ್ತೋಲೆಯ ಮೂಲಕ 371ಜೆ ವಿಧಿಯ ಅಡಿ ಮೀಸಲಾತಿ ಕಲ್ಪಿಸಿ ಅರ್ಜಿ ಸಲ್ಲಿಕೆಯು ಸಾಂವಿಧಾನಿಕ ಉದ್ದೇಶ ಈಡೇರಿಕೆ ಸಾಫಲ್ಯಕ್ಕೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ, ಇದನ್ನು ಕಾನೂನುಬಾಹಿರ ಎನ್ನಲಾಗದು” ಎಂದು ವಾದಿಸಿದ್ದರು.

“ಇಲ್ಲಿ ಆಯ್ಕೆ ಅಥವಾ ಅರ್ಹತೆ ಮಾನದಂಡದಲ್ಲಿ ಬದಲಾವಣೆ ಮಾಡದಿರುವುದರಿಂದ ಮಧ್ಯಂತರದಲ್ಲಿ ನಿಯಮಗಳ ಬದಲಾವಣೆ ತತ್ವವನ್ನು ಇದಕ್ಕೆ ಅಳವಡಿಸಲಾಗದು. ಮೀಸಲಾತಿ ಅನ್ವಯಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಅಭ್ಯರ್ಥಿಗೆ ಪೂರ್ವಾಗ್ರಹ ಉಂಟಾಗಿಲ್ಲ. ಒಂದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮೂಲಕ ಸ್ಥಳೀಯ ಮತ್ತು ಸ್ಥಳೀಯೇತರ ಅಭ್ಯರ್ಥಿಗಳು ಸ್ಥಳಿಯೇತರ ಕೇಡರ್‌ ಹುದ್ದೆಗಳಿಗೆ ಸ್ಪರ್ಧೆ ಮಾಡಬೇಕಿದ್ದು, ಸ್ಥಳೀಯ ಅಭ್ಯರ್ಥಿ ಎಂದು ಅರ್ಜಿ ಹಾಕುವುದು ಸ್ಥಳಿಯೇತರ ವ್ಯಕ್ತಿಯೊಂದಿಗೆ ಸ್ಪರ್ಧೆ ಮಾಡುವುದರಿಂದ ಅವರಿಗೆ ನಿರ್ಬಂಧಿಸುವುದಿಲ್ಲ. ಹೀಗಾಗಿ. ಮಧ್ಯಂತರದಲ್ಲಿ ನಿಯಮಗಳ ಬದಲಾವಣೆ ತತ್ವಕ್ಕೆ ಮಹತ್ವವಿಲ್ಲ” ಎಂದು ವಾದಿಸಿದ್ದರು. ನ್ಯಾಯಾಲಯವು ಈ ಅಂಶವನ್ನು ಎತ್ತಿ ಹಿಡಿದಿದೆ.

ಆದಾಗ್ಯೂ ಪ್ರಸ್ತುತ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಇದೊಂದು ಬಾರಿಗೆ ಮಾತ್ರ ಅನ್ವಯವಾಗುವಂತೆ ನ್ಯಾಯಾಲಯವು ಕೆಲ ನಿರ್ದೇಶಗಳನ್ನು ನೀಡಿತು. “ಸ್ಥಳೀಯ ಕೇಡರ್‌ನಲ್ಲಿ ಸಹಾಯಕ ಎಂಜಿನಿಯರ್‌ಗಳ ಹುದ್ದೆಗಳು ಭರ್ತಿಯಾಗದೇ ಖಾಲಿ ಬಿದ್ದಿದ್ದು, ಸ್ಥಳಿಯೇತರ ಕೇಡರ್‌ನಲ್ಲಿ ಅಸಂಖ್ಯಾತ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಕಾದು ಕೂತಿದ್ದಾರೆ. ಉದ್ಯೋಗ ಪಡೆಯುವುದು ಅತ್ಯಂತ ದುರ್ಲಭ ಎನ್ನುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದು, ಮುಂದೆ ನೇಮಕಾತಿ ನಡೆಯುವವರಿಗೆ ಬಹುತೇಕ ಅಭ್ಯರ್ಥಿಗಳು ಅನರ್ಹರಾಗುತ್ತಾರೆ. ಹೀಗಾಗಿ, ಇದೊಂದು ವಿಶೇಷ ಕ್ರಮ ಎಂದು ಪರಿಗಣಿಸಿ ಸಹಾಯಕ ಎಂಜಿನಿಯರ್‌ ಹುದ್ದೆಗಳಿಗೆ ಮಿತಿಗೊಳಿಸಿ ನ್ಯಾಯಾಲಯವು ಕೆಳಕಂಡ ನಿರ್ದೇಶನಗಳನ್ನು ನೀಡಿದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

