[ನ್ಯಾಯಮೂರ್ತಿಗಳ ನೇಮಕಾತಿ] ಕೊಲಿಜಿಯಂಗೆ ನೆರವಾಗಲು ಶೋಧನಾ ಸಮಿತಿಗೆ ಸರ್ಕಾರದ ಸದಸ್ಯರ ಸೇರ್ಪಡೆಗೆ ಸಲಹೆ: ರಿಜಿಜು

ಇಂಥ ಒಂದು ವಿಧಾನವು ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಅನುವು ಮಾಡುತ್ತದೆ ಎಂದು ರಿಜಿಜು ಹೇಳಿದ್ದಾರೆ.
Kiren Rijiju (Arbitrator's Handbook)
Kiren Rijiju (Arbitrator's Handbook)
Published on

ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಕೊಲಿಜಿಯಂಗಳಿಗೆ ನೆರವಾಗಲು ಶೋಧನಾ ಮತ್ತು ಮೌಲ್ಯಮಾಪನ ಸಮಿತಿಯಲ್ಲಿ ಸರ್ಕಾರದ ಸದಸ್ಯರನ್ನು ಒಳಗೊಳ್ಳಲು ಸಲಹೆ ಮಾಡಲಾಗಿತ್ತು ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಗುರುವಾರ ಬಹಿರಂಗಪಡಿಸಿದರು.

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಮಟ್ಟದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಶೋಧನಾ ಮತ್ತು ಮೌಲ್ಯಮಾಪನ ಸಮಿತಿಗೆ ನೀಡಲಾಗಿರುತ್ತದೆ. ಇದನ್ನು ಆಧರಿಸಿ ಸಂಬಂಧಿತ ಕೊಲಿಜಿಯಂಗಳು ಶಿಫಾರಸ್ಸು ಮಾಡಲಾಗುತ್ತದೆ ಎಂದು ರಿಜಿಜು ವಿವರಿಸಿದ್ದಾರೆ.

ಈ ಪ್ರಸ್ತಾವವನ್ನು 2023ರ ಜನವರಿ 6ರಂದು ಪತ್ರದ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿತ್ತು. ನ್ಯಾಯಮೂರ್ತಿಗಳ ನೇಮಕಾತಿಗೆ ಮೆಮೊರಂಡಂ ಆಫ್‌ ಪ್ರಾಕ್ಟೀಸ್‌ ಅಂತಿಮಗೊಳಿಸಲು ಹೇಳಿತ್ತು. ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಶೋಧನಾ ಮತ್ತು ಮೌಲ್ಯಮಾಪನ ಸಮಿತಿಯು ಭಾರತ ಸರ್ಕಾರದಿಂದ ನಾಮನಿರ್ದೇಶನಗೊಂಡ ಪ್ರತಿನಿಧಿಯನ್ನು ಒಳಗೊಂಡಿರಬೇಕು ಎಂದು ಇತರೆ ವಿಚಾರಗಳ ಜೊತೆಗೆ ಸರ್ಕಾರವು ಸಲಹೆ ಮಾಡಿತ್ತು.

“ಇದು ಸೇರಿದಂತೆ ಸೂಚಿಸಲಾಗಿದ್ದ ಇತರ ಕ್ರಮಗಳು ಸಾಂವಿಧಾನಿಕ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳ ನೇಮಕಕ್ಕೆ ಹೆಚ್ಚು ಪಾರದರ್ಶಕ, ಜವಾಬ್ದಾರಿಯುತ ಮತ್ತು ತ್ವರಿತ ಕಾರ್ಯವಿಧಾನಕ್ಕೆ ದಾರಿ ಮಾಡಿಕೊಡುತ್ತದೆ” ಎಂದು ರಿಜಿಜು ಪ್ರತಿಕ್ರಿಯಿಸಿದ್ದಾರೆ.

Also Read
ಕೊಲಿಜಿಯಂ ಅನುಮತಿಸದ ಹೆಸರುಗಳನ್ನು ಪರಿಗಣಿಸಲು ಹೇಳುತ್ತಿರುವ ಕೇಂದ್ರ ಸರ್ಕಾರ: ಸುಪ್ರೀಂ ಕೋರ್ಟ್‌ ತೀವ್ರ ಬೇಸರ

ಕೊಲಿಜಿಯಂಗೆ ನೇರವಾಗಿ ತನ್ನ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಲು ಸರ್ಕಾರ ಕೇಳಿದೆ ಎಂಬ ಮಾಧ್ಯಮ ವರದಿಯನ್ನು ಕಳೆದ ವಾರ ರಿಜಿಜು ಅವರು ಅಲ್ಲಗಳೆದಿದ್ದರು.

“ಅದು ಹೇಗೋ ಈ ಪತ್ರ ಹೊರಬಂದಿದ್ದು, ಕೊಲಿಜಿಯಂನಲ್ಲಿ ತನ್ನ ಸದಸ್ಯರನ್ನು ಹೊಂದಲು ಸರ್ಕಾರ ಬಯಸಿದೆ ಎಂದು ತಲೆಬರಹ ನೀಡಲಾಗಿತ್ತು. ಸಿಜೆಐ ಮತ್ತು ಇತರೆ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುವುದೇ ಕೊಲಿಜಿಯಂ. ಇದರಲ್ಲಿ ನಾನು ಹೇಗೆ ಒಬ್ಬರನ್ನು ಸೇರ್ಪಡೆ ಮಾಡಲು ಸಾಧ್ಯ? ಈ ವಿಚಾರದ ಕುರಿತು ವ್ಯಾಪಕ ಚರ್ಚೆಯಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸಂದರ್ಶನವನ್ನೂ ನೀಡಿದ್ದಾರೆ. ದೊಡ್ಡ ವಕೀಲರೊಬ್ಬರು ಪ್ರತಿಕ್ರಿಯಿಸಿದ್ದಾರೆ” ಎಂದು ಹೇಳಿದ್ದರು.

Kannada Bar & Bench
kannada.barandbench.com