ಮಾಧ್ಯಮ ವಿಚಾರಣೆಯಿಂದಾಗಿ 'ಚುಟಿಯಾರಾಮ್ʼ ವ್ಯಾಪಾರ ಚಿಹ್ನೆ ನೋಂದಣಿ ಹಿಂಪಡೆಯಲಾಗಿದೆ: ಅರ್ಜಿದಾರರ ಪ್ರತಿಕ್ರಿಯೆ

ಮಾಧ್ಯಮಗಳ ಒತ್ತಡದ ಜೊತೆಗೆ ಹಿಂದಿ ಮತ್ತು ಸ್ಥಳೀಯ ಭಾಷೆಗಳ ವಿರುದ್ಧದ ವ್ಯವಸ್ಥಿತ ಪಕ್ಷಪಾತದ ಪರಿಣಾಮವಾಗಿ ವ್ಯಾಪಾರ ಚಿಹ್ನೆ ನೋಂದಣಿ ಹಿಂಪಡೆಯಲಾಗಿದೆ ಎಂದಿದ್ದಾರೆ ಅರ್ಜಿದಾರರು.
IP India office
IP India office
Published on

ಬಿಸ್ಕೆಟ್‌ ಕಂಪೆನಿಗೆ ʼಚುಟಿಯಾರಾಮ್ʼ (CHUTIYARAM) ವಾಣಿಜ್ಯ ಚಿಹ್ನೆ ನೀಡಬೇಕೆಂಬ ಅರ್ಜಿಯನ್ನು ತಪ್ಪಾಗಿ ಪುರಸ್ಕರಿಸಲಾಗಿತ್ತು. ಅದರ ನೋಂದಣಿ ಹಿಂಪಡೆಯಲಾಗಿದೆ ಎಂಬ ದೆಹಲಿ ವಾಣಿಜ್ಯ ಚಿಹ್ನೆ ಕಚೇರಿ ಹೇಳಿಕೆಯನ್ನು ಆ ನಿರ್ದಿಷ್ಟ ವಾಣಿಜ್ಯ ಚಿಹ್ನೆ ನೋಂದಣಿ ಕೋರಿದ್ದ ಅರ್ಜಿದಾರರು ಪ್ರಶ್ನಿಸಿದ್ದಾರೆ.

ಮಾಧ್ಯಮಗಳ ಒತ್ತಡದ ಜೊತೆಗೆ ಹಿಂದಿ ಮತ್ತು ಸ್ಥಳೀಯ ಭಾಷೆಗಳ ವಿರುದ್ಧದ ವ್ಯವಸ್ಥಿತ ಪಕ್ಷಪಾತದ ಪರಿಣಾಮವಾಗಿ ವ್ಯಾಪಾರ ಚಿಹ್ನೆ ನೋಂದಣಿ ಹಿಂಪಡೆಯಲಾಗಿದೆ ಎಂದು ರಿಜಿಸ್ಟ್ರಿಗೆ ನೀಡಿರುವ ಲಿಖಿತ ಪ್ರತಿಕ್ರಿಯೆಯಲ್ಲಿ ಅರ್ಜಿದಾರೆ ಸಾಧನಾ ಗೋಸ್ವಾಮಿ ಆರೋಪಿಸಿದ್ದಾರೆ.

ಅನುಮೋದಿತವಾಗಿದ್ದ ವಾಣಿಜ್ಯ ಚಿಹ್ನೆಯ ವಿರುದ್ಧ ʼಬಾರ್‌ ಅಂಡ್‌ ಬೆಂಚ್‌ʼ ಕಾನೂನು ಸುದ್ದಿ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳು ಅಜಾಗರೂಕ ಮಾಧ್ಯಮ ವಿಚಾರಣೆಯಲ್ಲಿ ತೊಡಗಿದವು ಎಂದು ಆರೋಪಿಸಿರುವ ಅವರು ಮಾಧ್ಯಮಗಳ ಈ ಒತ್ತಡದಿಂದಾಗಿಯೇ ದೋಷವನ್ನು ಉಲ್ಲೇಖಿಸಿ ವಾಣಿಜ್ಯ ಚಿಹ್ನೆಯನ್ನು ರಿಜಿಸ್ಟ್ರಿ ಹಿಂಪಡೆದಿದೆ ಎಂದಿದ್ದಾರೆ.

