ವಕೀಲಿಕೆ ಮಾನದಂಡ ಪೂರೈಸದೆ ಇದ್ದರೂ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ: ರಿಜಿಸ್ಟ್ರಾರ್‌ಗೆ ಹೈಕೋರ್ಟ್‌ ನೋಟಿಸ್‌

“ಅರ್ಜಿದಾರರು ಎತ್ತಿರುವ ವಿಚಾರವನ್ನು ಪರಿಗಣಿಸಲಾಗಿದೆಯೇ ಎಂಬುದನ್ನು ನೋಡುವ ಇಚ್ಛೆ ಇದೆ” ಎಂದು ನ್ಯಾಯಾಲಯವು ಹೇಳಿದ್ದು, ಅರ್ಜಿಯ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿದೆ.
ವಕೀಲಿಕೆ ಮಾನದಂಡ ಪೂರೈಸದೆ ಇದ್ದರೂ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ: ರಿಜಿಸ್ಟ್ರಾರ್‌ಗೆ ಹೈಕೋರ್ಟ್‌ ನೋಟಿಸ್‌
Published on

ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾಗಲು ಅಗತ್ಯವಾದ ನಿರಂತರವಾಗಿ ಏಳು ವರ್ಷ ವಕೀಲರಾಗಿ ಕರ್ತವ್ಯ ನಿರ್ವಹಿಸಿರಬೇಕು ಎನ್ನುವ ಮಾನದಂಡವನ್ನು ಪೂರೈಸದೆ ಇದ್ದರೂ ಗೀತಾ ಶಿಂಧೆ ಅವರನ್ನು ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಿಜಿಸ್ಟ್ರಾರ್‌ ಜನರಲ್‌ಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

ವಕೀಲೆ ಚೇತನಾ ಪಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

“ಅರ್ಜಿದಾರರು ಎತ್ತಿರುವ ವಿಚಾರವನ್ನು ಪರಿಗಣಿಸಲಾಗಿದೆಯೇ ಎಂಬುದನ್ನು ನೋಡುವ ಇಚ್ಛೆ ಇದೆ” ಎಂದು ನ್ಯಾಯಾಲಯವು ಹೇಳಿದ್ದು, ಅರ್ಜಿಯ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿದೆ.

ನ್ಯಾ. ಗೀತಾ ಶಿಂಧೆ ಅವರ ನೇಮಕಾತಿ ಆದೇಶಕ್ಕೆ ತಡೆ ನೀಡಬೇಕು. ಜೊತೆಗೆ ಅರ್ಜಿ ಇತ್ಯರ್ಥವಾಗುವವರೆಗೆ ನ್ಯಾಯಾಧೀಶೆ ಗೀತಾ ಅವರಿಗೆ ಯಾವುದೇ ನ್ಯಾಯಾಂಗ ಕೆಲಸಗಳನ್ನು ಹಂಚಿಕೆ ಮಾಡಬಾರದು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾಗಲು ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಕ್ಕೆ ಅನುಗುಣವಾಗಿ ಏಳು ವರ್ಷ ಸತತವಾಗಿ ವಕೀಲರಾಗಿ ಪ್ರಾಕ್ಟೀಸ್‌ ಮಾಡಿರಬೇಕು ಎಂಬ ಮಾನದಂಡವನ್ನು ನ್ಯಾ. ಗೀತಾ ಅವರು ಪೂರೈಸಿಲ್ಲವಾದ್ದರಿಂದ ಅವರು ಜಿಲ್ಲಾ ನ್ಯಾಯಾಧೀಶೆಯ ಹುದ್ದೆಗೆ ಅರ್ಹರಾಗಿಲ್ಲ. ಸತ್ಯವನ್ನು ಮರೆಮಾಚುವ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಮತ್ತೊಬ್ಬ ಅಭ್ಯರ್ಥಿಯ ಅವಕಾಶವನ್ನು ಅವರು ಕಸಿದುಕೊಂಡಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ನ್ಯಾ. ಶಿಂಧೆ ಅವರು 01.08.2019ರಿಂದ ಬೆಂಗಳೂರಿನ ಲಾ ವಿಂಗ್ಸ್‌ ಶೈಕ್ಷಣಿಕ ಟ್ರಸ್ಟ್‌ ಅಡಿ ಬರುವ ಬೆಂಗಳೂರು ಕಾನೂನು ಕಾಲೇಜಿನಲ್ಲಿ ಕಾನೂನು ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಮೊದಲಿಗೆ ಒಂದು ವರ್ಷ ಪೂರ್ಣಾವಧಿಗೆ ನೇಮಕವಾಗಿದ್ದು, ಆನಂತರ 2022 ರವರೆಗೆ ಅವರಿಗೆ ನಿರ್ದಿಷ್ಟ ವೇತನ ನಿಗದಿಪಡಿಸಿ ಸೇವೆ ವಿಸ್ತರಿಸಲಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪೂರ್ಣಾವಧಿ ಉದ್ಯೋಗಿಯಾಗಿ ನ್ಯಾ. ಶಿಂಧೆ ಅವರು ವೇತನ ಸಹಿತ ರಜೆ ಸೇರಿ ಎಲ್ಲಾ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಆಡಳಿತಾತ್ಮಕ ಕೆಲಸಗಳು, ರಾಷ್ಟ್ರೀಯ ಹಬ್ಬಗಳಲ್ಲಿ ಭಾಗಿಯಾಗಿರುವುದು, ಕಾಲೇಜು ಸಮಾರಂಭ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಹಾಗೂ ಪರೀಕ್ಷೆ ಮತ್ತು ಮೌಲ್ಯಮಾಪನ ಕೆಲಸಗಳಲ್ಲಿ ಭಾಗಿಯಾಗುವುದು ಕಡ್ಡಾಯವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ

ಕಾನೂನು ವಿಷಯದ ಪೂರ್ಣಾವಧಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ನ್ಯಾ. ಶಿಂಧೆ ಅವರು ಭಾರತೀಯ ವಕೀಲರ ಪರಿಷತ್‌ (ಬಿಸಿಐ) ನಿಯಮಗಳನ್ನು ಉಲ್ಲಂಘಿಸಿ, ಬಿಸಿಐ ಪಟ್ಟಿಯಲ್ಲಿ ತಮ್ಮ ಹೆಸರು ಉಳಿಸಿಕೊಂಡಿದ್ದಾರೆ. ಈ ಅವಧಿಯನ್ನು ಪ್ರಾಕ್ಟೀಸ್‌ಗೆ ಸೇರಿದ ಅವಧಿ ಎಂದು ಪರಿಗಣಿಸಲಾಗದು. 2019 ರಿಂದ 2022ರವರೆಗೆ ನ್ಯಾ.ಶಿಂಧೆ ಅವರು ವಕೀಲಿಕೆಯಿಂದ ಹೊರಗುಳಿದಿದ್ದರು ಎಂದು ಹೇಳಲಾಗಿದೆ.

ಹೀಗಾಗಿ, 27.11.2024ರಂದು ಶಿಂಧೆ ಅವರ ನೇಮಕ ಮಾಡಿರುವ ಆದೇಶವನ್ನು ವಜಾಗೊಳಿಸಬೇಕು. ಖಾಲಿಯಾಗುವ ಹುದ್ದೆ ನೇಮಕಾತಿಗೆ ಹೊಸದಾಗಿ ಅಧಿಸೂಚನೆ ಹೊರಡಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com