

ಸರ್ಕಾರಿ ಕಂಪನಿ ಅಥವಾ ಸಾರ್ವಜನಿಕ ವಲಯದ ಉದ್ಯಮಕ್ಕೆ ರಾಜಕಾರಣಿಯನ್ನು ಅಧ್ಯಕ್ಷರನ್ನಾಗಿ ನೇಮಿಸುವ ನಿರ್ಧಾರವು ಕಂಪನಿಯ ಕಾರ್ಮಿಕರ ದುಃಖವನ್ನು ಹೆಚ್ಚಿಸುವುದಲ್ಲದೆ ಸಾರ್ವಜನಿಕ ಹಿತಾಸಕ್ತಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ. ಅಲ್ಲದೆ, 2008ರಿಂದ 2012ರವರೆಗೆ ಮೈಶುಗರ್ ಕಂಪನಿಯ ಅಧ್ಯಕ್ಷರಾಗಿದ್ದ ನಾಗರಾಜಪ್ಪ ಅವಧಿಯಲ್ಲಿ127 ಕೋಟಿ ನಷ್ಟದ ಬಗ್ಗೆ ಉಪ ಲೋಕಾಯುಕ್ತ ತನಿಖೆಗೆ ಆದೇಶ ನೀಡಿರುವನ್ನು ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.
ಮೈಸೂರು ಸಕ್ಕರೆ ಕಾರ್ಖಾನೆ ಲಿಮಿಟೆಡ್ (ಮೈಶುಗರ್ ಕಂಪನಿ) ಅಧ್ಯಕ್ಷರಾಗಿದ್ದಾಗ ನಡೆದ ಆರ್ಥಿಕ ಅಕ್ರಮಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರವು ತನ್ನ ವಿರುದ್ಧದ ತನಿಖೆಯನ್ನು ಉಪ ಲೋಕಾಯುಕ್ತಕ್ಕೆ ವಹಿಸಿದ್ದನ್ನು ಪ್ರಶ್ನಿಸಿ ಮಂಡ್ಯದ ನಾಗರಾಜಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಟಿ ವೆಂಕಟೇಶ್ ನಾಯಕ್ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ಪೀಠವು “ಸರ್ಕಾರಿ ಕಂಪನಿ ಅಥವಾ ಸಾರ್ವಜನಿಕ ವಲಯದ ಉದ್ಯಮದ ಅಧ್ಯಕ್ಷ ಹುದ್ದೆಗೆ ಉತ್ತಮ ಜ್ಞಾನವುಳ್ಳ ಮತ್ತು ವೃತ್ತಿಪರ ಶ್ರೇಷ್ಠತೆ ಹೊಂದಿರುವ ಅರ್ಹ ವ್ಯಕ್ತಿಗಳನ್ನು ಮಾತ್ರ ಸರ್ಕಾರ ನೇಮಿಸಬೇಕು. ಯಾವುದೇ ವೃತ್ತಿಪರ ಅರ್ಹತೆ ಮತ್ತು ವಿಷಯ ಜ್ಞಾನವಿಲ್ಲದ ಅರ್ಜಿದಾರರನ್ನು ರಾಜಕೀಯ ಕಾರಣಗಳಿಗಾಗಿ ಏಷ್ಯಾದ ಅತಿದೊಡ್ಡ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾದ ಸಂಸ್ಥೆಗೆ ಅಧ್ಯಕ್ಷರನ್ನಾಗಿ ನೇಮಿಸುವ ಸರ್ಕಾರ ಕೆಟ್ಟ ನಿರ್ಧಾರ ಕೈಗೊಂಡಿದ್ದು, ಇದು ಅವರ ಅಧಿಕಾರಾವಧಿಯಲ್ಲಿ 127 ಕೋಟಿ ರೂಪಾಯಿ ನಷ್ಟಕ್ಕೆ ಕಾರಣವಾಗಿದೆ” ಎಂದಿದೆ.
“ಮೈಶುಗರ್ ಅಧ್ಯಕ್ಷರಾಗಿ ಅರ್ಜಿದಾರರು ಕೈಗೊಂಡಿರುವ ಕ್ರಮಗಳು, ನಡಾವಳಿಕೆಗಳನ್ನು ಲೋಕಾಯುಕ್ತ ತನಿಖೆಗೆ ವಹಿಸುವ ಎಲ್ಲಾ ಸಂವಿಧಾನದತ್ತ ಅಧಿಕಾರ ಸರ್ಕಾರಕ್ಕೆ ಇದೆ” ಎಂದು ನ್ಯಾಯಾಲಯ ಹೇಳಿದೆ.