  • ಸ್ಥಳಿಯೇತರ ಕೇಡರ್‌ನಲ್ಲಿ ಆಯ್ಕೆಯಾಗಿರುವ ಹೈದರಾಬಾದ್‌ ಕರ್ನಾಟಕ ಭಾಗದ ಸ್ಥಳೀಯರು ಸ್ಥಳೀಯ ಕೇಡರ್‌ ಆಯ್ಕೆ ಮಾಡಿಕೊಳ್ಳುವ ಇಚ್ಛೆ ಹೊಂದಿದ್ದಾರೆಯೇ ಎಂದು ಕೇಳುವ ಮೂಲಕ ಹೊಸ ಆಯ್ಕೆ ಮಾಡುವಂತೆ ಹಾಗೂ ಈ ಪ್ರಕರಣವನ್ನು ಅಸಾಧಾರಣ ಪ್ರಕರಣ ಎಂದು ಪರಿಗಣಿಸುವಂತೆ ರಾಜ್ಯ ಸರ್ಕಾರ ಮತ್ತು ಕೆಪಿಟಿಸಿಎಲ್‌ಗೆ ನ್ಯಾಯಾಲಯ ನಿರ್ದೇಶಿಸಿದೆ.

  • ಸ್ಥಳೀಯ ಕೇಡರ್‌ ಆಯ್ಕೆ ಮಾಡಿಕೊಳ್ಳುವ ಸ್ಥಳೀಯ ವ್ಯಕ್ತಿಗಳ ಆಯ್ಕೆಯನ್ನು ಕೆಪಿಟಿಸಿಎಲ್‌ ಪರಿಗಣಿಸಬೇಕು ಮತ್ತು ಸ್ಥಳೀಯ ಕೇಡರ್‌ ಹುದ್ದೆಗಳಿಗೆ ಅವರನ್ನು ಆಯ್ಕೆ ಮಾಡಬೇಕು ಎಂದು ನಿರ್ದೇಶನ.

  • ಸ್ಥಳೀಯರು ಸ್ಥಳೀಯ ಕೇಡರ್‌ ಆಯ್ಕೆ ಮಾಡಿಕೊಳ್ಳುವುದರಿಂದ ಸ್ಥಳಿಯೇತರ ಹುದ್ದೆಗಳು ಖಾಲಿ ಇರಲಿದ್ದು, ಈ ಹುದ್ದೆಗಳನ್ನು ಸ್ಥಳಿಯೇತರ ಅಭ್ಯರ್ಥಿಗಳಿಗೆ ಅರ್ಹತೆಯ ಆಧಾರದಲ್ಲಿ ನೀಡಬೇಕು.

  • ಸ್ಥಳೀಯ ಅಭ್ಯರ್ಥಿಗಳು ಸ್ಥಳಿಯೇತರ ಕೇಡರ್‌ಗೆ ಆಯ್ಕೆಯಾಗಲು ಬಯಸಿದರೆ ಆಗ ಅವರನ್ನು ಸ್ಥಳೀಯ ಕೇಡರ್‌ ಆಯ್ಕೆ ಮಾಡಿಕೊಳ್ಳುವಂತೆ ಬಲವಂತ ಮಾಡುವಂತಿಲ್ಲ.

  • ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನಪಡೆದಿರುವ ಯಾವುದೇ ಸ್ಥಳೀಯ ವ್ಯಕ್ತಿಯನ್ನು ಬದಲಾವಣೆ ಮಾಡುವಂತಿಲ್ಲ. ಒಂದು ವೇಳೆ ಸ್ಥಳೀಯ ವ್ಯಕ್ತಿಯನ್ನು ಸ್ಥಳೀಯ ಕೇಡರ್‌ ಹುದ್ದೆಯಿಂದ ಕೈಬಿಡುವ ಪರಿಸ್ಥಿತಿ ಉದ್ಭವಿಸಿದರೆ ಸ್ಥಳೀಯ ಕೇಡರ್‌ ಆಯ್ಕೆ ಮಾಡಿದ್ದ ಸ್ಥಳಿಯ ಕೇಡರ್‌ ವ್ಯಕ್ತಿಯನ್ನು ಸ್ಥಳಿಯೇತರ ಕೇಡರ್‌ನಲ್ಲೇ ಮುಂದುವರಿಸಬೇಕು.

  • ಸ್ಥಳೀಯ ವ್ಯಕ್ತಿಗಳು ಸ್ಥಳೀಯ ಕೇಡರ್‌ ಹುದ್ದೆಗಳಿಗೆ ಅರ್ಹತೆ ಹೊಂದಿಲ್ಲದಿದ್ದರೆ ಅವರನ್ನು ಸ್ಪಷ್ಟವಾಗಿ ಸ್ಥಳೀಯ ಕೇಡರ್‌ ಹುದ್ದೆಗಳಿಗೆ ವಿರುದ್ಧವಾಗಿ ಪರಿಗಣಿಸಬೇಕು.