ರಿಜಿಸ್ಟ್ರಿ ಸೂಕ್ತ ರೀತಿಯಲ್ಲಿ ವಾಣಿಜ್ಯ ಚಿಹ್ನೆಗೆ ಸಮ್ಮತಿ ಸೂಚಿಸಿದ್ದರೂ ಮಾಧ್ಯಮಗಳು ತಪ್ಪಾಗಿ ಚಿಹ್ನೆಯ ಕುರಿತು ರೋಚಕ ಸುದ್ದಿ ಪ್ರಕಟಿಸಿದವು. ಚಿಹ್ನೆಯನ್ನು ಗುರಿಯಾಗಿಸಿ ಮತ್ತು ನ್ಯಾಯಸಮ್ಮತವಲ್ಲದ ಅಭಿಯಾನಕ್ಕೆ ವಿವಿಧ ಮಾಧ್ಯಮಗಳು ಮುಂದಾದವು ಎಂದು ಅವರು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಅರ್ಜಿದಾರರ ಪರ ವಕೀಲ ಅನಿಲ್ ಯಾದವ್ ಅವರು ಲಿಂಕ್ಡ್ಇನ್ ನಲ್ಲಿ ಅರ್ಜಿದಾರರ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ .

ಚುಟಿಯಾರಾಂ ಎಂಬ ಪದ ಚುಟಿಯಾ (ಹಿಂದೂ ಧರ್ಮದಲ್ಲಿ ಪವಿತ್ರವಾದ ಕೂದಲಿನ ಗೊಂಚಲು, ಶಿಖೆ, ಜಟೆ ಎಂಬರ್ಥ ಸೂಸುತ್ತದೆ) ಮತ್ತು ರಾಮ್‌ (ಹಿಂದೂ ಸಂಪ್ರದಾಯದ ದೇವತೆಯಾದ ರಾಮ) ಎಂಬ ಎರಡು ಪದಗಳ ಸಂಯೋಜನೆಯಾಗಿದೆ. ಆದ್ದರಿಂದ ಈ ಚಿಹ್ನೆ ಅಶ್ಲೀಲ ಅರ್ಥ ನೀಡುವುದಕ್ಕಿಂತಲೂ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂಕೇತಿಸುತ್ತದೆ. ಚುಟಿಯಾರಾಮ್‌ ಎಂದರೆ ಜಟಾಧಾರಿ/ಶಿಖಾಧಾರಿ ರಾಮ ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

ನಿರ್ದಿಷ್ಟ ಕಾಯಿದೆಗಳನ್ನು ಉಲ್ಲೇಖಿಸದೆ ನೋಂದಣಿ ಹಿಂಪಡೆದಿರುವುದು ಟ್ರೇಡ್‌ಮಾರ್ಕ್ ಅರ್ಜಿ ಪ್ರಕ್ರಿಯೆಯ ಕಾನೂನು ಪಾವಿತ್ರ್ಯವನ್ನು ಹಾಳು ಮಾಡಿದೆ. ಅಲ್ಲದೆ "BOOB," "LAUDA," ಮತ್ತು "PUSSY IN BOOTS" ನಂತಹ ಸಂಭಾವ್ಯ ಆಕ್ರಮಣಕಾರಿ ಅರ್ಥ ಹೊಂದಿರುವ ವಾಣಿಜ್ಯ ಚಿಹ್ನೆಗಳನ್ನು ರಿಜಿಸ್ಟ್ರಿ ಈಗಾಗಲೇ ಅನುಮೋದಿಸಿದೆ ಎಂದು ತಿಳಿಸಲಾಗಿದೆ.  

ಹೀಗಾಗಿ, “ಚುಟಿಯಾರಾಮ್” ಪದವನ್ನು ಅಸಮಂಜಸವಾಗಿ ಪರಿಗಣಿಸುವುದು ಸಂವಿಧಾನದ 14 ನೇ ವಿಧಿಯ ಅಡಿಯ ಸಮಾನತೆಯ ತತ್ವವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅದು ವಾದಿಸಿದೆ.