“ಅಕ್ರಮದ ಸಂಬಂಧ ಈಗಾಗಲೇ ಉಪ ಲೋಕಾಯುಕ್ತರು ನೀಡಿರುವ ವರದಿಯಲ್ಲಿ ಯಾವುದೇ ದೋಷವು ಕಂಡಿಲ್ಲ. ಮೈಶುಗರ್ ಅಧ್ಯಕ್ಷರಾಗಿ ಅರ್ಜಿದಾರರು ತೆಗೆದುಕೊಂಡ ನಿರ್ಧಾರಗಳಿಂದ ಉಂಟಾದ ನಷ್ಟವನ್ನು ವಾಪಸ್ ಸರಿದೂಗಿಸಿಕೊಳ್ಳಲು ಅಥವಾ ವಸೂಲಿ ಮಾಡಲು ಸೂಕ್ತ ಕ್ರಮ ಕೈಗೊಳ್ಳುವ ಶಿಫಾರಸುಗಳನ್ನು ಸರ್ಕಾರದ ವಿವೇಚನೆಗೆ ಬಿಡಲಾಗಿದೆ ಮತ್ತು ಸರ್ಕಾರವು ವರದಿಯಲ್ಲಿನ ಶಿಫಾರಸ್ಸುಗಳನ್ನು ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ನ್ಯಾಯಾಲಯ ಆದೇಶಿಸಿತು.
ನಾಗರಾಜಪ್ಪ ಅವರು ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರ ಮತ್ತು ಕೃಷಿಕ ಎಂದು ಹೇಳಿಕೊಂಡಿದ್ದಾರೆ. ಎಲ್ಲಿಯೂ ಅಂತಹ ದೊಡ್ಡ ಸಕ್ಕರೆ ಕಂಪನಿಯನ್ನು ನಡೆಸಲು ಯಾವುದೇ ಅಗತ್ಯ ಅನುಭವ ಅಥವಾ ಅರ್ಹತೆ ಅಥವಾ ಯಾವುದೇ ಕಂಪನಿ ನಡೆಸಿದ ನಿರ್ವಹಣಾ ಅನುಭವವನ್ನು ಅವರು ಹೊಂದಿಲ್ಲ. ಆದರೂ ರಾಜ್ಯ ಸರ್ಕಾರವು ಅವರನ್ನು 2008ರ ಅಕ್ಟೋಬರ್ 1ರಂದು ರಾಜ್ಯ ಸಚಿವರ ಸ್ಥಾನಮಾನದೊಂದಿಗೆ ಮೈಶುಗರ್ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆನಂತರ ಅವರನ್ನು 2012ರ ಡಿಸೆಂಬರ್‌ನಲ್ಲಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಯಿತು.
ಆಗ ಶಾಸಕರಾಗಿದ್ದ ಎಂ ಶ್ರೀನಿವಾಸ್ 2012ರಲ್ಲಿ ನಾಗರಾಜಪ್ಪ ವಿರುದ್ಧ ಅಂದಿನ ಮುಖ್ಯಮಂತ್ರಿಗೆ ದೂರು ಸಲ್ಲಿಸಿದರು, ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅಕ್ರಮ, ದುರ್ನಡತೆ ಮತ್ತು ದುಷ್ಕತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ಅವಧಿಯಲ್ಲಿ ಮೈಶುಗರ್‌ಗೆ ನೂರಾರು ಕೋಟಿ ರೂಪಾಯಿ ನಷ್ಟವನ್ನುಂಟು ಮಾಡಿದೆ ಎಂದು ಆರೋಪಿಸಿದ್ದರು. ರಾಜ್ಯ ಸರ್ಕಾರವು 2014ರಲ್ಲಿ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತರಿಗೆ ಆದೇಶ ನೀಡಿತ್ತು. ಉಪಲೋಕಾಯುಕ್ತರು ನಾಗರಾಜಪ್ಪ ವಿರುದ್ಧದ ಎಲ್ಲಾ ದಾಖಲೆಗಳು ಹಾಗೂ ವಿವರಗಳನ್ನು ಸಂಗ್ರಹಿಸಿ ತನಿಖೆ ನಡೆಸಿ ಸಮಗ್ರವಾದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ನಾಗರಾಜಪ್ಪ ಹೈಕೋರ್ಟ್ ಮೊರೆ ಹೋಗಿದ್ದರು.