  • ಸ್ಥಳೀಯ ವ್ಯಕ್ತಿಗಳು ಸ್ಥಳೀಯ ಕೇಡರ್‌ ಆಯ್ಕೆ ಮಾಡಿಕೊಂಡ ನಂತರವೂ ಸ್ಥಳೀಯ ಕೇಡರ್‌ನಲ್ಲಿ ಹುದ್ದೆಗಳು ಬಾಕಿ ಉಳಿದರೆ ಅವನ್ನು ರಾಜ್ಯಪಾಲರ ಆದೇಶದಂತೆ ಬ್ಯಾಕ್‌ಲಾಗ್‌ ಹುದ್ದೆಗಳಾಗಿ ಮುಂದುವರಿಕೆ ಮಾಡುವುದು.

ಪ್ರಕರಣದ ಹಿನ್ನೆಲೆ: ರಾಜ್ಯ ಸರ್ಕಾರವು 371ಜೆ ವಿಧಿ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲು ಕಲ್ಪಿಸುವ ಸಂಬಂಧ 2023ರ ಫೆಬ್ರವರಿ 1ರಂದು ಆದೇಶ ಹೊರಡಿಸಿತ್ತು. ಅದರ ಪ್ರಕಾರ, ಕಲ್ಯಾಣ ಕರ್ನಾಟಕದ ಸ್ಥಳೀಯ ಅಭ್ಯರ್ಥಿಗಳನ್ನು ಮೊದಲು ಸ್ಥಳೀಯೇತರ ವೃಂದದ ಹುದ್ದೆಗಳಿಗೆ ಬಡ್ತಿ ಅಥವಾ ನೇರ ನೇಮಕಾತಿ ಮೂಲಕ ಪರಿಗಣಿಸಲಾಗುವುದು. ಆ ಹುದ್ದೆಗಳನ್ನು ಪಡೆಯುವಲ್ಲಿ ಅಭ್ಯರ್ಥಿಗಳು ವಿಫಲವಾದರೆ ಅವರನ್ನು ನಂತರ ಸ್ಥಳೀಯ ವೃಂದದ ಹುದ್ದೆಗಳಿಗೆ ಪರಿಗಣಿಸಲಾಗುವುದು. ಈ ಹೊಸ ಆದೇಶ ಹಿಂದೆ 2020ರ ಜೂನ್‌ 6 ಮತ್ತು 2022ರ ಜೂನ್‌ 15ರಂದು ಹೊರಡಿಸಿದ್ದ ಎರಡೂ ಆದೇಶಗಳಿಗೆ ವ್ಯತಿರಿಕ್ತವಾಗಿತ್ತು. ಆ ಎರಡೂ ಆದೇಶಗಳಲ್ಲಿ ಸ್ಥಳೀಯ ಮತ್ತು ಸ್ಥಳೀಯೇತರ ವೃಂದದ ಹುದ್ದೆಗಳಿಗೆ ಪ್ರತ್ಯೇಕ ನೇಮಕ ಪ್ರಕ್ರಿಯೆ ನಡೆಸುವ ಕುರಿತಾಗಿದ್ದವು.

ಹೀಗಾಗಿ, ಸ್ಥಳೀಯೇತರ ಅಭ್ಯರ್ಥಿಗಳು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಅಭ್ಯರ್ಥಿಗಳು ಈಗಾಗಲೇ ನೇಮಕ ಪ್ರಕ್ರಿಯೆಯಲ್ಲಿ ತಮ್ಮ ಆಯ್ಕೆಯನ್ನು ಸಲ್ಲಿಸಿದ್ದ ನಂತರ ಅದನ್ನು ಮಾರ್ಪಾಡು ಮಾಡುವುದು ನಿಯಮಗಳಿಗೆ ವಿರುದ್ಧವಾದ ಕ್ರಮ. ನೇಮಕಾತಿ ಪ್ರಕ್ರಿಯೆಯ ಮಧ್ಯದಲ್ಲಿ ಈ ರೀತಿಯ ನಿರ್ಧಾರ ಕಾನೂನು ಬಾಹಿರ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಆದರೆ, ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು, 371 ಜೆ ವಿಧಿಯಯ ನಿಜವಾದ ಆಶಯ ಸಾಕಾರವಾಗಬೇಕಾದರೆ ಈ ಕ್ರಮ ಅನಿವಾರ್ಯವಾಗಿದೆ. ಆದೇಶದಲ್ಲಿ ಮೀಸಲು ಅನ್ವಯ ಸಂಬಂಧ ಉಲ್ಲೇಖಿಸಿರುವುದು ಸಂವಿಧಾನದ ಅಶಯಕ್ಕೆ ಅನುಗುಣವಾಗಿದೆ. ಆ ರೀತಿ ಆದೇಶ ಹೊರಡಿಸಿರುವ ಎಲ್ಲ ಅಧಿಕಾರ ರಾಜ್ಯಪಾಲರಿಗೆ ಇದೆ ಎಂದು ಹೇಳಿತ್ತು.

Attachment
PDF
Naveen Kumar H N & others and State of Karnataka.pdf
Preview
Kannada Bar & Bench
kannada.barandbench.com