ಚುಟಿಯರಾಮ್ ವಾಣಿಜ್ಯ ಚಿಹ್ನೆಗೆ ಮರಳಿ ಅನುಮೋದನೆ ನೀಡಬೇಕು. ಮಧ್ಯಮದ ಒತ್ತಡದಿಂದಾಗಿ ಹಿಂಪಡೆಯಲಾಗಿದೆಯೇ ವಿನಾ ಕಾಯಿದೆ ಆಧರಿಸಿಯಲ್ಲ ಎಂಬುದನ್ನು ರಿಜಿಸ್ಟ್ರಿ ಗುರುತಿಸಬೇಕು. ವಾಣಿಜ್ಯ ಚಿಹ್ನೆ ಕಾಯಿದೆಯ ಪಾವಿತ್ರ್ಯ ಎತ್ತಿಹಿಡಿದು ಭವಿಷ್ಯದಲ್ಲಿ ಕೈಗೊಳ್ಳುವ ನಿರ್ಧಾರಗಳು ಹಸ್ತಕ್ಷೇಪದಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ವಾಣಿಜ್ಯ ಚಿಹ್ನೆ ನೋಂದಣಿ ಪ್ರಕ್ರಿಯೆಯಲ್ಲಿ ಹಿಂದಿ ಮತ್ತು ಸ್ಥಳೀಯ ಭಾಷೆಗಳ ವಿರುದ್ಧದ ವ್ಯವಸ್ಥಿತ ಪಕ್ಷಪಾತವನ್ನು ಹೋಗಲಾಡಿಸಬೇಕು ಎಂದು ಪ್ರತಿಕ್ರಿಯೆ ಕೋರಿದೆ.

ಹಿನ್ನೆಲೆ

ಮಾರ್ಚ್ 4ರಂದು ಹಿರಿಯ  ವಾಣಿಜ್ಯ ಚಿಹ್ನೆ ಪರೀಕ್ಷಕ ಬಾಲಾಜಿ ಅವರು ಹೊರಡಿಸಿದ ಆದೇಶದಲ್ಲಿ ಚುಟಿಯಾರಾಮ್ ಎಂಬುದು ಚುಟಿ ಮತ್ತು ರಾಮ್ ಎಂಬ ಎರಡು ಮುಕ್ತ ಪದಗಳ ಸಂಯೋಜನೆಯಾಗಿದೆ. ಒಟ್ಟಾರೆಯಾಗಿ ಇಡೀ ಪದಗುಚ್ಛ ವಿಭಿನ್ನವಾಗಿದ್ದು ಅದನ್ನು ಇತರೆ ವಾಣಿಜ್ಯ ಚಿಹ್ನೆಗಳಿಂದ ಪ್ರತ್ಯೇಕವಾಗಿ ಗುರುತಿಸಬಹುದು. ಅಲ್ಲದೆ ಈ ಗುರುತು ಆನ್ವಯಿಕ ಸರಕುಗಳಾದ ಉಪ್ಪಿನ ಅಂಶದ ಖಾದ್ಯಗಳು ಮತ್ತು ಬಿಸ್ಕೆಟ್ಗಳಿಗೆ ನೇರವಾಗಿ ಸಂಬಂಧಿಸಿಲ್ಲದೆ ಇರುವುದರಿಂದ 9 ನೇ ಸೆಕ್ಷನ್ನಡಿ ಎತ್ತಲಾಗಿದ್ದ ಆಕ್ಷೇಪವನ್ನು ಮನ್ನಿಸಿ ಚಿಹ್ನೆಯನ್ನು ಪುರಸ್ಕರಿಸಲಾಗಿದೆ ಎಂದು ತಿಳಿಸಿತ್ತು.

ಆದರೆ ಅಶ್ಲೀಲ ಅಥವಾ ಸಾರ್ವಜನಿಕ ನೈತಿಕತೆಗೆ ವಿರುದ್ಧವಾದ ಇಲ್ಲವೇ ಧಾರ್ಮಿಕ ಭಾವನೆ ಕೆರಳಿಸುವಂತಹ ವಾಣಿಜ್ಯ ಚಿಹ್ನೆಗಳ ನೋಂದಣಿಯನ್ನು ನಿಷೇಧಿಸುವ ವಾಣಿಜ್ಯ ಚಿಹ್ನೆ ಕಾಯಿದೆಯ ಸೆಕ್ಷನ್ 9(2)(c) ಅಡಿ ಈ ಬ್ರ್ಯಾಂಡ್ ಯಾಕೆ ಪರಿಶೀಲನೆಗೆ ಒಳಪಡಲಿಲ್ಲ ಎಂಬ ಬಗ್ಗೆ ಬೌದ್ಧಿಕ ಆಸ್ತಿ ಕಾನೂನು ವೃತ್ತಿಪರರಲ್ಲಿ ಕಳವಳ ಮೂಡಿತ್ತು.

[ಅರ್ಜಿದಾರರ ಪ್ರತಿಕ್ರಿಯೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
CHUTIYARAM_response
Preview
Kannada Bar & Bench
kannada.barandbench.com