ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿರುವ ಅರ್ಜಿಗಳನ್ನು ಅಧಿಕಾರಿಗಳು ಶೀಘ್ರವಾಗಿ ಪರಿಗಣಿಸಿ ತೀರ್ಮಾನಕ್ಕೆ ಬರಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದ್ದು ಈ ಪ್ರಕ್ರಿಯೆ ಅರ್ಜಿ ಸಲ್ಲಿಸಿದ ದಿನದದಿಂದ ಆರು ತಿಂಗಳ ಅವಧಿ ಮೀರಬಾರದು ಎಂದು ಹೇಳಿದೆ [ಮಲಯ ನಂದಾ ಸೇಥಿ ಮತ್ತು ಒಡಿಶಾ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಇಂತಹ ನೇಮಕಾತಿಗಳ ಉದ್ದೇಶ ಮೃತ ಉದ್ಯೋಗಿಯ ಕುಟುಂಬಕ್ಕೆ ಆರ್ಥಿಕ ಬೆಂಬಲ ಒದಗಿಸುವುದಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
“ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವುದರ ಧ್ಯೇಯೋದ್ದೇಶ ಪರಿಗಣಿಸಿ, ಅಂದರೆ ಸೇವೆಯಲ್ಲಿದ್ದ ನೌಕರನ ಅಕಾಲಿಕ ಮರಣ ಆತನ ಕುಟುಂಬವನ್ನು ಆರ್ಥಿಕ ಸಂಕಷ್ಟದ ಸ್ಥಿತಿಗೆ ತಂದಿರಬಹುದಾಗಿದ್ದು, ತಕ್ಷಣವೇ ಆ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸುವುದು (ಇಂತಹ ನೇಮಕಾತಿಯ ಹಿಂದಿನ) ನೀತಿ ಅಥವಾ ಬುನಾದಿಯಾಗಿದೆ. ಅಸ್ತಿತ್ವದಲ್ಲಿರುವ ನೀತಿಯ ಪ್ರಕಾರ ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿರುವ ಇಂತಹ ಅರ್ಜಿಗಳನ್ನು ಆದಷ್ಟು ತ್ವರಿತವಾಗಿ, ಆದರೆ ಅರ್ಜಿ ಸಲ್ಲಿಕೆಯಾದ ದಿನದಿಂದ ಆರು ತಿಂಗಳು ಮೀರದಂತೆ ಅಧಿಕಾರಿಗಳು ಪರಿಗಣಿಸಿ ತೀರ್ಮಾನಕ್ಕೆ ಬರಬೇಕು” ಎಂದು ನ್ಯಾಯಾಲಯ ಹೇಳಿದೆ.
ಅನುಕಂಪದ ಆಧಾರದ ಮೇಲೆ ತಮ್ಮನ್ನು ನೇಮಿಸುವಂತೆ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಲು ನಿರಾಕರಿಸಿದ ಒಡಿಶಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಐದು ವರ್ಷಗಳಾದರೂ ರಾಜ್ಯದ ಕಂದಾಯ ಇಲಾಖೆ ಅನುಕಂಪ ಆಧಾರದಲ್ಲಿ ನೇಮಕ ಮಾಡಿಕೊಂಡಿರಲಿಲ್ಲ. ಮೇಲ್ಮನವಿದಾರರ ಕುಟುಂಬದ ವಾರ್ಷಿಕ ವರಮಾನ ₹72,000 ಮೀರುವುದಿಲ್ಲ ಎಂದು ಅಧಿಕಾರಿಗಳು ಒಂದೆಡೆ ವರದಿ ಸಲ್ಲಿಸಿದರೂ ನೇಮಕಾತಿ ಪ್ರಕ್ರಿಯೆ ಬಾಕಿ ಉಳಿದಿತ್ತು. ಜೊತೆಗೆ 2020ರಲ್ಲಿ ರೂಪಿಸಲಾದ ಹೊಸ ನೇಮಕಾತಿ ನಿಯಮಾವಳಿಗಳನ್ನು ಇದಕ್ಕೆ ಅನ್ವಯಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಮೇಲ್ಮನವಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. 1990ರ ನಿಯಮಾವಳಿಯಂತೆಯೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು. ಆದರೆ ಹೈಕೋರ್ಟ್ ತಿದ್ದುಪಡಿಯಾದ ನಿಯಮಾವಳಿಗಳಂತೆಯೇ ಪರಿಹಾರ ಕೋರಬೇಕು ಎಂದು ಆದೇಶಿಸಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋದರು.
ಮೇಲ್ಮನವಿದಾರರ ಕಡೆಯಿಂದ ಯಾವುದೇ ತಪ್ಪು ಅಥವಾ ವಿಳಂಬ ಸಂಭವಿಸದೇ ಇರುವಾಗ ಅವರನ್ನು ತೊಂದರೆಗೊಳಪಡಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ “ಅನುಕಂಪ ಆಧಾರದ ನೇಮಕಾತಿಯ ಧ್ಯೇಯೋದ್ದೇಶ ಸಾಕಾರಗೊಳ್ಳಬೇಕಾದರೆ ಅಂತಹ ಅರ್ಜಿಗಳನ್ನು ಸಮಯಕ್ಕೆ ಸರಿಯಾಗಿ ಪರಿಗಣಿಸುವುದು ಅವಶ್ಯಕವೇ ವಿನಾ ವಿಳಂಬ ರೀತಿಯಲ್ಲಿ ಅಲ್ಲ” ಎಂದಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: