
ಕರ್ನಾಟಕ ಹೈಕೋರ್ಟ್‌ನ ಪೂರ್ಣ ನ್ಯಾಯಾಲಯದ ಅಧಿಕೃತ ಕಾರ್ಯಕ್ರಮಗಳಲ್ಲಿ ಸ್ವಾಗತ ಭಾಷಣ ಮಾಡಲು ಇಂಗ್ಲಿಷ್ ಜ್ಞಾನ ಇರುವ ಸದಸ್ಯರನ್ನು ತಕ್ಷಣ ನೇಮಕ ಮಾಡಬೇಕು ಎಂದು ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಬೆಂಗಳೂರು ವಕೀಲರ ಸಂಘ (ಎಎಬಿ) ಮನವಿ ಮಾಡಿದೆ.
ಪೂರ್ಣ ನ್ಯಾಯಾಲಯದ ಅಧಿಕೃತ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳ ಹೆಸರು ಮತ್ತು ಇಂಗ್ಲಿಷ್ ಶಬ್ದಗಳನ್ನು ತಪ್ಪಾಗಿ ಉಚ್ಚರಿಸುವ ಮೂಲಕ ಕರ್ನಾಟಕದ ಘನತೆಗೆ ಚ್ಯುತಿ ಉಂಟು ಮಾಡುವುದಲ್ಲದೇ ಮುಜುಗರಕ್ಕೆ ಕಾರಣರಾಗಿರುವ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ್ ಅವರಿಗೆ ಕನ್ನಡದಲ್ಲಿ ಭಾಷಣ ಓದಲು ಮತ್ತು ಅದನ್ನು ಇಂಗ್ಲಿಷ್‌ಗೆ ಅನುವಾದಿಸಲು ಭಾಷಾಂತರಕಾರರನ್ನು ನೇಮಿಸಿಕೊಳ್ಳಲು ನಿರ್ದೇಶಿಸಬೇಕು ಎಂದು ಬಿಸಿಐಗೆ ಎಎಬಿ ಕೋರಿದೆ.
ಕರ್ನಾಟಕ ಹೈಕೋರ್ಟ್‌ನ ಕೋರ್ಟ್ ಹಾಲ್ 1ರಲ್ಲಿ ಈಚೆಗೆ ನೂತನ ಮುಖ್ಯ ನ್ಯಾಯಮೂರ್ತಿ ಮತ್ತು ಇತರೆ ನ್ಯಾಯಮೂರ್ತಿಗಳಿಗೆ ಆಯೋಜಿಸಿದ್ದ ಅಧಿಕೃತ ಸ್ವಾಗತ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳ ಹೆಸರು ಮತ್ತು ಇಂಗ್ಲಿಷ್ ಪದಗಳನ್ನು ತಪ್ಪಾಗಿ ಉಚ್ಚರಿಸುವ ಮೂಲಕ ಮಿಟ್ಟಲಕೋಡ್ ಅವರು ಕರ್ನಾಟಕದ ಘನತೆ ಕುಂದಿಸಿರುವುದರಿಂದ ಇಂಥ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲು ಪರ್ಯಾಯವಾಗಿ ಬೇರೊಬ್ಬರನ್ನು ನೇಮಕ ಮಾಡಬೇಕು ಎಂದು ಎಎಬಿ ಕೋರಿದೆ.
ಮಿಟ್ಟಲಕೋಡ್ ಅವರು ಹೆಸರುಗಳನ್ನು ತಪ್ಪಾಗಿ ಉಚ್ಚರಿಸುವುದಲ್ಲದೇ ಪೂರ್ಣ ನ್ಯಾಯಾಲಯದಲ್ಲಿನ ಭಾಷಣದಲ್ಲೂ ಪದಗಳನ್ನು ತಪ್ಪಾಗಿ ಉಚ್ಚಾರಣೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಕೀಲರು ಮತ್ತು ಅವರ ಕುಟುಂಬದವರು ಹಾಗೂ ಗಣ್ಯರಿಗೆ ಮುಜುಗರವಾಗಿದ್ದು, ಮಿಟ್ಟಲಕೋಡ್ ಅವರ ಇಂಗ್ಲಿಷ್ ಭಾಷಣಕ್ಕೆ ಗಂಭೀರ ಆಕ್ಷೇಪ ವ್ಯಕ್ತವಾಗಿದೆ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತು ಇತರ ಪದಾಧಿಕಾರಿಗಳ ಸಹಿ ಇರುವ ಪತ್ರದಲ್ಲಿ ವಿವರಿಸಲಾಗಿದೆ.
ಬೆಂಗಳೂರು ವಕೀಲರ ಸಂಘಕ್ಕೆ ಕಲ್ಯಾಣ ಸಂಘಕ್ಕೆ ಕಲ್ಯಾಣ ಸ್ಟ್ಯಾಂಪ್ ನೀಡುವುದನ್ನು ನಿಲ್ಲಿಸುವ ನಿಲುವು ಕೈಗೊಂಡಿರುವ ಮಿಟ್ಟಲಕೋಡ್ ಅವರನ್ನು ಪದಚ್ಯುತಗೊಳಿಸುವಂತೆ ಎಎಬಿ ನಿರ್ಣಯ ಕೈಗೊಂಡಿದೆ. ಈ ಸಂಬಂಧ ಮಿಟ್ಟಲಕೋಡ್ ಅವರನ್ನು ಪದಚ್ಯುತಗೊಳಿಸುವವರೆಗೆ ಕೋರ್ಟ್ ಹಾಲ್ 1ರಲ್ಲಿ ಆಗುವ ಮುಜುಗರದಿಂದ ಕರ್ನಾಟಕವನ್ನು ಬಚಾವು ಮಾಡಬೇಕು. ವಕೀಲರ ಪರಿಷತ್‌ನ ಬೇರೊಬ್ಬ ಸದಸ್ಯರನ್ನು ಭಾಷಣ ಓದಲು ನೇಮಕ ಮಾಡಬೇಕು ಅಥವಾ ಮಿಟ್ಟಲಕೋಡ್ ಅವರಿಗೆ ಕನ್ನಡದಲ್ಲಿ ಭಾಷಣ ಓದಲು ಮತ್ತು ಅದನ್ನು ಇಂಗ್ಲಿಷ್‌ಗೆ ಅನುವಾದಿಸಲು ಅನುವಾದಕರನ್ನು ನೇಮಿಸಿಕೊಳ್ಳಲು ನಿರ್ದೇಶಿಸಬೇಕು ಎಂದು ಬಿಸಿಐಗೆ ಕೋರಲಾಗಿದೆ.
ಪೂರ್ಣ ನ್ಯಾಯಾಲಯದಲ್ಲಿ ಇಂಥ ಭಾಷಣದ ಮೂಲಕ ಮಿಟ್ಟಲಕೋಡ್ ಅವರು ಕರ್ನಾಟಕದ ಘನತೆ ಮತ್ತು ವರ್ಚಸ್ಸನ್ನು ಕುಂದಿಸುತ್ತಿರುವುದು ದುಃಖದ ವಿಚಾರವಾಗಿದೆ. ಬಿಸಿಐ ಪರ್ಯಾಯ ಕ್ರಮಕ್ಕೆ ಮುಂದಾಗದಿದ್ದರೆ ಅಂಥ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಅವರನ್ನು ನೇಮಕ ಮಾಡಲು ಮುಖ್ಯ ನ್ಯಾಯಮೂರ್ತಿಯವರನ್ನು ಕೋರಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಬೆಂಗಳೂರು ವಕೀಲರ ಸಂಘಕ್ಕೆ ಕಲ್ಯಾಣ ಸಂಘಕ್ಕೆ ಕಲ್ಯಾಣ ಸ್ಟ್ಯಾಂಪ್ ನೀಡುವುದನ್ನು ನಿಲ್ಲಿಸುವ ನಿಲುವು ಕೈಗೊಂಡಿರುವ ಮಿಟ್ಟಲಕೋಡ್ ಅವರ ಪದಚ್ಯುತಿಗೆ ಆಗ್ರಹಿಸಿರುವ ನಿರ್ಣಯವನ್ನೂ ಪತ್ರದೊಂದಿಗೆ ಲಗತ್ತಿಸಿ ಬಿಸಿಐ ಕಳುಹಿಸಲಾಗಿದೆ ಎಂದು ಎಎಬಿ ತಿಳಿಸಿದೆ.
ನಕಲಿ ವಕೀಲರ ಜಾಲದ ವಿರುದ್ಧ ವಿವಿಧ ರೀತಿಯಲ್ಲಿ ಕ್ರಮಕ್ಕೆ ಮುಂದಾಗಿರುವುದರಿಂದ ತಮ್ಮ ಮತ ಬ್ಯಾಂಕ್ ರಕ್ಷಿಸಿಕೊಳ್ಳಲು ಮಿಟ್ಟಲಕೋಡ್ ಅವರ ವಿರುದ್ಧ ವಿನಾಕಾರಣ ಆರೋಪ ಮಾಡಲಾಗುತ್ತಿದೆಯೇ ಎಂಬ ʼಬಾರ್ ಅಂಡ್ ಬೆಂಚ್ʼ ಪ್ರಶ್ನೆಗೆ ವಿವೇಕ್ ಸುಬ್ಬಾರೆಡ್ಡಿ ಅವರು “ಇದು ಸಂಪೂರ್ಣ ತಪ್ಪು ಕಲ್ಪನೆ. ನಕಲಿ ವಕೀಲರ ವಿರುದ್ಧ ಕ್ರಮಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಪೂರ್ಣ ನ್ಯಾಯಾಲಯದ ಘನತೆಗೆ ಚ್ಯುತಿಯಾಗುವಂತಹ ಲೋಪಗಳನ್ನು ಸಹಿಸಲಾಗದು. ವೃತ್ತಿಪರತೆ ಮತ್ತು ಗುಣಾತ್ಮಕತೆಗಷ್ಟೇ ನಮ್ಮ ವಿಚಾರ ಸೀಮಿತವಾಗಿದೆ” ಎಂದಿದ್ದಾರೆ.